ಮನೋರಂಜನೆ

ರಜನಿಕಾಂತ್‌ರ ‘ಲಿಂಗ’ಕ್ಕೆ ಬೆಂಗಳೂರಿನಲ್ಲಿ ಅದ್ಭುತ ಪ್ರತಿಕ್ರಿಯೆ

Pinterest LinkedIn Tumblr

m1

ರಜನಿಕಾಂತ್‌ರ ‘ಲಿಂಗ’ ಸಿನಿಮಾಕ್ಕೆ ಬೆಂಗಳೂರಿನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ನಸುಕಿನಲ್ಲೇ ಚಿತ್ರಪ್ರದರ್ಶನ ನಡೆದಿರುವುದು ರಜನಿ ಜಾದೂವಿಗೆ ಉದಾಹರಣೆಯಂತಿದೆ.

ಸೂಪರ್‌ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಲಿಂಗ’ ಚಿತ್ರ ಶುಕ್ರವಾರ ತೆರೆಗೆ ಬಂದಿದೆ. ರಜನಿ ಅವರ 65ನೇ ಹುಟ್ಟುಹಬ್ಬದ ಕಾಣಿಕೆಯಾಗಿ ಚಿತ್ರ ಬಿಡುಗಡೆಯಾಗಿರುವುದು ಅಭಿಮಾನಿಗಳಿಗೆ ಹಬ್ಬವೇ ಸರಿ. ಚಿತ್ರವು ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಂಡಿದೆ. ತೆಲುಗು ಮತ್ತು ಹಿಂದಿಗಾಗಿ ಚಿತ್ರವನ್ನು ಬಹುತೇಕ ಡಬ್ಬಿಂಗ್ ಮಾಡಲಾಗಿದ್ದು, ಕೆಲವು ಭಾಗಗಳನ್ನು ಮಾತ್ರ ಚಿತ್ರೀಕರಿಸಲಾಗಿದೆ.

ಭಾರತದಲ್ಲಿ ಅಂದಾಜು ಎರಡೂವರೆ ಸಾವಿರ ಚಿತ್ರಮಂದಿರಗಳಲ್ಲಿ ‘ಲಿಂಗ’ ಭರ್ಜರಿ ಓಪನಿಂಗ್ ಪಡೆದಿದೆ. ಭಾರತದಾಚೆಯೂ ಸಾವಿರಕ್ಕೂ ಹೆಚ್ಚು ಪರದೆಗಳ ಮೇಲೆ ಮಿಂಚುತ್ತಿದ್ದಾರೆ ರಜನಿ. ಅಮೆರಿಕ, ಕೆನಡದಲ್ಲಿ ರಜನಿ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಇನ್ನು ಬೆಂಗಳೂರಿನ 70 ಚಿತ್ರಮಂದಿರಗಳು ಸೇರಿ, ಕರ್ನಾಟಕದಾದ್ಯಂತ 200 ಪರದೆಗಳಲ್ಲಿ ‘ಲಿಂಗ’ ಪ್ರದರ್ಶನವಾಗುತ್ತಿದೆ. ಬೆಂಗಳೂರಿನ ಬಹುತೇಕ ಮಾಲ್‌ಗಳು ‘ಲಿಂಗ’ಕ್ಕೆ ಮೀಸಲಾಗಿವೆ. ಐನಾಕ್ಸ್‌, ಪಿವಿಆರ್‌ಗಳಲ್ಲಿ ಚಿತ್ರ ಶುಕ್ರವಾರ ಇಪ್ಪತ್ತಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಕನ್ನಡದ ಸ್ಟಾರ್ ನಟರ ಚಿತ್ರಗಳಿಗೇ ರಾಜ್ಯದಲ್ಲಿ ಕೆಲವೊಮ್ಮೆ ಇಷ್ಟೊಂದು ಚಿತ್ರಮಂದಿರಗಳು ಸಿಗದಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ‘ಲಿಂಗ’ ಇಷ್ಟೊಂದು ಚಿತ್ರಮಂದಿರಗಳನ್ನು ಆವರಿಸಿಕೊಂಡಿದೆ ಎಂದರೆ ಅಭಿಮಾನಿಗಳಲ್ಲಿ ‘ರಜನಿ ಕ್ರೇಜ್’ ಎಷ್ಟಿದೆ ಎಂಬುದು ತಿಳಿಯುತ್ತದೆ.

ಕೆಲವು ಪರದೆಗಳಲ್ಲಿ ದಿನಕ್ಕೆ ಐದೈದು ಪ್ರದರ್ಶನ ನಿಗದಿಯಾಗಿದೆ. ‘ಲಿಂಗ’ ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ರಾಕ್‌ಲೈನ್ ಮಾಲ್‌ನ ಕಾರ್ನಿವಲ್ ಸಿನಿಮಾಸ್‌ನಲ್ಲಿ ಬೆಳಿಗ್ಗೆ 5.15ರಿಂದಲೇ ಪ್ರದರ್ಶನ ಆರಂಭವಾಗಿದೆ. ಆದರೆ ಈ ಪ್ರದರ್ಶನಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್‌ಗಳು ಲಭ್ಯವಿರಲಿಲ್ಲ. ಇನ್ನು ಬಹುತೇಕ ಚಿತ್ರಮಂದಿರಗಳಲ್ಲಿ ಮಂಗಳವಾರದವರೆಗೂ ಟಿಕೆಟ್ ಬುಕ್ ಆಗಿವೆ.
ಬೆಂಗಳೂರಿನ ಹಲವು ಚಿತ್ರಮಂದಿರದ ಎದುರು ಅಭಿಮಾನಿಗಳು ಟಿಕೆಟ್ ಕೊಳ್ಳಲು ಸಾಲುಗಟ್ಟಿ ನಿಂತಿರುವುದು, ಕೆಲವೆಡೆ ಕೇಕ್ ಕತ್ತರಿಸಿ ರಜನಿ ಹುಟ್ಟಿದ ಹಬ್ಬವನ್ನು ಆಚರಿಸುತ್ತಿದ್ದುದು, ರಜನಿ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು.

ವಿವಾದ ಮತ್ತು ಪ್ರಚಾರ
ಚಿತ್ರ ಬಿಡುಗಡೆ ಸಮೀಪಿಸುತ್ತಿದ್ದಂತೆ ಕೃತಿಚೌರ್ಯದಂತಹ ವಿವಾದಗಳೂ ಚಿತ್ರದೊಂದಿಗೆ ತಳಕು ಹಾಕಿಕೊಂಡವು. ಅದರಿಂದಾಗಿ ಚಿತ್ರಕ್ಕೆ ಇನ್ನೂ ಹೆಚ್ಚಿನ ಪ್ರಚಾರ ದೊರೆತಿದೆ ಎಂಬುದೂ ನಿಜವೇ. ಈ ಕುರಿತು ಪ್ರತಿಕ್ರಿಯಿಸುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ‘ಚಿತ್ರವೆಂದಮೇಲೆ ಇವೆಲ್ಲ ಇದ್ದಿದ್ದೇ. ಇವೆಲ್ಲದರ ನಡುವೆಯೇ ಚಿತ್ರ ಭರ್ಜರಿ ಆರಂಭ ಪಡೆದಿದೆ. ಚಿತ್ರರಂಗದ ಕೆಲವು ಅತೃಪ್ತರು ಇಂತಹ ವಿವಾದ ಸೃಷ್ಟಿಸುತ್ತಾರೆ. ಕೆಲವರು ನಿರ್ದೇಶಕರಾಗಬೇಕು, ನಿರ್ಮಾಪಕರಾಗಬೇಕು, ಚಿತ್ರ ಸಾಹಿತಿ ಆಗಬೇಕು ಎಂದೆಲ್ಲ ಅಂದುಕೊಂಡು ಬಂದಿರುತ್ತಾರೆ. ಆದರೆ ನ್ಯಾಯ ಮಾರ್ಗದಲ್ಲಿ ಮೇಲೆ ಬರುವುದು ಕಷ್ಟವಾದಾಗ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹೆಸರು, ಹಣ ಮಾಡಿಬಿಡಬೇಕೆಂಬ ಹಂಬಲದಿಂದ ಇಂತಹ ವಿವಾದವನ್ನು ಹುಟ್ಟಿಸುತ್ತಾರೆ’ ಎನ್ನುತ್ತಾರೆ.

ಇವೆಲ್ಲ ಮುಗಿದವು ಎನ್ನುವಾಗಲೇ ಚಿತ್ರ ಬಿಡುಗಡೆಯ ಹಿಂದಿನ ದಿನ ಮತ್ತೊಂದು ಸುದ್ದಿ ಹಬ್ಬಿತು. ಕರ್ನಾಟಕದಲ್ಲಿ ‘ಲಿಂಗ’ ಯಾಕೆ ಚಿತ್ರೀಕರಿಸಲಾಗಿದೆ, ಚಿತ್ರಕ್ಕೂ ಕಾವೇರಿ ನದಿಗೂ ಏನಾದರೂ ಸಂಬಂಧ ಇದೆಯೇ, ಚಿತ್ರದ ಹಿನ್ನೆಲೆ ಏನು ಎಂಬ ಗಾಳಿಸುದ್ದಿ ವಾಹಿನಿಗಳಲ್ಲಿ ಹರಿದಾಡಿತ್ತು. ಅದಕ್ಕೂ ರಾಕ್‌ಲೈನ್ ಅವರ ಪ್ರತಿಕ್ರಿಯೆ; ‘ನಾನು ಬೇರೆ ಭಾಷೆಗಳ ಚಿತ್ರ ನಿರ್ಮಾಣ ಮಾಡುವಾಗ ಬಹುತೇಕ ಸಂದರ್ಭದಲ್ಲಿ ಕಥೆಗೆ ಸೂಕ್ತವಾದ ಸ್ಥಳ ಕರ್ನಾಟಕದಲ್ಲಿದೆ ಎಂದಾದರೆ ಇಲ್ಲಿಯೇ ಚಿತ್ರೀಕರಿಸಲು ಆದ್ಯತೆ ನೀಡುತ್ತೇನೆ. ಈ ಚಿತ್ರದಲ್ಲೂ ಅಂಥ ಅವಕಾಶ ಬಂತು. ಇನ್ನು ಕಾವೇರಿಗೂ ಚಿತ್ರಕ್ಕೂ ಸಂಬಂಧ ಇದೆಯೇ ಎಂಬುದು ಊಹೆ. ಊಹೆ ಮಾಡುವುದೂ ತಪ್ಪಲ್ಲವಲ್ಲ. ನೀರು, ಅಣೆಕಟ್ಟು ಕಂಡಾಗ ಕೆಲವರಿಗೆ ಇಂತಹ ಅನುಮಾನ ಬಂದಿರಬಹುದು. ಆದರೆ ಅದಕ್ಕೆ ನಾನು ಏನೂ ಪ್ರತಿಕ್ರಿಯಿಸುವುದಿಲ್ಲ. ಚಿತ್ರ ತೆರೆಗೆ ಬಂದಿದೆ. ವಿವಾದ ಹುಟ್ಟಿಸುವವರಿಗೆ ಉತ್ತರವೂ ಸಿಕ್ಕಿರುತ್ತದೆ ಅಂದುಕೊಳ್ಳುತ್ತೇನೆ. ಒಟ್ಟಿನಲ್ಲಿ ಯಾರ ಊಹೆಗೂ ನಿಲುಕದ ಕಥೆ ಎಂಬುದಂತೂ ನಿಜ’.

Write A Comment