ಕರ್ನಾಟಕ

ವಸತಿ ರಹಿತರಿಗೆ ಮನೆ: ₨ 20 ಸಾವಿರ ಕೋಟಿ ಯೋಜನೆ: ಅಂಬರೀಷ್

Pinterest LinkedIn Tumblr

pvec13-assembly

ಸುವರ್ಣಸೌಧ (ಬೆಳಗಾವಿ):  ‘ಗುಡಿಸಲು ಮುಕ್ತ ಕರ್ನಾಟಕ’ ಯೋಜನೆ ಅಡಿಯಲ್ಲಿ ವಸತಿ ರಹಿತರಿಗೆ ಮನೆ­ಗಳನ್ನು ನೀಡುವು ದಕ್ಕಾಗಿ ₨ 20 ಸಾವಿರ ಕೋಟಿ ಅಂದಾಜಿನ ಯೋಜನೆ ಜಾರಿಗೆ ಚಿಂತಿಸಲಾಗಿದೆ ಎಂದು ವಸತಿ ಸಚಿವ ಎಚ್.ಎಂ. ಅಂಬರೀಷ್ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಬಿ.ಜೆ ಪುಟ್ಟಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಸತಿ ರಹಿತರಿಗೆ ಮನೆಗಳನ್ನು ನೀಡುವುದಕ್ಕಾಗಿ ರಾಜ್ಯದಲ್ಲಿ ಗುಡಿಸಲು ವಾಸಿಗಳ ಮತ್ತು ಮನೆ ರಹಿತರ ಸಮೀಕ್ಷೆಯನ್ನು ಹೊಸದಾಗಿ ನಡೆಸಬೇಕಾಗಿದೆ ಎಂದರು.
ಸಮೀಕ್ಷೆ: 2003– -04 ಮತ್ತು 2009–-10ರಲ್ಲಿ ನಡೆ ಸಿದ ಸಮೀಕ್ಷೆ ಪ್ರಕಾರ, 12,99,789 ವಸತಿ ರಹಿತರು ಮತ್ತು 10,48,706 ಗುಡಿಸಲು ವಾಸಿಗಳಿದ್ದಾರೆ.

ಈಗ ಮತ್ತೆ ಹೊಸದಾಗಿ ಸಮೀಕ್ಷೆ ನಡೆಸಲು ಕನಿಷ್ಠ ಒಂದು ವರ್ಷ  ಬೇಕು. ಅಧಿಕಾರಿಗಳನ್ನು ಪ್ರತಿ ಊರಿಗೂ ಕಳುಹಿಸಿ ಪ್ರತಿ ಕುಟುಂ ಬವನ್ನು ಸಂಪರ್ಕಿಸಿ, ಅವರು ವಾಸಿಸುತ್ತಿರುವ ಮನೆಯ ಹಾಗೂ ಹೊಂದಿರುವ ಆಸ್ತಿಯ ಚಿತ್ರ ತೆಗೆದು, ವಿಡಿಯೊ ಚಿತ್ರೀಕರಣ ಮಾಡಿ ವಸತಿ ರಹಿತ ಕುಟುಂಬ ಗಳನ್ನು ಪತ್ತೆ ಮಾಡಲಾಗುವುದು ಎಂದು ಅವರು ಹೇಳಿದರು.

25.86 ಲಕ್ಷ  ಮನೆ ನಿರ್ಮಾಣ: ರಾಜ್ಯದಲ್ಲಿ 2003ರಿಂದ ಇಲ್ಲಿ ವರೆಗೆ 25,86,638 ಮನೆಗಳನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷ 3 ಲಕ್ಷ ಮನೆ ನಿರ್ಮಿಸುವ ಗುರಿ ಇದೆ ಎಂದರು.

nicvwe

ಮೀಸಲಾತಿಗೆ ಒತ್ತಾಯ: ಬಡವರಿಗೆ ಮನೆ ಹಂಚುವಾಗ ಇತರ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸುವಂತೆ ಬಿಜೆಪಿ ಸದಸ್ಯರು ಸಚಿವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಂಬರೀಷ್, ‘ಸದ್ಯ ಸಾಮಾನ್ಯ ವರ್ಗದಲ್ಲಿ ಶೇ 50, ಪರಿಶಿಷ್ಟ ಜಾತಿಯವರಿಗೆ ಶೇ 30, ಪರಿಶಿಷ್ಟ ಪಂಗಡ ಶೇ 10 ಮತ್ತು ಅಲ್ಪಸಂಖ್ಯಾತರಿಗೆ ಶೇ 10ರಷ್ಟು ಪ್ರಮಾಣದಲ್ಲಿ ಮನೆಗಳನ್ನು ಹಂಚಲಾಗುತ್ತಿದೆ. ಇತರ ಹಿಂದುಳಿದ ವರ್ಗದವರು ಸಾಮಾನ್ಯ ವರ್ಗದಲ್ಲೇ ಬರುತ್ತಾರೆ.  ಶಿಕ್ಷಣ ಇಲಾಖೆಯ ಯೋಜನೆ ಹೊರತಾಗಿ ಸರ್ಕಾರದ ಇತರ ಯೋಜನೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇಲ್ಲ’ ಎಂದು ಹೇಳಿದರು.

ಪರಿಶೀಲನೆ: ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ವಿಧಾನಪರಿಷತ್ತಿನ ಸದಸ್ಯರನ್ನು ಪರಿಗಣಿಸಿ ಎಂದು ಬಿಜೆಪಿಯ ಗೋ. ಮಧುಸೂದನ್ ಸಚಿವರನ್ನು ಒತ್ತಾಯಿಸಿದರು. ‘ಈ ಹಿಂದೆ ಆಶ್ರಯ ಸಮಿತಿಯಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಅವಕಾಶ ಇತ್ತು. ಈಗ ಅದನ್ನು ತೆಗೆದಿದ್ದಾರೆ. ನಾವೂ ಜನರ ಪ್ರತಿನಿ ಧಿಗಳೇ. ಅವರ ಸೇವೆ ಮಾಡುವ ಅವಕಾಶ ನಮಗೂ ನೀಡಿ’ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.

ನಾನು ಓಡಿಸಿಲ್ಲ:  ‘ವಸತಿ ಯೋಜನೆಗಳಿಗೆ ಸಂಬಂಧಿಸಿದ ಜಾಗೃತ ಸಮಿತಿಯಲ್ಲಿ ವಿಧಾನ ಪರಿಷತ್ ಸದಸ್ಯರಿಗೂ ಅವಕಾಶ ಇದೆ. ಆಶ್ರಯ ಸಮಿತಿಯಿಂದ ನಿಮ್ಮನ್ನು ನಾನು ಓಡಿಸಿಲ್ಲ. ನಾನು ವಸತಿ ಸಚಿವನಾಗುವುದಕ್ಕೆ ಮುಂಚೆಯೇ ಈ ವ್ಯವಸ್ಥೆ ಇದೆ. ಈಗ ಮತ್ತೆ ಸಮಿತಿಗೆ ಸೇರಿಸಿಕೊಳ್ಳಲು ಕಾನೂನಿನ ತೊಡಕಿದೆ’ ಎಂದು ಅಂಬರೀಷ್ ಹೇಳಿದರು.

ತಕ್ಷಣ ಪ್ರತಿಕ್ರಿಯಿಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ‘ಈ ಹಿಂದೆ ನಾನು ಸಮಿತಿಯಲ್ಲಿ ಉಪಾಧ್ಯಕ್ಷನಾಗಿದ್ದೆ’ ಎಂದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಈಶ್ವರಪ್ಪ, ‘ಸರ್ಕಾರವೇ ನಿಮ್ಮ ಕೈಯಲ್ಲಿದೆ. ಮನಸ್ಸು ಮಾಡಿದರೆ ಕಾನೂನಿಗೆ ತಿದ್ದುಪಡಿ ತರಬಹುದು  ಎಂದರು.

Write A Comment