ಕರ್ನಾಟಕ

ಹುತಾತ್ಮ ಸೈನಿಕರ ಸ್ಮರಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ: ರಾಜ್ಯಪಾಲ ವಜುಭಾಯಿ ವಾಲಾ

Pinterest LinkedIn Tumblr

pvec6decsFlag day 07_0

ಬೆಂಗಳೂರು: ‘ದೇಶದ ರಕ್ಷಣೆಗೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ಹುತಾತ್ಮ ಸೈನಿಕರನ್ನು ಸ್ಮರಿಸಿ, ಅವರಿಗೆ ಗೌರವ ಸಲ್ಲಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಇಲಾ­ಖೆಯು ರಾಜಭವನದಲ್ಲಿ ಶುಕ್ರವಾರ ಆಯೋ­ಜಿಸಿದ್ದ ‘ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸೈನಿಕರು ದೇಶದ ರಕ್ಷಣೆಗಾಗಿ ಯುದ್ಧವನ್ನು ಮಾತ್ರ ಮಾಡದೆ, ದೇಶದಲ್ಲಾಗುವ ಪ್ರಾಕೃತಿಕ ವಿಕೋಪ, ಗಲಭೆಗಳನ್ನು ನಿಯಂತ್ರಿಸುವಲ್ಲಿಯೂ ಸೇವೆ ಸಲ್ಲಿಸುತ್ತಾರೆ. ಕೇದಾರನಾಥ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆದ ಪ್ರಾಕೃತಿಕ ವಿಕೋಪದಲ್ಲಿ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ದೇಶ­ವಾಸಿಗಳನ್ನು ರಕ್ಷಿಸಿದ್ದಾರೆ’ ಎಂದು ಸ್ಮರಿಸಿದರು.

‘ಸೈನಿಕರು ಯಾವುದೇ ಅಪೇಕ್ಷೆಯಿಲ್ಲದೆ, ಸನ್ಮಾನಕ್ಕಾಗಿ ಅಥವಾ ಪ್ರಶಂಸೆಗಾಗಿ ದೇಶದ ರಕ್ಷಣೆ ಅಥವಾ ದೇಶ ಸೇವೆ ಮಾಡುವುದಿಲ್ಲ. ಅವರು  ಧೈರ್ಯದಿಂದ ಮಾತೃಭೂಮಿಗಾಗಿ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ಅವರ ಸೇವೆಯನ್ನು ನೆನೆದು ಅವರಿಗೆ ಸನ್ಮಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

ಗೃಹ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ‘ದೇಶವನ್ನು ಉಗ್ರರಿಂದ, ಶತ್ರುಗಳಿಂದ ರಕ್ಷಿಸಲು ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಾರೆ. ಗಡಿಭದ್ರತೆಗಾಗಿ ದಿನದ 24 ಗಂಟೆಗಳು ಮತ್ತು ವರ್ಷದ 365 ದಿನಗಳೂ ಕೆಲಸ ಮಾಡುತ್ತಾರೆ’ ಎಂದರು.

‘ರಾಜ್ಯ ಸರ್ಕಾರವು ಮಾಜಿ ಸೈನಿಕರ ಏಳಿಗೆಗೆ, ಕಲ್ಯಾಣಕ್ಕೆ ಈಗಾಗಲೇ ಅನೇಕ ಯೋಜನೆಗಳನ್ನು ರೂಪಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಯೋಜನೆಗಳನ್ನು ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.

ನಿವೃತ್ತ ಮೇಜರ್‌ ಜನರಲ್‌ ಕೆ.ಎಸ್‌.ಕುಂಬಾರ, ‘ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಸೈನಿಕರ ಕಲ್ಯಾಣಕ್ಕೆ ₨ 20 ಕೋಟಿ ಹಣವನ್ನು ಮೀಸಲಿಡ­ಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ಹಣವನ್ನು ಮೀಸಲಿಡಲಾಗಿದೆ. ಹೀಗಾಗಿ,  ರಾಜ್ಯ ಸರ್ಕಾರವು ಸೈನಿಕರ ಕಲ್ಯಾಣಕ್ಕೆ ಮತ್ತು ಪುನರ್ವ­ಸತಿಗೆ ಹೆಚ್ಚಿನ ಹಣವನ್ನು ಮೀಸಲಿಡ­ಬೇಕಾಗಿದೆ’ ಎಂದು ಒತ್ತಾಯಿಸಿದರು. ಕಾರ್ಯ­ಕ್ರಮ­ದಲ್ಲಿ ಧ್ವಜ ದಿನದ ವಿಶೇಷ ಸಾಂಕೇತಿಕ ಮತ್ತು ವಾಹನ ಧ್ವಜಗಳನ್ನು ಬಿಡುಗಡೆ ಮಾಡಲಾಯಿತು. ಯುದ್ಧದಂತಹ ಕಾರ್ಯಾಚರಣೆಯಲ್ಲಿ ಗಾಯಗೊಂಡ ಹಾಗೂ ವೀರಮರಣವನ್ನಪ್ಪಿದ್ದ ಸೈನಿಕರ ಕುಟುಂಬ ವರ್ಗದವರಿಗೆ ನಗದು ಅನುದಾನವನ್ನು ವಿತರಿಸಲಾಯಿತು.

‘ಶಾಂತಿಯುತ ಪ್ರತಿಭಟನೆಗೆ ವಿರೋಧವಿಲ್ಲ’
‘ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಪಕ್ಷ ಪ್ರತಿ­ಭಟನೆ ನಡೆಸಲು ಉದ್ದೇಶಿಸಿರುವುದು ಗಮನಕ್ಕೆ ಬಂದಿದೆ. ಆದರೆ, ಪ್ರತಿಭಟನೆಯನ್ನು  ಶಾಂತಿ­ಯುತವಾಗಿ, ಸಾರ್ವಜನಿಕರಿಗೆ ತೊಂದರೆ­ಯಾಗದ ರೀತಿಯಲ್ಲಿ ಮಾಡಿದರೆ ತೊಂದರೆ­ಯಿಲ್ಲ’ ಎಂದು ಕಾರ್ಯಕ್ರಮದ ನಂತರ ಸಚಿವ ಕೆ.ಜೆ.ಜಾರ್ಜ್‌ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

‘ಎಂಇಎಸ್‌ ಮಹಾಮೇಳಾವವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರು­ತ್ತಿದೆ. ಅದರಲ್ಲಿ ಹೊಸದೇನೂ ಇಲ್ಲ. ಅನು­ಮತಿ ನೀಡುವುದು ಬಿಡುವುದು ಅಲ್ಲಿನ ಅಧಿಕಾರಿ­ಗಳಿಗೆ ಬಿಟ್ಟ ವಿಚಾರವಾಗಿದೆ’ ಎಂದರು.
‘ಡಿಸೆಂಬರ್‌ ತಿಂಗಳಿನಲ್ಲಿ ಮಹಿಳಾ ಮತ್ತು ಮಕ್ಕಳ ಜಾಗೃತಿ ಮಾಸಾಚರಣೆಯನ್ನು ಆಚರಿಸಲಾಗುವುದು’ ಎಂದು ಹೇಳಿದರು.
‘ಪೊಲೀಸ್‌ ಪದಕ ಪ್ರದಾನದಲ್ಲಿ ಹಿರಿಯ ಅಧಿಕಾರಿಗಳು ಪಟ್ಟಿ ತಯಾರಿಸಿ ನೀಡಿರುವುದಕ್ಕೆ ಸಹಿ ಮಾಡಿದ್ದೇನೆ ಹೊರತು ಇದರಲ್ಲಿ ನನ್ನ ಹಸ್ತಕ್ಷೇಪವೇನೂ ಇಲ್ಲ’ ಎಂದರು.

Write A Comment