ಕರ್ನಾಟಕ

ಸಾಮೂಹಿಕ ವಿವಾಹದಲ್ಲಿ ಸಚಿವ ಆಂಜನೇಯ ಪುತ್ರಿ ಮದುವೆ

Pinterest LinkedIn Tumblr

Samuhika-vivaaha

ಬೆಂಗಳೂರು, ನ.16: ಸಂಪತ್ತಿನ ಪ್ರದರ್ಶನಕ್ಕೆ ಹಾಗೂ ಪ್ರತಿಷ್ಠೆಗೆ ವೇದಿಕೆಯಾಗುವ ಮಂತ್ರಿ ಮಹೋದಯರ ಮಕ್ಕಳ ಮದುವೆಗಳು ಸಾಮಾನ್ಯವಾದರೂ ವಿಭಿನ್ನ ರೀತಿಯಲ್ಲಿ ರಾಜ್ಯದ ಮಂತ್ರಿಯೊಬ್ಬರ ಮಗಳ ವಿವಾಹ ನಡೆಯಲಿದೆ. ಏನಿದು ಎಂದು ಅಚ್ಚರಿ ಪಡಬೇಡಿ. ಇದೇ 19 ರಂದು ಚಿತ್ರದುರ್ಗದ ಹೊಳಲ್ಕೆರೆಯ ಶ್ರೀ ಕೋಟ್ರನಂಜಪ್ಪ ಕಾಲೇಜು ಮೈದಾನದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಸಚಿವ ಆಂಜನೇಯ ಅವರ ಪುತ್ರಿ ಅನುಪಮ ಸರಳ ಮದುವೆಯ ಮೂಲಕ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಇದೇ ವೇದಿಕೆಯಲ್ಲಿ ಸಚಿವರ ಮಗಳ ಮದುವೆಯ ಜೊತೆಗೆ 96 ಕಡು ಬಡತನದಿಂದ ಬಂದ ಕುಟುಂಬಗಳ ವಧು-ವರರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸಚಿವರು ತಮ್ಮ ಮಗಳ ಮದುವೆಗೆ ಮೀಸಲಿಟ್ಟ ಹಣದಲ್ಲೇ ಈ ಎಲ್ಲಾ ಜೋಡಿಗಳಿಗೂ ವಸ್ತ್ರ , ತಾಳಿ ಸೇರಿದಂತೆ ಮದುವೆಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಮದುವೆಯಾಗುವ ಜೋಡಿಯ ಜೀವನಾಧಾರಕ್ಕಾಗಿ ಒಂದು ಹಸು ಹಾಗೂ ಒಂದು ತೆಂಗಿನ ಗಿಡ ನೀಡುತ್ತಿದ್ದಾರೆ.

ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಹಿರಿಯ ಪುತ್ರಿಯಾದ ಅನುಪಮಾ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಎಂ.ಶೇಖರಪ್ಪ ಅವರ ಹಿರಿಯ ಮಗ ಶಾಶ್ವತ್‍ನೊಂದಿಗೆ ಹಸೆ ಮಣೆ ಏರಲಿದ್ದಾರೆ. ಅನುಪಮಾ ಈ ರೀತಿ ಸರಳ ವಿವಾಹವಾಗಲು ಕಾರಣ ತಮ್ಮ ತಂದೆ ಸಚಿವ ರಾಗಲು ಹಾರೈಸಿದ ಸ್ವಕ್ಷೇತ್ರದ ಜನತೆಗೆ ಕೊಡುಗೆ ನೀಡಬೇಕು ಹಾಗೂ ದುಂದು ವೆಚ್ಚದ ಮದುವೆ ಯಾಗಬಾರದು ಎಂಬುದಕ್ಕಾಗಿ ಈ ಆಲೋಚನೆ ಮಾಡಿದ್ದಾರೆ. ತಾವು ಸರಳ ಮದುವೆಯಾಗಬೇಕೆಂದಿದ್ದರೆ ದೇವಾಲಯದಲ್ಲಿ ಮದುವೆ ಯಾಗ ಬಹುದಿತ್ತು. ಆದರೆ ಇದರಿಂದ ಕ್ಷೇತ್ರದ ಯುವಜನತೆಗೆ ಯಾವ ಕೊಡುಗೆಯನ್ನೂ ನೀಡಿದಂತಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದೇನೆ. ಇದು ನನಗೆ ಹೆಚ್ಚು ಸಂತೋಷ ಕೊಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯಾಗಿ ರುವ ಶಾಶ್ವತ್ ಈ ರೀತಿ ಸರಳ ಮದುವೆಯಾಗಲು ಒಪ್ಪಿಸುವ ಗೋಜು ಬರಲಿಲ್ಲವಂತೆ. ಏಕೆಂದರೆ ಇಂತಹ ಮದುವೆಗೆ ಶಾಶ್ವತ್ ಸ್ವಯಂಪ್ರೇರಿತರಾಗಿ ಸಮ್ಮತಿಸಿದರಂತೆ. ಪತ್ರಿಕೋದ್ಯಮ ಪದವೀಧರೆಯಾದ ಅನುಪಮಾ ಆಲೋಚನೆಗೆ ಸಚಿವ ಆಂಜನೇಯ ಅವರು ಬೆಂಬಲ ನೀಡುತ್ತಿದ್ದು, ಈ ಹಿಂದೆ ಸ್ವತಃ ಅವರ ಮದುವೆಯನ್ನು ಕಾಂಗ್ರೆಸ್ ಸಮಾವೇಶ ನಡೆಸಿ ಆ ವೇಳೆ ವೈವಾಹಿಕ ಜೀವನಕ್ಕೆ ಕಾಲಿಡಲು ಬಯಸಿದ್ದರಂತೆ. ಆದರೆ ಅವರ ತಾಯಿ ಒತ್ತಾಯದ ಹಿನ್ನೆಲೆಯಲ್ಲಿ ದಾವಣಗೆರೆಯ ಕಲ್ಯಾಣ ಮಂಟಪದಲ್ಲಿ ಎಲ್ಲರಂತೆ ವಿವಾಹ ಮಾಡಿಕೊಂಡಿದ್ದರು. ಹೀಗಾಗಿ ತಮ್ಮ ಮಗಳ ಮದುವೆ ಇಂದಿರಾ ಗಾಂಧಿಯವರ 97ನೇ ಜಯಂತಿಯಾದ ನ.19 ರಂದು ಬೆಳಗ್ಗೆ 10.30ಕ್ಕೆ 97 ಜೋಡಿಗಳ ಸಾಮೂ ಹಿಕ ವಿವಾಹ ನೆರವೇರಲಿದೆ. ಈ ಸಾಮೂಹಿಕ ವಿವಾಹಕ್ಕೆ ಸಿಎಂ ಸಿದ್ದರಾಮಯ್ಯ ಸಾಕ್ಷಿಯಾಗಲಿದ್ದಾರೆ.

Write A Comment