ಬೆಂಗಳೂರು, ಅ. 16: ಅತ್ಯಾಚಾರ ಆರೋಪ ಹೊತ್ತಿರುವ ಶಿವಮೊಗ್ಗ ಜಿಲ್ಲೆ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಶ್ರೆಗಳ ವಿಚಾರಣೆ ಗುರುವಾರವೂ ಮುಂದುವರಿದಿದ್ದು, 6 ಗಂಟೆಗಳ ಕಾಲ ಸಿಐಡಿ ಅಧಿಕಾರಿಗಳು ಸುಧೀರ್ಘ ವಿಚಾರಣೆ ನಡೆಸಿದ್ದಾರೆ.
ಇಂದು ಬೆಳಗ್ಗೆ ಸುಮಾರು 11: 30ಕ್ಕೆ ಶ್ರೀಗಳು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸಂಜೆ ಆರು ಗಂಟೆಯವರೆಗೂ ವಿಚಾರಣೆಗೆ ಎದುರಾದರು. ಅಲ್ಲದೆ, ಪ್ರಕರಣ ಸಂಬಂಧ ಮತ್ತಷ್ಟು ವಿಚಾರಣೆ ನಡೆಯಬೇಕಾದ ಅಗತ್ಯವಿದ್ದು, ನಾಳೆಯೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವೈದ್ಯಕೀಯ ಪರೀಕ್ಷೆ ಸಾಧ್ಯತೆ?: ಪ್ರಕರಣ ಸಂಬಂಧ ಈಗಾಗಲೇ ಸುಧೀರ್ಘ ವಿಚಾರಣೆ ನಡೆಯುತ್ತಿದ್ದು, ಸ್ವಾಮೀಜಿಗಳು ಅತ್ಯಾಚಾರ ನಡೆಸಿದ್ದಾರೆಯೇ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಾಮಕಥಾ ಕಲಾವಿದೆ ಪ್ರೇಮಲತಾ ಶಾಸ್ತ್ರಿ ಎಂಬವರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣವನ್ನು ಎದುರಿಸುತ್ತಿರುವ ಶ್ರೀಗಳನ್ನು ವಿಚಾರಣೆಗೆ ಒಳಪಡಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಯುತ್ತಿದ್ದು, ಶ್ರೀಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಬಾರದು ಎಂದು ನಗರ ಸಿವಿಲ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
