ಕರ್ನಾಟಕ

ಏಷ್ಯನ್ ಅರಬ್ ಉದ್ದಿಮೆಗಳ ಸಮಾವೇಶ: ಬಂಡವಾಳ ಹೂಡಿಕೆಗೆ ಕರ್ನಾಟಕ ನಂಬರ್ 1 ರಾಜ್ಯ

Pinterest LinkedIn Tumblr

samaveshaಬೆಂಗಳೂರು, ಅ.16: ಕರ್ನಾಟಕ ಭಾರತದಲ್ಲಿ ಬಂಡವಾಳ ಹೂಡಿಕೆಗೆ ನಂಬರ್ 1 ರಾಜ್ಯವಾಗುವ ಮೂಲಕ ಗುಜರಾತನ್ನು ಹಿಂದಿಕ್ಕಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರದ ಮಾಜಿ ಸಚಿವ ದಿಗ್ವಿಜಯ್‌ಸಿಂಗ್ ಹೇಳಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏಷ್ಯನ್ ಅರಬ್ ಛೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಉದ್ದಿಮೆಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಕರ್ನಾಟಕ ಬಂಡವಾಳ ಹೂಡಿಕೆಗೆ ನಂಬರ್ 1 ರಾಜ್ಯವಾಗಿದ್ದು, ಇಲ್ಲಿನ ವಾತಾವರಣ ಉದ್ದಿಮೆ ಸ್ನೇಹಿಯಾಗಿದೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಹೇಳಿದೆ. ಈ ಮೂಲಕ ಕರ್ನಾಟಕ ಗುಜರಾತನ್ನು ಮೀರಿಸಿರುವುದು ಸಂತಸದ ವಿಚಾರ. ಬಂಡವಾಳ ಹೂಡಿಕೆಗೆ ಅಗತ್ಯವಾದ ಉದ್ದಿಮೆ ಸ್ನೇಹಿ ವಾತಾವರಣ, ನೀತಿಗಳನ್ನು ಜಾರಿಗೊಳಿಸಿರುವ ರಾಜ್ಯ ಸರಕಾರ ವನ್ನು ಶ್ಲಾಘಿಸಿದರು.

ಭಾರತದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಿದ್ದು, ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚು ಬಂಡವಾಳ ಹೂಡುವ ಅಗತ್ಯವಿದೆ ಎಂದ ಅವರು, ಕೇಂದ್ರ ಸರಕಾರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಅಧ್ಯಾಪಕರ ಕೊರತೆ ಎದ್ದು ಕಾಣುತ್ತಿದೆ. ಇದನ್ನು ಸರಿದೂಗಿಸುವ ಅಗತ್ಯವಿದ್ದು, ವಿದೇಶದಿಂದ ಅತ್ಯು ತ್ತಮ ಅಧ್ಯಾಪಕರನ್ನು ಆಕರ್ಷಿಸುವ ಅಗತ್ಯವಿದೆ ಎಂದು ಹೇಳಿದರು. ಕೇಂದ್ರೀಯ ವಿಶ್ವವಿದ್ಯಾಲಯ, ಐಐಟಿ, ಐಐಎಂಗಳನ್ನು ಅಧ್ಯಾಪಕರ ಕೊರತೆ ಕಾಡುತ್ತಿದೆ. ಇದಕ್ಕಾಗಿಯೆ ಶಿಕ್ಷಕರ ಗುಣಮಟ್ಟವನ್ನು ಸುಧಾ ರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಜೀಂಪ್ರೇಮ್‌ಜಿ ವಿಶ್ವವಿದ್ಯಾನಿಲಯ ಸ್ಥಾಪಿಸಿ ಕಾರ್ಯ ಪ್ರವೃತರಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರದ ಹಿಂದಿನ ಯುಪಿಎ ಸರಕಾರ ಕೌಶಲ್ಯ ತರಬೇತಿಗೆ ಹೆಚ್ಚಿನ ಒತ್ತು ನೀಡಿತ್ತು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಶೇ.4ರಷ್ಟು ಮಾತ್ರ ವಿದ್ಯಾರ್ಥಿಗಳು ಕೌಶಲ್ಯ ತರಬೇತಿ ಪಡೆಯುತ್ತಿದ್ದಾರೆ. ಜರ್ಮನಿಯಲ್ಲಿ ಪದವಿಗೆ ಮೊದಲೆ ಶೇ.60ರಷ್ಟು, ಜಪಾನ್‌ನಲ್ಲಿ ಶೇ.45ರಷ್ಟು ವಿದ್ಯಾರ್ಥಿಗಳು ಕೌಶಲ್ಯ ತರಬೇತಿ ಪಡೆಯುತ್ತಾರೆ ಎಂದು ಹೇಳಿದರು.

ಕೌಶಲ್ಯ ತರಬೇತಿಯ ಕಾರ್ಯ ಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ಸೂಕ್ತ ವ್ಯಕ್ತಿಯನ್ನು ನೇಮಿ ಸಬೇಕು. ಹಿಂದಿನ ಯುಪಿಎ ಸರಕಾರ ರಾಮ್‌ದೊರೈರವರನ್ನು ಈ ಕಾರ್ಯಕ್ಕೆ ನೇಮಿಸಿತ್ತು. ಭಾರತದಲ್ಲಿ ಯುವಜನರ ಸಂಖ್ಯೆ ಹೆಚ್ಚಿದೆ. ಇವರನ್ನು ಬಳಸಿಕೊಂಡು ಬಡತನ ನಿರ್ಮೂಲನೆ, ಉದ್ಯೋಗಾ ವಕಾಶಗಳನ್ನು ಮಾಡಬೇಕಿದೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಜಪಾನ್ ಭೇಟಿ ಅತ್ಯಂತ ಯಶಸ್ವಿ ಭೇಟಿಯಾ ಗಿದೆ. ಮೋದಿಯವರು ವೈಯಕ್ತಿಕ ಗೆಳೆತನದ ನೆಲೆಯಲ್ಲಿ ಜಪಾನ್ ಪ್ರಧಾನಿಯವರೊಂದಿಗೆ ಹೊಂದಿ ರುವ ಸಂಬಂಧ ಎರಡು ದೇಶಗಳ ಬಾಂಧವ್ಯ ಸುಧಾರಣೆಗೆ ನೆರವಾಗಿದೆ. ಇದನ್ನು ದೇಶದ ಯುವಜನತೆಗೆ ಕೌಶಲ್ಯಾಭಿವೃದ್ಧಿಗೂ ಬಳಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಹಾಗೂ ಪಾಕಿಸ್ತಾನ ದಲ್ಲಿ ಒಂದೇ ರೀತಿಯ ಸಮಸ್ಯೆ, ಸಂಪನ್ಮೂಲಗಳಿವೆ. ದೂರದಲ್ಲಿರುವ ದೇಶಗಳಿಂದ ನೆರೆಹೊರೆಯ ದೇಶಗ ಳೊಂದಿಗೆ ಸಂಬಂಧ ಸುಧಾರಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಚ್ಚಿನ ಗಮನ ನೀಡುವುದು ಅಗತ್ಯ, ಈಗ ಭಾರತ-ಪಾಕಿಸ್ತಾನದ ನಡುವೆ ಪರಸ್ಪರ ಒಬ್ಬರಿಗೊಬ್ಬರು ಮುಖ ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಶ್ಮೀರದ ಸಮಸ್ಯೆ ಇದ್ದೇ ಇದೆ. ಅದನ್ನು ಪಕ್ಕಕ್ಕಿಟ್ಟು ಎರಡು ದೇಶಗಳ ನಡುವೆ ಪರಸ್ಪರ ನಂಬಿಕೆ ಮೂಡಿಸುವ ವಾತಾವರಣವನ್ನು ನಿರ್ಮಾಣ ಮಾಡಿ, ವ್ಯಾಪಾರ ವೃದ್ಧಿಗೆ ಪರಸ್ಪರ ಸಹಕಾರ ನೀಡುವುದಕ್ಕೆ ಗಮನ ನೀಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಅರಬ್ ದೇಶದಲ್ಲೂ ಈಗ ಅಶಾಂತಿಯ ವಾತಾವರಣವಿದೆ. ಧಾರ್ಮಿಕ ಮೂಲಭೂತವಾದದ ಮೂಲಕ ಉಗ್ರಗಾಮಿಗಳು ಹಿಂಸಾಚಾರಕ್ಕೆ ಮುಂದಾ ಗಿದ್ದಾರೆ. ಮಹಾತ್ಮ ಗಾಂಧಿಯವರ ಅಹಿಂಸೆಯ ತತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಅರಬ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಶಾಂತಿಯ ವಾತಾವರಣ ಮೂಡಿಸಬೇಕಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರದ ರಕ್ಷಣಾ ಖಾತೆಯ ಮಾಜಿ ಸಚಿವ ಕೃಷ್ಣಕುಮಾರ್, ಎಫ್‌ಕೆಸಿಸಿಐ ಅಧ್ಯಕ್ಷ ಸಂಪತ್‌ರಾಮನ್, ಜಪಾನ್‌ನ ಫ್ರೆಂಡ್‌ಶಿಪ್ ಸೊಸೈಟಿಯ ಕಿವಿಹಿಕೊ ಮೊರಾಕಮ್ಮಿ, ಬೋಸ್ಮಿಯಾ ರಾಯಭಾರಿ ಸಬೀತ್ ಸುಭಾಷಿಕೊ, ಬ್ರುನೈನ ರಾಯಭಾರಿ ಆದಿ ಸಿಡಕ್, ಎಎಸಿಸಿಯ ಪ್ರಧಾನ ಅಧ್ಯಕ್ಷೆ ರಾಣಿ ಜಹಾನ್ ಆರಾ, ಕಾರ್ಯನಿರ್ವಾಹಕ ನಿರ್ದೇಶಕ ಆಸಿಫ್ ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

Write A Comment