ಕರ್ನಾಟಕ

ಎಟಿಐನಲ್ಲಿ 100 ಕೋಟಿ ರೂ. ಅವ್ಯವಹಾರ: ಸಿಬಿಐ ತನಿಖೆಗೆ ಕೋರಿ ಸರಕಾರಕ್ಕೆ ವರದಿ: ರಶ್ಮಿ ಮಹೇಶ್

Pinterest LinkedIn Tumblr

rashmi

ಮೈಸೂರು, ಅ.16: ಆಡಳಿತ ತರಬೇತಿ ಸಂಸ್ಥೆ ಸಾಕ್ಷಾತ್ ಅಕ್ರಮ ತರಬೇತಿ ಸಂಸ್ಥೆಯಾಗಿ ಮಾರ್ಪಟ್ಟಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಸುಮಾರು 100 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಸರಕಾರಕ್ಕೆ ವರದಿ ನೀಡಲಾಗಿದೆ. ಇದರ ಪರಿಣಾಮ ತನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಆರೋಪಿಸಿದ್ದಾರೆ.

ಈ ಕುರಿತು ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕಿ ರಶ್ಮಿ ಮಹೇಶ್, ಎಟಿಐನ ಹಲವು ಅಕ್ರಮಗಳನ್ನು ಎಳೆಎಳೆಯಾಗಿ ಬೆಳಕಿಗೆ ತಂದಿದ್ದಾರೆ. ಅಲ್ಲದೆ, ಹಿಂದಿನ ಮಹಾ ನಿರ್ದೇಶಕಿ ಅಮಿತಾ ಪ್ರಸಾದ್ ಸೇರಿದಂತೆ ನಾಲ್ವರು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ತಾವು ಸರಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿ ಸಲಾಗಿದೆ ಎಂದು ಹೇಳಿದ್ದಾರೆ.

2008ರಿಂದ 2014 ಅವಧಿಯಲ್ಲಿ ಎಟಿಐ, ಎಸ್‌ಐಆರ್‌ಡಿ, ಎಸ್‌ಐಯುಡಿ ಸಂಸ್ಥೆಗಳಲ್ಲಿ ನಡೆದಿರುವ ತರಬೇತಿ ಕಾರ್ಯಕ್ರಮಗಳಲ್ಲಿ 5 ಕೋಟಿ ರೂ.ಗಳಷ್ಟು ತಪ್ಪು ಲೆಕ್ಕ ನೀಡಲಾಗಿದೆ. ಪ್ರತೀ ವರ್ಷ ವಿದ್ಯುತ್ ಸೇವಾ ಶುಲ್ಕದ ರೂಪದಲ್ಲಿ 55 ಲಕ್ಷ ರೂ. ಅಕ್ರಮವಾಗಿ ನೀಡಲಾಗಿದೆ. ಸುಮಾರು 70 ಲಕ್ಷ ರೂ.ಗಳಷ್ಟು ಅಡುಗೆ ಸಾಮಗ್ರಿಗಳ ದಾಸ್ತಾನಿನ ಲೆಕ್ಕ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ.

2010-14ರಲ್ಲಿ ಪುಸ್ತಕಗಳ ಮುದ್ರಣಕ್ಕೆ 11.1 ಕೋಟಿ ರೂ. ವ್ಯಯ ಮಾಡಲಾಗಿದೆ. ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಖರೀದಿಗೆ 12-15 ಕೋಟಿ ರೂ. ದುಂದುವೆಚ್ಚವಾಗಿದೆ. ಪುನರ್ ತರಬೇತಿ ಕಾರ್ಯಕ್ರಮಗಳ ಹೆಸರಿನಲ್ಲಿ 1.19 ಕೋಟಿ ರೂ. ಖರ್ಚು ಮಾಡಲಾಗಿದೆ. ಪ್ರಾಚ್ಯ ವಸ್ತು ಇಲಾಖೆಯಿಂದ ಆಯೋಜಿಸುವ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ 10.91 ಲಕ್ಷ ರೂ. ನೀಡಲಾಗಿದೆ. ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿ ಸುಮಾರು 73.81 ಲಕ್ಷ ರೂ.ಗಳ ಕಾಮಗಾರಿಯನ್ನು ಟೆಂಡರ್ ಕರೆಯದೆಯೇ ನೀಡಲಾಗಿದೆ ಎಂದು ರಶ್ಮಿ ವಿವರಿಸಿದರು.

ಈ ಎಲ್ಲ ಅಂಶ ಗಳು ಒಳಗೊಂಡ ಅವ್ಯ ವಹಾರಗಳ ವರದಿಯನ್ನು ರಾಜ್ಯ ಮುಖ್ಯ ಕಾರ್ಯ ದರ್ಶಿಗಳಿಗೆ ಸಲ್ಲಿ ಸಿದ್ದು ಸೂಕ್ತ ತನಿಖೆಗೆ ಕೋರಲಾಗಿದೆ. ಅಲ್ಲದೆ, ಹಿಂದಿನ ನಿರ್ದೇಶಕಿ ಅಮಿತಾ ಪ್ರಸಾದ್, ಉಪ ನಿರ್ದೇಶಕ ಆರ್.ನಾಗರಾಜ್, ವಾರ್ಡನ್ ಸರ್ವೇಶ್ವರ್, ಜಂಟಿ ನಿರ್ದೇಶಕ ಪ್ರಕಾಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಶೇಖರಪ್ಪ, ಹೊರ ಗುತ್ತಿಗೆಯ ಸಿಸ್ಟಂ ಎಂಜಿನಿಯರ್ ನಾಗೇಂದ್ರ ವಿರುದ್ಧ ಸಿಬಿಐ ಮತ್ತು ಲೋಕಾಯುಕ್ತ ತನಿಖೆಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕರ್ತವ್ಯ ಲೋಪ: ಎಸ್‌ಐ, ಅಂಗರಕ್ಷಕ ಅಮಾನತು; 19 ಆರೋಪಿಗಳ ಬಂಧನ
ಮೈಸೂರು, ಅ.16: ಎಟಿಐ ಸಿಬ್ಬಂದಿ ವೆಂಕಟೇಶ್ ಸಾವು ಹಿನ್ನೆಲೆಯಲ್ಲಿ ಮಹಾ ನಿರ್ದೇಶಕಿ ರಶ್ಮಿ ಮಹೇಶ್ ಅವರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿದ ಎಸ್‌ಐ ನರೇಂದ್ರ ಬಾಬು ಹಾಗೂ ಸೂಕ್ತ ರಕ್ಷಣೆ ನೀಡದ ಆರೋಪದಲ್ಲಿ ಅಂಗರಕ್ಷಕ ಗಣೇಶ್ ಅವರನ್ನು ಅಮಾನತುಪಡಿಸಲಾಗಿದೆ. ಜೊತೆಗೆ ಹಲ್ಲೆ ನಡೆಸಿದ ಆರೋಪದಲ್ಲಿ 19 ಮಂದಿಯನ್ನು ಬಂಧಿಸಲಾಗಿದೆ.

ನಿನ್ನೆ ವೆಂಕಟೇಶ್ ಸಾವು ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ರಶ್ಮಿ ಮಹೇಶ್ ಮೇಲೆ ಹಲ್ಲೆ ನಡೆದಿತ್ತು. ಈ ಸಂದರ್ಭದಲ್ಲಿ ರಶ್ಮಿ ಮಹೇಶ್ ಅವರ ಪಕ್ಕದಲ್ಲೇ ಇದ್ದ ನಝರ್‌ಬಾದ್ ಇನ್ಸ್‌ಪೆಕ್ಟರ್ ನರೇಂದ್ರ ಬಾಬು ಮತ್ತು ಅಂಗರಕ್ಷಕ ಗಣೇಶ್ ತಮ್ಮ ಸೇವೆಯನ್ನು ಸಮರ್ಪಕವಾಗಿ ಮಾಡಿಲ್ಲ. ಅಲ್ಲದೆ ರಶ್ಮಿಗೆಯವರಿಗೆ ಭದ್ರತೆ ನೀಡುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಇವರನ್ನು ಅಮಾನತುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಸಲೀಂ ತಿಳಿಸಿದ್ದಾರೆ.

ಅಲ್ಲದೆ, ನಝರ್‌ಬಾದ್ ಇನ್ಸ್‌ಪೆಕ್ಟರ್ ಪೂವಯ್ಯ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ. ನಿನ್ನೆ ಮಾಧ್ಯಮಗಳ ಕೆಮರಾಗಳಲ್ಲಿ ದಾಖಲಾದ ಚಿತ್ರಣ ಆಧರಿಸಿ 19 ಮಂದಿಯನ್ನು ಬಂಧಿಸಲಾಗಿದೆ. 25 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪ್ರಕರಣದ ತನಿಖೆಗೆ ನಾಲ್ಕು ತಂಡ ರಚಿಸಲಾಗಿದೆ ಎಂದು ಅವರು ನುಡಿದರು.

Write A Comment