ಕರ್ನಾಟಕ

ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣ: ಸುದೀರ್ಘ ವಿಚಾರಣೆಗೆ ಒಳಗಾದ ರಾಘವೇಶ್ವರ ಶ್ರೀ

Pinterest LinkedIn Tumblr

raghave

ಬೆಂಗಳೂರು, ಅ14: ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯನ್ನು ಸಿಐಡಿ ಅಧಿಕಾರಿಗಳು ಮಂಗಳವಾರ ಅಪರಾಹ್ಣ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ಯಾಲೇಸ್ ರಸ್ತೆಯಲ್ಲಿರುವ ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ

ಮಂಗಳವಾರ ಅಪರಾಹ್ಣ 2 ಗಂಟೆಯ ಸುಮಾರಿಗೆ ವಕೀಲ ಶಂಭು ಶರ್ಮ ರೊಂದಿಗೆ ಉಪಾಹಾರ ಸೇವಿಸದೆ ಸಿಐಡಿ ಕಚೇರಿಗೆ ಆಗಮಿಸಿದ ಶ್ರೀ ರಾಘವೇಶ್ವರ ಸ್ವಾಮೀಜಿಯವರನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಎಸ್‌ಪಿ ಸಿರಿಗೌರಿ ನೇತೃತ್ವದ ತಂಡ ತೀವ್ರ ವಿಚಾರಣೆಗೊಳಪಡಿಸಿ ರಾಮಕಥಾ ಗಾಯಕಿಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆ ಹಾಕಿದರು.

ರಾಮಕಥಾ ಗಾಯಕಿ ಸ್ವಾಮೀಜಿಯ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಅಂಶಗಳನ್ನು ತಂಡವು ಸ್ವಾಮೀಜಿಯವರ ಮುಂದಿಟ್ಟು ಅವುಗಳ ಕೂಲಂಕಷ ಮಾಹಿತಿ ಪಡೆದಿದೆ.

ಇದರ ಮಧ್ಯೆ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ 24 ಗಂಟೆಗಳ ಕಾಲಾವಕಾಶ ನೀಡಿದ್ದರು. ಆದರೆ, ಹೊನ್ನಾವರದ ಕೆಕ್ಕಾರುಮಠದಿಂದ ಹೊರಟು ನಗರ ಸೇರಲು ತಡವಾಗಿದ್ದರಿಂದ ಸೋಮವಾರ ಸ್ವಾಮೀಜಿ ಅವರ ಪರ ವಕೀಲರಾದ ಮೋಹನ್ ಹೆಗ್ಡೆ ಅವರು ಎರಡು ದಿನಗಳ ಕಾಲಾವಕಾಶ ಕೇಳಿದ್ದರು.

ಸೋಮವಾರವೇ ನಗರಕ್ಕೆ ಆಗಮಿಸಿದ್ದ ಸ್ವಾಮೀಜಿಗಳು ಆರ್‌ಟಿ ನಗರ ಮಠದ ಭಕ್ತರಾದ ರಾಮಚಂದ್ರಭಟ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿ ಮಂಗಳವಾರ ಅಪರಾಹ್ಣ 2 ಗಂಟೆಗೆ ಸಿಐಡಿ ಕಚೇರಿಗೆ ಆಗಮಿಸಿ, ಸಂಜೆ 6 ಗಂಟೆಯವರೆಗೆ ವಿಚಾರಣೆಗೆ ಒಳಪಟ್ಟರು.

ಸ್ವಾಮೀಜಿಯನ್ನು ವಿಚಾರಣೆಗೆ ಒಳಪಡಿಸಿರುವ ಸಿಐಡಿ ಅಧಿಕಾರಿಗಳು ಇದರ ಬಗ್ಗೆ ಯಾವುದೆ ಮಾಹಿತಿಯನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿಲ್ಲ. ಸ್ವಾಮೀಜಿಗಳೂ ಇದರ ಬಗ್ಗೆ ಮಾತನಾಡದೆ ಕಾರು ಏರಿ ಹೊರಟು ಹೋಗಿದ್ದಾರೆ. ಮಾಹಿತಿಯನ್ನು ಕಲೆ ಹಾಕಿರುವ ಅಧಿಕಾರಿಗಳು ದೂರಿನ ಅಂಶಗಳು ಹಾಗೂ ಸ್ವಾಮೀಜಿ ನೀಡಿದ ಅಂಶಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Write A Comment