ವಿಶಾಖಪಟ್ಟಣ, ಅ.14: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಂಡಮಾರುತ ಪೀಡಿತ ಆಂಧ್ರ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯಕ್ಕೆ ಸಾವಿರ ಕೋಟಿ ರೂಪಾಯಿ ಮಧ್ಯಾಂತರ ಪರಿಹಾರ ಪ್ರಕಟಿಸಿದ್ದಾರೆ.
ಚಂಡಮಾರುತದಿಂದ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನೂ ಅವರು ಘೋಷಿಸಿದರು. ಹುದ್‌ಹುದ್ ಚಂಡಮಾರುತದಿಂದಾಗಿ ಆಂಧ್ರ ಪ್ರದೇಶ ಮತ್ತು ಒಡಿಶಾಗಳಲ್ಲಿ ಒಟ್ಟು 29 ಜನರು ಮೃತಪಟ್ಟಿದ್ದಾರೆ.
ಮಂಗಳವಾರ ಬೆಳಗ್ಗೆ ವಿಶಾಖಪಟ್ಟಣದಲ್ಲಿ ಬಂದಿಳಿದ ಪ್ರಧಾನಿ ಮೋದಿಯವರನ್ನು ಆಂಧ್ರ ಪ್ರದೇಶದ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್, ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಕೇಂದ್ರ ಸಚಿವರಾದ ಎಂ.ವೆಂಕಯ್ಯ ನಾಯ್ಡು, ಪಿ.ಅಶೋಕ್ ಗಜಪತಿರಾಜು, ಸಂಸದ ಕೆ.ಹರಿಬಾಬು ಮತ್ತಿತರರು ಸ್ವಾಗತಿಸಿದರು.
ವೈಮಾನಿಕ ಸಮೀಕ್ಷೆ: ಹುದ್‌ಹುದ್ ಚಂಡಮಾರುತದಿಂದ ತೀವ್ರ ಹಾನಿಗೀಡಾಗಿರುವ ವಿಶಾಖಪಟ್ಟಣ ವಿಮಾನ ನಿಲ್ದಾಣವನ್ನು ಪ್ರಧಾನಿ ವೀಕ್ಷಿಸಿದರು. ತೀವ್ರ ಬಿರುಗಾಳಿಗೆ ವಿಮಾನ ನಿಲ್ದಾಣದ ಮೇಲ್ಛಾವಣಿ ಕಿತ್ತು ಹೋಗಿದೆ. ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಇನ್ನೂ ವಾರ ಕಾಲ ಬೇಕಾಗಬಹುದು ಎನ್ನಲಾಗಿದೆ.ನಂತರ ಪ್ರಧಾನಿಯವರು ವಿಮಾನವೊಂದನ್ನು ಏರಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜೊತೆಗೂಡಿ ವಿಶಾಖಪಟ್ಟಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಿರುವ ಹಾನಿಯನ್ನು ವೀಕ್ಷಿಸಿದರು.
ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ನಮಗೆ ಚಂಡಮಾರುತದಂತಹ ನೈಸರ್ಗಿಕ ದುರಂತಗಳನ್ನು ಸಮರ್ಥವಾಗಿ ಎದುರಿಸುವುದು ಸಾಧ್ಯವಾಯಿತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮನ್ವಯತೆ ಸಾಧಿಸಿ ಕೆಲಸ ಮಾಡಿದವು. ಇದರಿಂದ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸಿದವು ಎಂದು ಮೋದಿ ಅಭಿಪ್ರಾಯಪಟ್ಟರು.
ಬೃಹತ್ ನೌಕಾನೆಲೆ ಹೊಂದಿರುವ ವಿಶಾಖಪಟ್ಟಣದಲ್ಲಿ 20 ಲಕ್ಷ ಜನರು ವಾಸಿಸುತ್ತಿದ್ದಾರೆ. ನಗರದ ಬಹುತೇಕ ಪ್ರದೇಶಗಳಲ್ಲಿ ಈಗಲೂ ವಿದ್ಯುತ್ ಪೂರೈಕೆ ಸಾಧ್ಯವಾಗಿಲ್ಲ. ದೂರವಾಣಿ ಮಾರ್ಗಗಳು ಅಸ್ತವ್ಯಸ್ತವಾಗಿವೆ. ಇಡೀ ನಗರದಲ್ಲಿ ಏಕೈಕ ಎಟಿಎಂ ಕೆಲಸ ಮಾಡುತ್ತಿದೆ. ನಗರದಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಉದ್ದವಾದ ಸರದಿಯ ಸಾಲುಗಳು ಕಂಡುಬಂದಿವೆ. ಮುಂದಿನ 15 ದಿನಗಳಿಗೆ ಸಾಲುವಷ್ಟು ಇಂಧನ ಸಂಗ್ರಹವಿದೆ. ಜನರು ಆತಂಕಗೊಂಡು ಖರೀದಿಸುವ ಅಗತ್ಯವಿಲ್ಲ ಎಂದು ಸರಕಾರಿ ಸ್ವಾಮ್ಯದ ಇಂಧನ ಕಂಪೆನಿಗಳು ತಿಳಿಸಿವೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೋಮವಾರದಿಂದೀಚೆಗೆ ವಿಶಾಖಪಟ್ಟಣದಲ್ಲೇ ಮೊಕ್ಕಾಂ ಮಾಡಿದ್ದಾರೆ. ನಗರದ ನಿವಾಸಿಗಳಿಗೆ ಆಹಾರ, ನೀರು, ಹಾಲು ಇತ್ಯಾದಿ ಆವಶ್ಯಕ ಸೇವೆಗಳ ಪೂರೈಕೆಯ ಉಸ್ತುವಾರಿ ನಡೆಸಿದ್ದಾರೆ.
ನಾಗರಿಕ ಸೌಲಭ್ಯಗಳ ಪೂರೈಕೆಗೆ 24 ಗಂಟೆ ಕೆಲಸ ಮಾಡಲು ಹಿಂಜರಿಯುವ ಅಧಿಕಾರಿಗಳನ್ನು ಪೊಲೀಸರ ವಶಕ್ಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಹುದ್‌ಹುದ್ ಚಂಡಮಾರುತ ಪ್ರಕೋಪವನ್ನು ರಾಷ್ಟ್ರೀಯ ದುರಂತ ಎಂದು ಘೋಷಿಸುವಂತೆ ಚಂದ್ರಬಾಬು ನಾಯ್ಡು ಅವರು ಸೋಮವಾರ ಪ್ರಧಾನಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಅಲ್ಲದೆ ರಾಜ್ಯಕ್ಕೆ 2,000 ಕೋಟಿ ರೂಪಾಯಿ ಮಧ್ಯಾಂತರ ಪರಿಹಾರ ಒದಗಿಸುವಂತೆ ಕೋರಿದ್ದರು.
ರೇವಾ ವರದಿ (ಮ.ಪ್ರ.): ಚಂಡಮಾರುತದ ಪ್ರಭಾವದಿಂದ ಮಧ್ಯಪ್ರದೇಶದಲ್ಲಿ ಭಾರೀ ಮಳೆ ಬೀಳುತ್ತಿದ್ದು, ರೇವಾ ಪಟ್ಟಣದಲ್ಲಿ ಮನೆಯೊಂದು ಕುಸಿದು ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗಿನ ಜಾವ ಎರಡು ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.