ಕರ್ನಾಟಕ

ಮೂರು ಸಾವಿರ ಮಂದಿಗೆ ಬೌದ್ಧ ದಮ್ಮ ದೀಕ್ಷೆ: ವೈದಿಕ ಆಚರಣೆಗಳನ್ನು ಧಿಕ್ಕರಿಸಿ ದಲಿತರಿಗೆ ಜಾರಕಿಹೊಳಿ ಕರೆ

Pinterest LinkedIn Tumblr

budha_ಬೆಂಗಳೂರು, ಅ.14: ಪ್ರತಿ ಹಳ್ಳಿ, ಕೇರಿಗಳಲ್ಲಿ ದೇವಾಲಯಗಳ ಬದಲಾಗಿ ಶಾಲೆಗಳನ್ನು ಸ್ಥಾಪಿಸುವುದರ ಮೂಲಕ ಬುದ್ಧ, ಬಸವ ಹಾಗೂ ಅಂಬೇಡ್ಕರ್‌ಅವರ ನಿಜವಾದ ಆಶಯದತ್ತ ಮುನ್ನಡೆಯಬೇಕೆಂದು ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಆಶಿಸಿದ್ದಾರೆ.

ಮಂಗಳವಾರ ಕರ್ನಾಟಕ ದಲಿತ ಮಹಿಳಾ ವೇದಿಕೆ ಹಾಗೂ ಎಸ್ಸಿ, ಎಸ್ಟಿ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿಗಳು ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ‘ಬುದ್ಧನೆಡೆಗೆ ಸಾಮಾಜಿಕ ಸಮಾನತೆಯಡೆಗೆ-ಜಾತಿ ಪದ್ಧತಿ ಮುಕ್ತ ಕರ್ನಾಟಕದತ್ತ’ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇತ್ತೀಚೆಗೆ ದಲಿತರ ಕೇರಿಗಳಲ್ಲಿ ಲಕ್ಷಾಂತರ ರೂ.ವೆಚ್ಚದಲ್ಲಿ ದೇವಾಲಯಗಳು ನಿರ್ಮಾಣವಾಗುತ್ತಿದ್ದು, ದುಡಿಯುವ ಬಹುತೇಕ ಹಣವನ್ನು ಧಾರ್ಮಿಕ ಕಾರ್ಯಗಳಿಗೆ ವ್ಯರ್ಥಮಾಡಲಾಗುತ್ತಿದೆ. ಇದರಿಂದ ದಲಿತ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಹಾಗೂ ಆರೋಗ್ಯದಿಂದ ವಂಚಿತರಾಗುತ್ತಿದ್ದಾರೆ. ಇದರ ಬದಲಿಗೆ ಪ್ರತಿ ಹಳ್ಳಿ ಹಾಗೂ ಕೇರಿಗಳಲ್ಲಿ ಶಾಲೆಗಳನ್ನು ಕಟ್ಟುವ ಮೂಲಕ ಶೈಕ್ಷಣಿಕವಾಗಿ ಮುಂದುವರಿಯಬೇಕೆಂದು ಜಾರಕಿಹೊಳಿ ಸಲಹೆ ನೀಡಿದರು.

ವೈದಿಕರು ಧಾರ್ಮಿಕ ಹೆಸರಿನಲ್ಲಿ ದಲಿತರನ್ನು ಶೋಷಿಸುತ್ತಿದ್ದಾರೆ. ಈ ಹುನ್ನಾರವನ್ನು ಕಂಡ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಹಿಂದೂ ಧರ್ಮದಿಂದ ಹೊರಬಂದು ಪ್ರತ್ಯೇಕವಾದ ಜನಪರವಾದ ಜೀವನ ವಿಧಾನವನ್ನು ರೂಢಿಸಿಕೊಂಡರು. ಅವರ ವಂಶಸ್ಥರಾಗಿರುವ ಅವೈದಿಕರಾದ ದಲಿತ ಸಮುದಾಯ ವೈದಿಕ ಆಚರಣೆಗಳನ್ನು ಧಿಕ್ಕರಿಸಿ, ಬುದ್ಧನೆಡೆಗೆ ಸಾಗಬೇಕೆಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ದಲಿತರು ಹಣಕಾಸಿನ ವ್ಯವಹಾರಗಳನ್ನು ಚೆನ್ನಾಗಿ ಕರಗತ ಮಾಡಿಕೊಳ್ಳಬೇಕು. ಒಂದು ರೂ.ನಿಂದ ಹತ್ತು ರೂ., ನೂರು ರೂ., ಸಾವಿರ ರೂ., ಸಂಪಾದನೆ ಮಾಡುವುದನ್ನು ಕಲಿಯಬೇಕು. ಆಗ ಮಾತ್ರ ದಲಿತ ಸಮುದಾಯದ ಮುಂದಿನ ತಲೆಮಾರು ಸ್ವಾಭಿಮಾನದಿಂದ ಬದುಕಲು ಸಾಧ್ಯವೆಂದು ಅವರು ಅಭಿಪ್ರಾಯಿಸಿದರು.

ಸರಕಾರದ ಯೋಜನೆಗಳು ಮನು ಶಾಸ್ತ್ರದಿಂದ ಮುಕ್ತವಾಗಿಲ್ಲ. ಹಾಗಾಗಿಯೆ ದಲಿತರನ್ನು ಕುರಿ, ಹಂದಿ, ಕೋಳಿಗಳನ್ನು ಸಾಕುವ ಯೋಜನೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇಂತಹ ಯೋಜನೆಗಳನ್ನು ದಲಿತ ಸಮುದಾಯ ನೆಚ್ಚಿಕೊಳ್ಳಬಾರದು. ಸಣ್ಣಹಾಗೂ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ಹಂತ ಹಂತವಾಗಿ ಆರ್ಥಿಕವಾಗಿ ಅಭಿವೃದ್ಧಿಗೊಳ್ಳಬೇಕೆಂದು ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದರು.

ಕರ್ನಾಟಕ ದಲಿತ ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋಧಾ ಮಾತನಾಡಿ, ಸರಕಾರದ ಅಂಕಿಅಂಶದ ಪ್ರಕಾರ ಹತ್ತು ದಿನಕ್ಕೆ ಒಬ್ಬ ದಲಿತ ವ್ಯಕ್ತಿ ಕೊಲೆ ಯಾಗುತ್ತಿದ್ದಾನೆ. ಐದು ದಿನಕ್ಕೊಮ್ಮೆ ದಲಿತ ಮಹಿಳೆ ಅತ್ಯಾಚಾರಕ್ಕೆ ತುತ್ತಾಗುತ್ತಿದ್ದಾಳೆ. ಆದರೂ ಈ ಪ್ರಕರಣಗಳಲ್ಲಿ ಆರೋಪಿಯಾಗಿರುವ ಒಬ್ಬರಿಗೂ ಶಿಕ್ಷೆಯಾಗಿಲ್ಲ. ಇಂತಹ ಸಮಾಜದಲ್ಲಿ ದಲಿತರು ಬದುಕುವುದಾದರು ಹೇಗೆ ಎಂದು ಪ್ರಶ್ನಿಸಿದರು.

ಜಾತಿ ದೌರ್ಜನ್ಯಗಳನ್ನು ತಡೆದು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಅಧಿಕಾರಿಗಳಿಗೆ ಇಚ್ಛಾಶಕ್ತಿಯಿಲ್ಲ. ಅಧಿಕಾರಿಗಳ ಅಸಮರ್ಪಕ ಕಾರ್ಯವೈಖರಿಯಿಂದಲೆ ಜಾತಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಹಾಗಾಗಿ ಸರಕಾರ ಕೋಮುವಾದಿ ಚಿಂತನೆಯುಳ್ಳ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನೋರಕಿ ಬಂತೇಜಿರವರಿಂದ ಮೂರು ಸಾವಿರಕ್ಕೂ ಹೆಚ್ಚು ಮಂದಿ ಬೌದ್ಧ ಧಮ್ಮದ ದೀಕ್ಷೆ ಪಡೆದರು. ಈ ವೇಳೆ ಜೆಡಿಎಸ್ ವಕ್ತಾರ ರಮೇಶ್ ಬಾಬು, ಕರ್ನಾಟಕ ದಲಿತ ಮಹಿಳಾ ವೇದಿಕೆಯ ಜಿಲ್ಲಾ ಸಂಚಾಲಕಿ ಸುಗುಣ, ಪಿವಿಸಿ ಮುಖಂಡ ಪಟಾಪಟ್ ನಾಗರಾಜು, ಲೈಂಗಿಕ ಅಲ್ಪಸಂಖ್ಯಾತೆ ಅಕ್ಕೈ ಹಾಜರಿದ್ದರು.

Write A Comment