ಕರ್ನಾಟಕ

ರಾಷ್ಟ್ರೀಯ ಮಹಿಳಾ ಆಯೋಗದಿಂದ ರಾಘವೇಶ್ವರ ಭಾರತಿ ಸ್ವಾಮೀಜಿ ಪ್ರಕರಣದ ವಿಚಾರಣೆ ಆರಂಭ

Pinterest LinkedIn Tumblr

Ragveshwara-swamiji

ಬೆಂಗಳೂರು: ರಾಷ್ಟ್ರೀಯ ಮಹಿಳಾ ಆಯೋಗವು ರಾಘವೇಶ್ವರ ಭಾರತಿ ಸ್ವಾಮೀಜಿಯ ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆಯನ್ನು ಆರಂಭಿಸಿದೆ. ಆಯೋಗದ ತಂಡ ಬೆಂಗಳೂರಿಗೆ ಶನಿವಾರ ಆಗಮಿಸಿ ಸಂತ್ರಸ್ತ ಮಹಿಳೆ ಪ್ರೇಮಲತಾ ಶಾಸ್ತ್ರಿ ಅವರ ಹೇಳಿಕೆ ದಾಖಲಿಸಿಕೊಂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪ್ರಕರಣದ ತನಿಖೆಯ ಪ್ರಗತಿ ಕುರಿತಂತೆ ಮಾಹಿತಿ ಸಂಗ್ರಹಿಸಿದೆ.

ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಳಂ ಜೊತೆಗೆ ಆಯೋಗದ ಸದಸ್ಯರಾದ ಸುಪ್ರಿಕೋರ್ಟ್ ವಕೀಲೆ ಅರ್ಪಣಾ ಭಟ್ ಮತ್ತು ಶಮೀಮ್ ಅವರು ಶನಿವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಬನಶಂಕರಿಯಲ್ಲಿರುವ ಪ್ರೇಮಲತಾ ಶಾಸ್ತ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ಮೂರೂವರೆ ಗಂಟೆ ಕಾಲ ವಿಚಾರಣೆ ನಡೆಸಿ ಅವರ ಹೇಳಿಕೆ ದಾಖಲಿಸಿಕೊಂಡರು. ನಂತರ ಕುಮಾರಕೃಪ ಅತಿಥಿ ಗೃಹದಲ್ಲಿ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪಚಾವೊ ಹಾಗೂ ಸಿಐಡಿ ಡಿಜಿ ಪ್ರಣವ್ ಮೊಹಂತಿ ಸೇರಿದಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳೊಂದಿಗೆ ದೂರು ದಾಖಲಾದ ಕ್ಷಣದಿಂದ ಇದುವರೆಗಿನ ಬೆಳವಣಿಗೆಗಳವರೆಗೂ ಸುದೀರ್ಘವಾಗಿ ಸಮಾಲೋಚನೆ ನಡೆಸಿ ಪ್ರಕರಣ ಕುರಿತಂತೆ ಈವರೆಗೆ ತನಿಖೆಯಲ್ಲಿ ಆಗಿರುವ ಪ್ರಗತಿ ಕುರಿತಂತೆ ಮಾಹಿತಿ ಸಂಗ್ರಹಿಸಿದರು.

ಸ್ವಯಂ ದೂರು ದಾಖಲಿಸಿಕೊಂಡಿದ್ದ ಆಯೋಗ
ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದ ನಂತರ ರಾಷ್ಟ್ರೀಯ ಮಹಿಳಾ ಆಯೋಗ ಈ ಕುರಿತಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಆಯೋಗ ಅರೆ ನ್ಯಾಯಿಕ ಅಧಿಕಾರ ಹೊಂದಿದೆ. ನೊಂದ ಮಹಿಳೆಗೆ ನ್ಯಾಯ ಕೊಡಿಸಲು ಅಗತ್ಯ ಬಿದ್ದರೆ ಸುಪ್ರಿಂ ಕೋರ್ಟ್ ಮೆಟ್ಟಿಲನ್ನೂ ಏರಲು ಸಿದ್ಧವಿರುವುದಾಗಿ ಆಯೋಗ ಸ್ಪಷ್ಟಪಡಿಸಿತ್ತು. ಆ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿ ಸಂತ್ರಸ್ತ ಮಹಿಳೆಯ ಹೇಳಿಕೆ ದಾಖಲಿಸಿಕೊಳ್ಳುವ ಮೂಲಕ ಸ್ವಾಮೀಜಿ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಬಿರುಸುಗೊಳಿಸಿದೆ.

ಮೂರೂವರೆ ಗಂಟೆಯ ವಿಚಾರಣೆ
ಸ್ವಾಮೀಜಿ ಪರಿಚಯ ಆದ ದಿನದಿಂದ ಈ ಕ್ಷಣದವರೆಗಿನ ಅಷ್ಟೂ ಬೆಳವಣಿಗೆ ಮತ್ತು ಘಟನೆಗಳನ್ನು ಪ್ರೇಮಲತಾ ಅವರು ಆಯೋಗದ ಮುಂದೆ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಾವು ಸ್ವಾಮೀಜಿ ವಿರುದ್ಧ ಅತ್ಯಾಚಾರ ದೂರು ದಾಖಲಿಸುವುದನ್ನು ತಪ್ಪಿಸುವ ಸಲುವಾಗಿಯೇ ತಮ್ಮ ವಿರುದ್ಧ ಬ್ಲ್ಯಾಕ್‌ಮೇಲ್ ದೂರು ದಾಖಲಿಸಿ ಜೈಲಿಗೆ ಕಳುಹಿಸುವ ಮೂಲಕ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯಿತು. ಆ ನಂತರ ಮಠದ ಕಡೆಯವರ ಒತ್ತಡ, ಬೆದರಿಕೆ ತಾಳಲಾರದೆ ತಮ್ಮ ಸಹೋದರ ಶ್ಯಾಮ ಶಾಸ್ತ್ರಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಯಿತು. ಆ ನಂತರ ನ್ಯಾಯ ಕೇಳಲು ನ್ಯಾಯಾಲಯದ ಮೊರೆ ಹೋದಾಗಲೂ ತಮಗಾದ ಕಹಿ ಅನುಭವ ಮತ್ತು ಭ್ರಮನಿರಸನದ ಸಮೇತ ಅಷ್ಟೂ ಬೆಳವಣಿಗೆಗಳನ್ನು ಆಯೋಗದ ಎದುರು ಪ್ರೇಮಲತಾ ಶಾಸ್ತ್ರಿ ಹಂಚಿಕೊಂಡಿದ್ದಾಗಿ ಅವರ ಸಂಬಂಧಿಗಳು ತಿಳಿಸಿದ್ದಾರೆ.

ಕುಮಾರಕೃಪಾ ಅತಿಥಿಗೃಹದಲ್ಲಿ 2 ಗಂಟೆ
ಪ್ರೇಮಲತಾ ಹೇಳಿಕೆ ದಾಖಲಿಸಿಕೊಂಡ ಆಯೋಗ ಎಫ್‌ಐಆರ್ ಪ್ರತಿ, ಪೂರಕ ದಾಖಲೆ ಮತ್ತು ಪತ್ರಗಳ ಪ್ರತಿ ಸಂಗ್ರಹಿಸಿದ ನಂತರ ಕುಮಾರಕೃಪಾ ಅತಿಥಿಗೃಹಕ್ಕೆ ತೆರಳಿತು. ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪಚಾವೊ, ಸಿಐಡಿ ಡಿಜಿ ಪ್ರಣವ್ ಮೊಹಂತಿ ಹಾಗೂ ಪ್ರಕರಣದ ತನಿಖಾ ತಂಡದಲ್ಲಿರುವ ಅಧಿಕಾರಿಗಳ ಜೊತೆಗೆ ಆಯೋಗದ ಸದಸ್ಯರು ಸುದೀರ್ಘ ಸಮಾಲೋಚನೆ ನಡೆಸಿದರು. ಸ್ವಾಮೀಜಿ ಮೇಲಿನ ಅತ್ಯಾಚಾರ ಪ್ರಕರಣದ ಜೊತೆಗೆ ಪ್ರೇಮಲತಾ ಮೇಲೆ ದಾಖಲಾಗಿರುವ ಬ್ಲ್ಯಾಕ್‌ಮೇಲ್ ಪ್ರಕರಣ, ಶ್ಯಾಮ ಶಾಸ್ತ್ರಿ ಸಾವಿನ ಪ್ರಕರಣದ ಕುರಿತಂತೆ ವಿವರವಾಗಿ ಸಮಾಲೋಚನೆ ನಡೆಸಿದ ಆಯೋಗ ಈ ಮೂರೂ ಪ್ರಕರಣಗಳ ತನಿಖೆಯಲ್ಲಿ ಆಗಿರುವ ಪ್ರಗತಿ ಕುರಿತಂತೆ ಮಾಹಿತಿ ಸಂಗ್ರಹಿಸಿತು.

ನ್ಯಾಯ ಸಲ್ಲಿಕೆಯ ಭರವಸೆ
ಆರೋಪಿಗಳು ಎಷ್ಟೆ ಪ್ರಭಾವಿ ಆಗಿರಬಹುದು. ಅವರ ಪ್ರಭಾವಕ್ಕೆ ಯಾರು ಬೇಕಾದರೂ ಒಳಗಾಗಬಹುದು. ಆದರೆ ಮಹಿಳಾ ಆಯೋಗ ಯಾವುದೇ ಪ್ರಭಾವಕ್ಕೂ ಒಳಗಾಗುವುದಿಲ್ಲ. ನೊಂದವರಿಗೆ ಅನ್ಯಾಯ ಮಾಡಲು, ನ್ಯಾಯಕ್ಕೆ ಅಪಚಾರ ಎಸಗಲು ಬಿಡುವುದಿಲ್ಲ ಎನ್ನುವ ನಿಟ್ಟಿನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಬಹಳ ಬದ್ಧತೆಯಿಂದ ಕೂಡಿದೆ. ನೊಂದವರಿಗೆ ಅನ್ಯಾಯ ಆಗಲು ಬಿಡಬಾರದು ಎನ್ನುವುದು ಆಯೋಗದ ಖಚಿತ ನಿಲುವಾಗಿರುವುದರಿಂದ ಈ ಪ್ರಕರಣದಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಮೂಡಿದೆ ಎಂದು ಪತ್ರಿಕೆಗೆ ತಿಳಿಸಿದ ಪ್ರೇಮಲತಾ ಶಾಸ್ತ್ರಿ ಅವರ ಸಮೀಪದ ಬಂದುಗಳು, ಸಿಐಡಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ತನಿಖೆಯ ಪ್ರಗತಿ ಕುರಿತಂತೆ ನಿಗಾವಹಿಸುವ ಹಾಗೂ ಕಾನೂನು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಭರವಸೆಯನ್ನು ಆಯೋಗದ ಸದಸ್ಯರು ವ್ಯಕ್ತಪಡಿಸಿದ್ದಾಗಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಲು ನಿರಾಕರಿಸಿದ ಆಯೋಗ
ಪ್ರೇಮಲತಾ ಶಾಸ್ತ್ರಿ ಹೇಳಿಕೆ ದಾಖಲಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಆಯೋಗದ ಸದಸ್ಯರು ನಿರಾಕರಿಸಿದರು. ಪ್ರಕರಣದ ವಿಚಾರಣೆಗಾಗಿ ಬೆಂಗಳೂರಿಗೆ ಆಗಮಿಸುವ ವಿಚಾರವನ್ನೂ ಬಹಿರಂಗಗೊಳಿಸದ ಆಯೋಗ ಅದನ್ನೂ ಗೌಪ್ಯವಾಗಿಯೇ ಇಡಲು ಬಯಸಿತ್ತು. ಆಯೋಗದ ಜೊತೆಗೆ ಸಮಾಲೋಚನೆ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡ ಯಾವುದೇ ಸಂಗತಿಯನ್ನು ಮಾಧ್ಯಮದವರ ಜೊತೆ ಹಂಚಿಕೊಳ್ಳಲು ಇಚ್ಚಿಸಲಿಲ್ಲ. ಆಯೋಗಕ್ಕೆ ಎಲ್ಲಾ ಘಟನೆಗಳ ಬಗ್ಗೆ ಮಾಹಿತಿ ಇದೆ. ಅವರು ಕೇಳಿದ ಮಾಹಿತಿಯನ್ನು ನಾವು ಅವರಿಗೆ ಒದಗಿಸಿದ್ದೇವೆ ಎಂದಷ್ಟೆ ಹೇಳಿದರು.

Write A Comment