ಕರ್ನಾಟಕ

ಗೌರವ ಡಾಕ್ಟರೇಟ್ ಪದವಿ ಹೆಸರುಗಳ ಹಿಂದೆ ಡಾಕ್ಟರೇಟ್ ಪದ ಬಳಸುವಂತಿಲ್ಲ : ನ್ಯಾ.ಸಂತೋಷ್ ಹೆಗ್ಡೆ

Pinterest LinkedIn Tumblr

santhosh-hegde_byte

ಬೆಂಗಳೂರು, ಅ.12: ಗೌರವ ಡಾಕ್ಟರೇಟ್‌ಗೆ ಭಾಜನರಾದವರು ತಮ್ಮ ಹೆಸರುಗಳ ಹಿಂದೆ ಡಾಕ್ಟರೇಟ್ ಎಂಬ ಪದವನ್ನು ಬಳಸಬಾರದೆಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದರೂ ಆ ಪದವನ್ನು ಬಳಸಿ ಕೊಂಡು ಓಡಾಡುತ್ತಿದ್ದಾರೆ ಎಂದು ನ್ಯಾಯಮೂರ್ತಿ, ನಾಡೋಜ ಡಾ.ಎನ್.ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ನಯನ ಸಭಾಂಗಣದಲ್ಲಿ ಕೂಡ್ಲು ಶ್ಯಾನುಭೋಗ ಸಂಗೀತ ಟ್ರಸ್ಟ್ ಆಯೋಜಿಸಿದ್ದ ಕೂಡ್ಲು ಕಲಾಯಾನ-2014 ಸಮಾ ರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ಅಕ್ಷರ ಕಲಿತ ವಿದ್ವಾಂಸರಿಗೆ ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ದುಡಿದ ಗಣ್ಯ ವ್ಯಕ್ತಿಗಳಿಗೆ ಡಾಕ್ಟರೇಟ್ ಹಾಗೂ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಕೊಡುತ್ತಿದ್ದರು.ಆದರೆ, ಇಂದು ಗಣ್ಯ ವ್ಯಕ್ತಿಗಳಲ್ಲದವರಿಗೂ ಗೌರವ ಡಾಕ್ಟರೇಟ್‌ಗಳನ್ನು ಪಡೆಯುತ್ತಿದ್ದಾರೆ.
ಹೀಗಾಗಿ, ಸುಪ್ರೀಂಕೋರ್ಟ್ ಗೌರವ ಡಾಕ್ಟರ್ ಎಂಬ ಹಾವಳಿಯನ್ನು ತಪ್ಪಿಸಲು ಗೌರವ ಡಾಕ್ಟರೇಟ್‌ಗೆ ಭಾಜನರಾದವರು ತಮ್ಮ ಹೆಸರುಗಳ ಹಿಂದೆ ಡಾಕ್ಟರೇಟ್ ಎಂಬ ಪದವನ್ನು ಬಳಸಿಕೊಳ್ಳಬಾರದೆಂದು ಆದೇಶ ಹೊರಡಿಸಿದೆ. ಆದರೂ ಆ ಪದವನ್ನು ಬಳಸಿಕೊಂಡು ಓಡಾಡುತ್ತಿದ್ದಾರೆ ಎಂದು ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ನ್ಯಾಯ ಮೂರ್ತಿಯಾಗಿದ್ದಾಗ ನಾನು ಸಮಾಜದ ಭ್ರಷ್ಟಾಚಾರದ ಬಗ್ಗೆ ಕೇಳಿದ್ದೇ ವಿನಹ ಅದನ್ನು ಕಣ್ಣಾರೆ ಕಂಡಿರಲಿಲ್ಲ. ಆದರೆ, ನಾನು ಲೋಕಾಯುಕ್ತ ಹುದ್ದೆಗೆ ಏರಿದಾಗ ಈ ಸಮಾಜದಲ್ಲಿ ಎಷ್ಟು ಭ್ರಷ್ಟಾಚಾರ ನಡೆಯುತ್ತಿದೆಯೆಂಬ ಸಂಪೂರ್ಣ ಮಾಹಿತಿ ನನಗೆ ಒದಗಿತು.ಹೀಗಾಗಿ, ನಾನು ಭ್ರಷ್ಟಾಚಾರವನ್ನು ತೋಲಗಿಸಬೇಕೆಂಬ ಉದ್ದೇಶದಿಂದ ಸ್ವಾತಂತ್ರ ಹೋರಾಟಗಾರ ಅಣ್ಣಾ ಹಝಾರೆ ಅವರೊಂದಿಗೆ ಭ್ರಷ್ಟಾ ಚಾರ ವಿರೋಧಿ ಆಂದೋಲನದಲ್ಲಿ ತೊಡಗಿದೆ ಎಂದು ಅವರು ತಿಳಿಸಿದರು.

ಅಧಿಕಾರ ಹಾಗೂ ಶ್ರೀಮಂತಿಕೆಯ ದರ್ಪದಿಂದ ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದನ್ನು ಹೋಗಲಾಡಿಸಲು ಯುವ ಕರೇ ಕಂಕಣಬದ್ಧರಾಗಿ ನಿಲ್ಲಬೇಕು ಎಂದ ಅವರು, ಎರಡಕ್ಷರವನ್ನು ವಿದ್ಯಾರ್ಥಿಗಳ ತಲೆಗೆ ಹಾಕುವ ಉದ್ದೇಶದಿಂದ ರಾಜ್ಯದ ಕಾಲೇಜು ಗಳಿಗೆ ಉಪಾನ್ಯಾಸ ನೀಡುತ್ತಿದ್ದೇನೆ ಎಂದು ಹೇಳಿದರು.

ನಾನು ಚಿಕ್ಕವನಾಗಿದ್ದಾಗ ಪಠ್ಯ ಪುಸ್ತಕಗಳಲ್ಲಿ ಈ ಕೆಲಸವನ್ನು ಮಾಡಬೇಕು.ಈ ಕೆಲಸವನ್ನು ಮಾಡಬಾರದೆಂದು ಬರೆದಿರುತ್ತಿತ್ತು.ಆದರೆ, ಇಂದಿನ ಪಠ್ಯ ಪುಸ್ತಕಗಳಲ್ಲಿ ಹೇಗೆ ದುಡ್ಡು ಮಾಡಬೇಕೆಂಬುದನ್ನು ಬರೆದಿರುತ್ತಾರೆ.ಇದರಿಂದಲೂ ಅತ್ಯಾಚಾರಗಳು ನಡೆಯುತ್ತಿರ ಬಹುದೆಂದು ಅನಿಸುತ್ತಿದೆ ಎಂದು ಅವರು ಹೇಳಿದರು.

ಪತ್ರಕರ್ತ ಗಣೇಶ್ ಕಾಸರ ಗೋಡು ಅವರಿಗೆ ಚದುರಿದ ಚಿತ್ರಗಳು ಕೃತಿಯ ರಚನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಾಡೋಜ ಡಾ.ಬಿ.ಕೆ.ಸುಮಿತ್ರ, ಪತ್ರಕರ್ತ ಗಣೇಶ್ ಕಾಸರಗೋಡು, ಸ್ಥಾಪಕ ಅಧ್ಯಕ್ಷೆ ವೃಂದಾ ಎಸ್. ರಾವ್ ಮತ್ತಿತರರು ಉಪಸ್ಥಿತರಿದ್ದರು.

Write A Comment