ಕರ್ನಾಟಕ

ಹಬ್ಬದ ದಿನದಂದೆ ಯುವಕನ ಬರ್ಬರ ಹತ್ಯೆ; ಆರೋಪಿಗಳ ಪತ್ತೆಗೆ ಪೊಲೀಸರ ಹುಡುಕಾಟ

Pinterest LinkedIn Tumblr

murder1

ಬೆಂಗಳೂರು, ಅ.4: ಹಬ್ಬದ ದಿನದಂದೇ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದುಷ್ಕರ್ಮಿಗಳು ಠಾಣಾ ವ್ಯಾಪ್ತಿಯಲ್ಲಿ 25 ವರ್ಷದ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ರಸ್ತೆಗೆ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಎಂ ರಸ್ತೆಯ ಆರ್‌ಕೆ ಲಾಡ್ಜ್ ಸಮೀಪ ನೀಲಿ ಪ್ಲಾಸ್ಟಿಕ್ ಮೂಟೆಯನ್ನು ನಾಯಿ ಗಳು ಎಳೆದಾಡುತ್ತಿದ್ದ ದೃಶ್ಯ ಕಂಡ ಸ್ಥಳೀಯರು ಚೀಲ ಬಿಚ್ಚಿ ನೋಡಿದಾಗ ವ್ಯಕ್ತಿಯ ರುಂಡ ಹಾಗೂ ಕೈಗಳಿಲ್ಲದ ದೇಹ ಪತ್ತೆಯಾಗಿದೆ. ತಕ್ಷಣ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ವ್ಯಕ್ತಿಯ ರುಂಡ, ಕೈ-ಕಾಲುಗಳನ್ನು ಕತ್ತರಿಸಿ ದೇಹ ದ ಭಾಗವನ್ನು ಮಾತ್ರ ಚೀಲದಲ್ಲಿಟ್ಟು ರಸ್ತೆಗೆ ಎಸೆದು ಪರಾರಿಯಾಗಿರುವ ವಿಷಯ ಬಹಿರಂಗಗೊಂಡಿದೆ.

ದುಷ್ಕರ್ಮಿಗಳು ವ್ಯಕ್ತಿಯನ್ನು ಬೇರೆ ಕಡೆ ಕೊಲೆ ಮಾಡಿ ದೇಹದ ಅಂಗಾಂಗಗಳನ್ನು ಬೇರ್ಪಡಿಸಿ ಎದೆ ಭಾಗವನ್ನು ಮಾತ್ರ ಪ್ಲಾಸ್ಟಿಕ್‌ನಲ್ಲಿ ಸುತ್ತಿಟ್ಟು ರಸ್ತೆಗೆ ಎಸೆದು ಪರಾರಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರದೇಶದಲ್ಲಿ ಅಪರಿಚಿತ ಇನೋವಾ ಕಾರೊಂದು ರಾತ್ರಿಯೆಲ್ಲ ಓಡಾಡುತ್ತಿದ್ದು, ಕಾರಿನಲ್ಲಿದ್ದವರು ಪ್ಲಾಸ್ಟಿಕ್ ಚೀಲವೊಂದನ್ನು ಎಸೆದು ಹೋದದ್ದನ್ನು ವ್ಯಕ್ತಿಯೊಬ್ಬರು ಗಮನಿಸಿದ್ದಾರೆ ಎನ್ನಲಾಗಿದೆ. ಆ ವ್ಯಕ್ತಿ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಇನೋವಾ ಕಾರಿನಲ್ಲಿದ್ದವರೇ ಶವವನ್ನು ಎಸೆದು ಹೋಗಿರುವ ಸಾಧ್ಯತೆ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿ ತನಿಖೆ ನಡೆಸುತ್ತಿದ್ದಾರೆ. ಈ ಮೊಕದ್ದಮೆಯನ್ನು ದಾಖಲಿಸಿಕೊಂಡಿರುವ ಕಲಾಸಿಪಾಳ್ಯ ಠಾಣಾ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment