ಮನೋರಂಜನೆ

ಸಾಂಸ್ಕೃತಿಕ ವೈಭವದೊಂದಿಗೆ ಏಷ್ಯನ್ ಗೇಮ್ಸ್ ಮುಕ್ತಾಯ

Pinterest LinkedIn Tumblr

South-Korea-gold

ಇಂಚೋನ್, ಅ.4: ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ಹೈ-ವೋಲ್ಟೇಜ್ 17ನೆ ಆವೃತ್ತಿಯ ಏಷ್ಯನ್ ಗೇಮ್ಸ್ ದಕ್ಷಿಣ ಕೊರಿಯಾದಲ್ಲಿ ಇಂದು ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡಿದೆ. ಸಮಾರಂಭದಲ್ಲಿ ಕೊರಿಯಾದ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು.

ಈ ಬಾರಿಯ ಗೇಮ್ಸ್‌ನಲ್ಲಿ 151 ಚಿನ್ನದ ಪದಕವನ್ನು ಜಯಿಸಿದ ವಿಶ್ವ ಕ್ರೀಡೆಯ ದೈತ್ಯ ಶಕ್ತಿ ಚೀನಾ ಸತತ 9ನೆ ಆವೃತ್ತಿಯಲ್ಲೂ ನಂ.1 ಸ್ಥಾನ ಕಾಯ್ದುಕೊಂಡಿದೆ. 79 ಚಿನ್ನ ಜಯಿಸಿದ್ದ ಆತಿಥೇಯ ಕೊರಿಯಾ ಎರಡನೆ ಹಾಗೂ 47 ಚಿನ್ನ ಗೆದ್ದುಕೊಂಡ ಜಪಾನ್ ಮೂರನೆ ಸ್ಥಾನವನ್ನು ಗಿಟ್ಟಿಸಿಕೊಂಡಿತು. ಜನಸಂಖ್ಯೆಯಲ್ಲಿ ಚೀನಾ ನಂತರ ಎರಡನೆ ಸ್ಥಾನದಲ್ಲಿರುವ ಭಾರತ ಅಗ್ರ-10ರಲ್ಲಿ ಸ್ಥಾನ ಪಡೆದು ನಿರಾಸೆಗೊಳಿಸಿದೆ.

ಗೇಮ್ಸ್‌ನಲ್ಲಿ 14 ವಿಶ್ವ ದಾಖಲೆಗಳು ದಾಖಲಾಗಿದ್ದು, 40 ಏಷ್ಯಾ ದಾಖಲೆಗಳು ಮುರಿಯಲ್ಪಟ್ಟವು. ಇಂದು ಕೊರಿಯಾ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮನರಂಜಿಸಿದರು. ಕಾರ್ಯಕ್ರಮ ಕೊನೆಗೊಂಡ ತಕ್ಷಣವೇ ಒಲಿಂಪಿಕ್ಸ್ ಕೌನಿಲ್ಸ್ ಆಫ್ ಏಷ್ಯಾದ ಮುಖ್ಯಸ್ಥ ಶೇಖ್ ಅಹ್ಮದ್ ಫಹಾದ್ ಅಲ್-ಸಬಾ ಗೇಮ್ಸ್‌ಗೆ ಮುಕ್ತಾಯವಾಯಿತು ಎಂದು ಅಧಿಕೃತವಾಗಿ ಘೋಷಿಸಿದರು. ಗೇಮ್ಸ್ ಕೊನೆಗೊಂಡಿದೆ ಎಂಬ ಸಂಕೇತವಾಗಿ ಒಸಿಎ ಧ್ವಜವನ್ನು ಕೆಳಗಿಳಿಸಿ, ಸ್ಟೇಡಿಯಂನಲ್ಲಿ ಗೇಮ್ಸ್‌ನ ಅಧಿಕೃತ ಗೀತೆಯನ್ನು ನುಡಿಸಲಾಯಿತು. 15 ದಿನಗಳ ಕಾಲ ನಡೆದ ಗೇಮ್ಸ್‌ನಲ್ಲಿ 45 ದೇಶಗಳ ಅಥ್ಲೀಟ್‌ಗಳು 36 ಕ್ರೀಡೆಗಳಲ್ಲಿ ಸಾವಿರಾರು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಇಂದು ಸಾಂಸ್ಕೃತಿಕ ಕಾರ್ಯಕ್ರಮದ ನಡುವೆ ವಿವಿಧ ದೇಶಗಳ ಅಥ್ಲೀಟ್‌ಗಳು ಒಟ್ಟಾಗಿ ಗೇಮ್ಸ್ ಹಬ್ಬವನ್ನು ಸವಿದರು. ಗೇಮ್ಸ್‌ನ ಘೋಷವಾಕ್ಯ ‘ಒನ್ ಏಷ್ಯಾ’ಕ್ಕೆ ಅನ್ವರ್ಥವಾಗಿ ಅಥ್ಲೀಟ್‌ಗಳು ಒಂದೆಡೆ ನೆರೆದರು.

ಕೊರಿಯಾದ ನ್ಯಾಶನಲ್ ಡ್ಯಾನ್ಸ್ ಕಂಪೆನಿ ‘ರೈನ್‌ಬೋ ಚೇರ್’ ಮೊದಲಿಗೆ ಕಾರ್ಯಕ್ರಮ ನೀಡಿತು. 30 ವಿವಿಧ ದೇಶಗಳ ಮಕ್ಕಳು ಏಷ್ಯಾದ ಸ್ನೇಹಿತರಿಗೆ ಶಾಂತಿ ಸಂದೇಶವನ್ನು ನೀಡಿದರು. ‘ನ್ಯಾಶನಲ್ ಘಾಟಕ್ ಡ್ಯಾನ್ಸ್ ಗ್ರೂಪ್ ’ಕೊರಿಯಾದ ಸಾಂಪ್ರದಾಯಿಕ ಮಾರ್ಷಲ್ ಆರ್ಟ್‌ನ್ನು ಪ್ರದರ್ಶಿಸಿತು. ಸ್ಟೇಡಿಯಂನಲ್ಲಿದ್ದ ದೈತ್ಯ ಪರದೆಯಲ್ಲಿ ಗೇಮ್ಸ್‌ನ ಹೈಲೈಟ್ಸ್, ಗೆಲುವು ಹಾಗೂ ಸೋಲಿನ ಕ್ಷಣ ಹಾಗೂ ಕ್ರೀಡಾ ಸಾಧನೆಯ ಕುರಿತು ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಪ್ರದರ್ಶಿಸಲಾಯಿತು. ಚೀನಾ ಎಲ್ಲ ವಿಭಾಗದ ಕ್ರೀಡೆಯಲ್ಲೂ ಪಾರಮ್ಯ ಸಾಧಿಸಿತು. ಕೊರಿಯಾ ಅಥ್ಲೆಟಿಕ್ಸ್‌ಗಳು 11 ಚಿನ್ನದ ಪದಕಗಳನ್ನು ಜಯಿಸಿದ್ದಲ್ಲದೆ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ 9 ವಿಶ್ವ ದಾಖಲೆಯನ್ನು ನಿರ್ಮಿಸಿ ಗಮನ ಸೆಳೆದರು. ಕೊರಿಯಾ 150 ಅಥ್ಲೀಟ್‌ಗಳನ್ನು ಕಣಕ್ಕಿಳಿಸಿತ್ತು.

ಉತ್ತರ ಕೊರಿಯಾದ ಮಹಿಳಾ ಫುಟ್ಬಾಲ್ ತಂಡ ಫೈನಲ್‌ನಲ್ಲಿ ಜಪಾನ್ ತಂಡವನ್ನು 3-1 ರಿಂದ ಮಣಿಸಿ ಚಿನ್ನದ ಪದಕವನ್ನು ಜಯಿಸಿರುವುದು ಗೇಮ್ಸ್‌ನ ಹೈಲೈಟ್ಸ್. ಉತ್ತರ ಕೊರಿಯಾದ ಪುರುಷರ ಫುಟ್ಬಾಲ್ ತಂಡ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಹಲವು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಯಿತು. 47,000 ಪ್ರೇಕ್ಷಕರ ನಡುವೆ ಬಿಗಿ ಭದ್ರತೆಯಲ್ಲಿ ನಡೆದ ಫುಟ್ಬಾಲ್ ಫೈನಲ್‌ನಲ್ಲಿ ಉಭಯ ತಂಡಗಳು ನಿಗದಿತ ಅವಧಿಯಲ್ಲಿ ಸ್ಕೋರ್ ದಾಖಲಿಸಲು ವಿಫಲವಾದವು. ದಕ್ಷಿಣ ಕೊರಿಯಾ ತಂಡ ಹೆಚ್ಚುವರಿ ಸಮಯದ 29ನೆ ನಿಮಿಷದಲ್ಲಿ ಗೋಲು ಬಾರಿಸಿ ಚಿನ್ನದ ಪದಕವನ್ನು ಜಯಿಸಿತು. ಈ ಬಾರಿಯ ಏಷ್ಯನ್ ಗೇಮ್ಸ್ ವಿವಾದಗಳಿಂದ ಮುಕ್ತವಾಗಿಲ್ಲ. ಬಾಕ್ಸಿಂಗ್‌ನಲ್ಲಿ ಐದು ದೇಶಗಳಿಂದ ದೂರುಗಳು ದಾಖಲಾಗಿದ್ದವು. ಕತರ್ ಮಹಿಳಾ ಬಾಸ್ಕೆಟ್‌ಬಾಲ್ ತಂಡ ಗೇಮ್ಸ್‌ನಲ್ಲಿ ಸಾಂಪ್ರದಾಯಿಕ ಶಿರವಸ್ತ್ರ(ಹಿಜಾಬ್) ಧರಿಸಲು ನಿಷೇಧ ಹೇರಿದ ಹಿನ್ನೆಲೆಯಲ್ಲಿ ಗೇಮ್ಸ್‌ನಲ್ಲಿ ಒಂದೂ ಪಂದ್ಯವನ್ನು ಆಡದೇ ಹೊರಗುಳಿಯಿತು.

‘‘ಗೇಮ್ಸ್‌ನಲ್ಲಿ ಹಿಜಾಬ್ ಧರಿಸಲು ನಿಷೇಧ ಹೇರುವ ನಿಯಮ ತಾರತಮ್ಯದಿಂದ ಕೂಡಿದೆ. ಬ್ಯಾಸ್ಕೆಟ್‌ಬಾಲ್ ಮಾತ್ರ ಹಿಜಾಬ್ ಧರಿಸಲು ನಿರಾಕರಿಸಲು ಕಾರಣವೇನೆಂದು ತಿಳಿಯಲಿಲ್ಲ ’’ಎಂದು ಒಸಿಎ ಅಧ್ಯಕ್ಷ ಅಲ್ ಸಬಾ ಹೇಳಿದ್ದಾರೆ. ಶನಿವಾರ ಮಧ್ಯಾಹ್ನ ಚೀನಾದ ಚಿನ್ನದ ಪದಕ ವಿಜೇತ ಹ್ಯಾಮರ್ ಥ್ರೋವರ್ ಹಾಗೂ ಮಲೇಷ್ಯಾದ ವುಶು ಕ್ರೀಡೆಯ ಚಾಂಪಿಯನ್ ಸಹಿತ ಆರು ಅಥ್ಲೀಟ್‌ಗಳ ವಿರುದ್ಧ ಡೋಪಿಂಗ್ ಪ್ರಕರಣವನ್ನು ದಾಖಲಿಸಲಾಗಿದೆ. ಕಾಂಬೋಡಿಯದ ಸಾಫ್ಟ್ ಟೆನಿಸ್ ಆಟಗಾರರು ಹಾಗೂ ತಜಕಿಸ್ತಾನದ ಫುಟ್ಬಾಲ್ ಆಟಗಾರರ ವಿರುದ್ಧ ಉದ್ದೇಶಪೂರ್ವಕವಾಗಿ ವಂಚಿಸಿದ ಆರೋಪದಲ್ಲಿ ನಿಷೇಧ ಹೇರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 18ನೆ ಆವೃತ್ತಿಯ ಏಷ್ಯನ್ ಗೇಮ್ಸ್ ಆತಿಥ್ಯವನ್ನು ಇಂಡೋನೇಷ್ಯಾ ವಹಿಸಿಕೊಂಡಿದೆ. 1951ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಮೊದಲ ಏಷ್ಯನ್ ಗೇಮ್ಸ್‌ನ ಜ್ಯೋತಿ ಹಾಗೂ ಧ್ವಜವನ್ನು 2018ರ ಗೇಮ್ಸ್‌ನ ಪ್ರತಿನಿಧಿಗಳಿಗೆ ಇಂದು ಇಲ್ಲಿ ಹಸ್ತಾಂತರಿಸಲಾಯಿತು.

Write A Comment