ಕರ್ನಾಟಕ

ವಿಶ್ವದ ಅತಿದೊಡ್ಡ ವುಹಾತ್ಮ ಗಾಂಧಿ ಪ್ರತಿಮೆ ಲೋಕಾರ್ಪಣೆ; ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಸುವವರ ಬಗ್ಗೆ ಎಚ್ಚರವಹಿಸಿ: ಸಿಎಂ ಸಿದ್ದರಾಮಯ್ಯ

Pinterest LinkedIn Tumblr

gandhi

ಬೆಂಗಳೂರು, ಅ.2: ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ದುಷ್ಟಶಕ್ತಿಗಳ ಬಗ್ಗೆ ಸದಾ ಎಚ್ಚರಿಕೆಯಿಂದಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಗುರುವಾರ ವಿಧಾನಸೌಧ ಹಾಗೂ ವಿಕಾಸಸೌಧ ನಡುವೆ ಸ್ಥಾಪಿಸಲಾಗಿರುವ ಧ್ಯಾನಾಸಕ್ತ ಭಂಗಿಯಲ್ಲಿರುವ ವಿಶ್ವದ ಅತಿದೊಡ್ಡ ಮಹಾತ್ಮಗಾಂಧಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಮಹಾತ್ಮಗಾಂಧಿಯನ್ನು ಮತಾಂಧರು ಗುಂಡಿಕ್ಕಿ ಕೊಂದರು. ಸ್ವಾತಂತ್ರ ಬಂದು ಆರು ದಶಕಗಳು ಪೂರ್ಣಗೊಂಡಿದ್ದರೂ ಕೂಡ ಇಂದಿಗೂ ಸಮಾಜದಲ್ಲಿ ಬೆಂಕಿ ಹಚ್ಚುವ, ಜಾತಿ-ಧರ್ಮಗಳ ನಡುವೆ ಗೋಡೆ ಕಟ್ಟುವ, ಸಮಾಜದಲ್ಲಿನ ಶಾಂತಿಯನ್ನು ಕದಡುವವರು ಇದ್ದಾರೆ. ಇಂತಹ ಮತಾಂಧರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ಗಾಂಧೀಜಿ ಸೇರಿದಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಮಹನೀಯರು ಅಧಿಕಾರ ಅನುಭವಿಸುವ ಯಾವುದೇ ಕನಸು ಕಂಡಿರಲಿಲ್ಲ. ಬ್ರಿಟಿಷರ ಸಂಕೋಲೆಯಿಂದ ದೇಶವನ್ನು ಬಿಡುಗಡೆಗೊಳಿಸಿ, ಜನಸಾಮಾನ್ಯರಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯಗಳಿಸಿಕೊಟ್ಟು ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕೆಂಬ ಮಹದಾಸೆ ಹೊಂದಿದ್ದರು ಎಂದು ಮುಖ್ಯಮಂತ್ರಿ ತಿಳಿಸಿದರು.

ಮಹಾತ್ಮಗಾಂಧಿ ಎಂದಿಗೂ ಅಧಿಕಾರವನ್ನು ಅನುಭವಿಸಲಿಲ್ಲ. ಆದರೆ, ಲಾಲ್ ಬಹಾದ್ದೂರ್ ಶಾಸ್ತ್ರಿ ಕೇಂದ್ರ ಸಚಿವರು, ಪ್ರಧಾನಮಂತ್ರಿಯಾಗಿ ಅಧಿಕಾರ ನಡೆಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ತಮ್ಮ ಸಾರ್ವಜನಿಕ ಜೀವನದಲ್ಲಿ ಶೇ.100ರಷ್ಟು ಪ್ರಾಮಾಣಿಕತೆಯನ್ನು ಕಾಯ್ದುಕೊಂಡಿದ್ದರು. ಈ ಇಬ್ಬರು ಮಹನೀಯರ ಪ್ರಾಮಾಣಿಕತೆ, ತತ್ವ, ಆದರ್ಶಗಳನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಅಹಿಂಸೆ ಎಷ್ಟು ಪ್ರಬಲ ಅಸ್ತ್ರ ಎಂಬುದನ್ನು ವಿಶ್ವಕ್ಕೆ ಸಾರಿದ ನಾಯಕ ಮಹಾತ್ಮಗಾಂಧಿ, ಹಿಂಸಾಚಾರವಿಲ್ಲದೆ, ಯುದ್ಧ ಮಾಡದೆ ದೇಶಕ್ಕೆ ಸ್ವಾತಂತ್ರವನ್ನು ತಂದುಕೊಟ್ಟರು. ಸಮಾಜದಲ್ಲಿ ಸಂಪೂರ್ಣ ಬದಲಾವಣೆ ತರಲು ಗಾಂಧಿ ಬಯಸಿದ್ದರು. ಪರಿಶಿಷ್ಟ ಜಾತಿ, ಪಂಗಡಗಳ ಜನರನ್ನು ಹರಿಜನರು ಎಂದು ಕರೆಯುವ ಮೂಲಕ ಅವರಿಗೆ ಸಾಮಾಜಿಕ ಮನ್ನಣೆ ಕಲ್ಪಿಸಿಕೊಟ್ಟರು ಎಂದು ಸಿದ್ದರಾಮಯ್ಯ ತಿಳಿಸಿದರು.

ಮಧ್ಯರಾತ್ರಿಯಲ್ಲಿ ಹೆಣ್ಣುಮಗಳು ನಿರ್ಭಯವಾಗಿ ಓಡಾಡುವಂತಹ ವಾತಾವರಣ ದೇಶದಲ್ಲಿ ನಿರ್ಮಾಣವಾಗಬೇಕು ಎಂದು ಗಾಂಧಿ ಕನಸುಕಂಡಿದ್ದರು. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳನ್ನು ತಡೆಯಲು ಹಲವಾರು ಕಾನೂನುಗಳಿವೆ. ಆದರೆ, ಜನಸಾಮಾನ್ಯರ ಸಹಕಾರವಿಲ್ಲದೆ ಕಾನೂನುಗಳ ಮೂಲಕವೇ ಅಂತಹ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದುದರಿಂದ, ಮಹಿಳೆಯರು, ದುರ್ಬಲ ವರ್ಗದವರ ರಕ್ಷಣೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು.

ಸತ್ಯ ಹಾಗೂ ಶಾಂತಿ ಮಂತ್ರದ ಮೂಲಕ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಕೀರ್ತಿ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಸಲ್ಲುತ್ತದೆ. ಪ್ರತಿಮೆಗಳನ್ನು ಸ್ಥಾಪಿಸಲು ನಾವು ಹೇಳಿ ಮಾಡಿಸಿದ ಜನ. ಆದರೆ, ಮಹನೀಯರ ತತ್ವ, ಆದರ್ಶಗಳನ್ನು ಮಾತ್ರ ಮರೆತಿದ್ದೇವೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ವಿಧಾನಸೌಧ ಹಾಗೂ ವಿಕಾಸಸೌಧ ನಡುವೆ ನಿರ್ಮಾಣವಾಗಿರುವ ಈ ಭವ್ಯ ಪ್ರತಿಮೆಯಿಂದ ಸ್ಫೂರ್ತಿ ಪಡೆದು ಇನ್ನಾದರೂ ಆಡಳಿತ ಯಂತ್ರ ಚುರುಕಾಗಲಿ. ಕಡತಗಳು ತ್ವರಿತಗತಿಯಲ್ಲಿ ವಿಲೇವಾರಿಯಾಗಲಿ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜನಪ್ರಿಯವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಹೊಣೆಗಾರಿಕೆ ಹೊಂದಿರುವ ಆಡಳಿತಯಂತ್ರ ಕ್ರಿಯಾಶೀಲವಾಗಿ ಕರ್ನಾಟಕವನ್ನು ದೇಶದಲ್ಲೆ ಪ್ರಗತಿಪರ ರಾಜ್ಯವನ್ನಾಗಿ ಮಾಡಲಿ ಎಂದು ಅವರು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಧ್ಯಾನಾಸಕ್ತ ಭಂಗಿಯಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಯ ಶಿಲೆ 27 ಅಡಿ ಹಾಗೂ ಪೀಠ 13 ಅಡಿಯಿದ್ದು, ಒಟ್ಟಾರೆ 40 ಅಡಿ ಎತ್ತರದ ಪ್ರತಿಮೆ ಇದಾಗಿದೆ. ಕಳೆದ ಜೂ.6ರಂದು ಪ್ರತಿಮೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಕೇವಲ ಮೂರು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡು ಗಾಂಧಿ ಜಯಂತಿಯಂದೆ ಪ್ರತಿಮೆ ಉದ್ಘಾಟನೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಸನ್ಮಾನ:
ವಿಶ್ವದ ಅತೀ ಎತ್ತರದ ಈ ಗಾಂಧಿ ಪುತ್ಥಳಿಯ ಶಿಲ್ಪಿಗಳಾದ ರಾಮ್ ಸುತಾರ್ ಹಾಗೂ ಅವರ ಪುತ್ರ ಅನಿಲ್ ಆರ್.ಸುತಾರ್ ಅವರನ್ನು ಮೈಸೂರು ಪೇಟ ತೊಡಿಸಿ, ಅಂಬಾರಿ ಹೊತ್ತ ದಸರಾ ಆನೆಯ ಸ್ಮರಣಿಕೆ ನೀಡಿ ಮುಖ್ಯಮಂತ್ರಿ ಸನ್ಮಾನಿಸಿದರು. ಸಮಾರಂಭದಲ್ಲಿ ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ, ವಿಧಾನಪರಿಷತ್ ಉಪಸಭಾಪತಿ ಪುಟ್ಟಣ್ಣ, ಸಚಿವರಾದ ಎಚ್.ಕೆ.ಪಾಟೀಲ್, ಅಂಬರೀಶ್, ಡಾ.ಎಚ್.ಸಿ.ಮಹದೇವಪ್ಪ, ಉಮಾಶ್ರೀ, ರಮಾನಾಥರೈ, ಎಸ್.ಆರ್. ಪಾಟೀಲ್, ವಿಧಾನಪರಿಷತ್ ಸದಸ್ಯೆ ಮೋಟಮ್ಮ, ಮಾಜಿ ಕೇಂದ್ರ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Write A Comment