ಕರಾವಳಿ

ಕಾರವಾರ: ಭಾರೀ ಮಳೆ; ನೂರಾರು ಎಕರೆ ಭತ್ತದ ಬೆಳೆ ನಾಶ

Pinterest LinkedIn Tumblr


ಕಾರವಾರ: ಭಾರೀ ಮಳೆಗೆ ತಾಲೂಕಿನ ನಗೆಕೊವೆ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಬೆಳೆ ಮಳೆ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದು, ರೈತರು ನಷ್ಟ ಅನುಭವಿಸುವಂತೆ ಆಗಿದೆ.

ಇನ್ನೇನು ಕಟಾವಿಗೆ ಸಿದ್ಧವಾಗಿದ್ದ ರೈತರಿಗೆ ಮಹಾ ಮಳೆ ಬರಸಿಡಿಲಿನಂತೆ ಬಂದೆರಗಿದೆ. ಕಟಾವಿಗೆ ಬಂದ ಬೆಳೆ ಸಂಪೂರ್ಣ ನಾಶವಾಗಿದ್ದು, ಪ್ರವಾಹದ ನೀರಿನಲ್ಲಿ ತೇಲಿ ಬಂದ ಮರದ ದಿಮ್ಮಿಗಳು ಕಸ ಕಡ್ಡಿಗಳು ಕೃಷಿ ಭೂಮಿ ಸೇರಿಕೊಂಡು ಬೆಳೆಯನ್ನು ಹಾಳು ಮಾಡಿದೆ. ಇದರಿಂದ ಕೈ ಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಇಲ್ಲಿನ ರೈತರದ್ದಾಗಿದೆ. ಇದಷ್ಟೆ ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭತ್ತದ ಬೆಳೆ ನಾಶವಾಗಿದೆ. ಆಕಾಶ ನೋಡುತ್ತಿದ ಭತ್ತದ ತೆನೆಗಳು ಪ್ರವಾಹದ ತೀವ್ರತೆಗೆ ನೆಲಕಚ್ಚಿದ್ದು ನೋಡ ನೋಡುತ್ತಲೆ ಬೆಳೆದ ಬೆಳೆ ನೀರು ಪಾಲಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಇದೇ ಗ್ರಾಮದಲ್ಲಿ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಹಾನಿಗೆ ತತ್ತರಿಸಿತ್ತು. ಇದರಿಂದ ಚೇತರಿಕೆ ಕಾಣುವ ಮೊದಲೇ ಮತ್ತೆ ಮಳೆ ಆವಾಂತರ ಸೃಷ್ಟಿಸಿದ್ದು ಮಳೆ ಪ್ರವಾಹ ನಿಂತರೂ ರೈತರ ಕಣ್ಣೀರ ಕೋಡಿ ನಿರಂತರವಾಗಿದೆ.

ಕಳೆದ ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆಗೆ ಇಲ್ಲಿನ ರೈತರು ಬೆಳೆ ಹಾನಿ ಜೊತೆಗೆ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈಗ ಮತ್ತೊಮ್ಮೆ ಮಳೆ ರೈತರ ಬಾಳಲ್ಲಿ ಚೆಲ್ಲಾಟ ಆಡಿದೆ. ಭತ್ತದ ಸಸಿ ತೆನೆ ಬಂದು ಕಟಾವು ಮಾಡುವ ಕಾರ್ಯದ ಸರಿ ಹೊತ್ತಿನಲ್ಲಿ ಸುರಿದ ಮಳೆಗೆ ಪೈರುಗಳು ಕೊಚ್ಚಿ ಹೋಗಿವೆ. ಕರಾವಳಿಯಲ್ಲಿ ಭತ್ತ ವೇ ಪ್ರಧಾನ ಬೆಳೆಯಾಗಿದ್ದು, ಯಾವುದೇ ಪರ್ಯಾಯ ಬೆಳೆ ಇಲ್ಲ. ಈ ಬಾರಿ ಮಳೆ ಭತ್ತವನ್ನು ಸಂಪೂರ್ಣವಾಗಿ ನಾಶ ಮಾಡಿದ್ದು, ಮುಂದೇನು ಮಾಡುವುದು ಎಂಬ ಆತಂಕದಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ.

ಕರಾವಳಿಯ ಮೇಲಿಂದ ಮೇಲೆ ನಿರಂತರವಾಗಿ ಸುರಿಯುತ್ತಿರುವ ಮಳೆ ಗಾಯದ ಮೇಲೆ ಬರೆ ಎಳೆಯುತ್ತಲೆ ಇದೆ. ಜೂನ್ ನಿಂದಲೇ ರೈತರ ಪಾಲಿಗೆ ವರವಾಗಬೇಕಿದ್ದ ಮಳೆ ವಿಳಂಬವಾಗಿತ್ತು. ಬಿತ್ತನೆ ಆರಂಭವಾದರೂ ಮಳೆ ಆಗಿರಲಿಲ್ಲ. ಈ ಸಂದರ್ಭದಲ್ಲಿ ಹತ್ತಿ ಬೆಳೆಯಲು ಮುಂದಾದ ಜನರಿಗೆ ಮಳೆ ಹಾನಿ ಮಾಡಿತು. ಬಳಿಕ ಮಳೆ ನೆಚ್ಚಿ ಭತ್ತದ ನಾಟಿ ಮಾಡಲಾಗಿತ್ತು. ಆದರೆ, ನಿರಂತರ ಮಳೆ ರೈತರಿಗೆ ಒಂದರ ಮೇಲೆ ಒಂದರಂತೆ ಆಘಾತ ನೀಡುತ್ತಿದ್ದು, ರೈತರ ಸ್ಥಿತಿ ಈಗ ದಿಕ್ಕು ತೋಚದಂತೆ ಆಗಿದೆ.

Comments are closed.