ಹೊಸದಿಲ್ಲಿ: ‘ಕೊರೊನಾ ಬಿಕ್ಕಟ್ಟು ನಿಭಾಯಿಸುವ ವಿಷಯದಲ್ಲಿ ಭಾರತಕ್ಕಿಂತಲೂ ಪಾಕಿಸ್ತಾನ ಮತ್ತು ಅಫಘಾನಿಸ್ತಾನ ಉತ್ತಮ ಸಾಧನೆ ಮಾಡಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಸರಣಿ ಟ್ವೀಟ್‌ಗಳಲ್ಲಿ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬಿಡುಗಡೆ ಮಾಡಿರುವ ಜಾಗತಿಕ ಆರ್ಥಿಕ ಸೂಚಿಯ ಪಟ್ಟಿಯನ್ನು ಲಗತ್ತಿಸಿ, ಕೇಂದ್ರ ಸರಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ”ಐಎಂಎಫ್ ಬಿಡುಗಡೆ ಮಾಡಿರುವ ಜಾಗತಿಕ ಆರ್ಥಿಕ ಸುಧಾರಣೆ ಸೂಚಿಯಲ್ಲಿ ಭಾರತದ ಸ್ಥಿತಿ ಆಘ್ಘನ್‌ಗಿಂತಲೂ ಕೆಟ್ಟದಾಗಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿದೆ.
ದೇಶದ ಆರ್ಥಿಕತೆಯು ಈ ವರ್ಷ ಶೇ.10.3ರಷ್ಟು ಭಾರಿ ಕುಸಿತ ಕಾಣಲಿದೆ ಎಂದು ಎಚ್ಚರಿಸಲಾಗಿದೆ. ಪ್ರಗತಿ ಪಟ್ಟಿಯಲ್ಲಿಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಚೀನಾ, ಭೂತಾನ್, ಪಾಕಿಸ್ತಾನ, ಶ್ರೀಲಂಕಾ, ಅಫಘಾನಿಸ್ತಾನ ನಂತರದ ಸ್ಥಾನದಲ್ಲಿಭಾರತ ಸ್ಥಾನ ಪಡೆದಿದೆ. ಈ ಆರ್ಥಿಕ ಹಿನ್ನಡೆಯ ಮುಖಭಂಗವೇ ಕೇಂದ್ರ ಸರಕಾರದ ದೊಡ್ಡ ಸಾಧನೆ,” ಎಂದು ವ್ಯಂಗ್ಯವಾಡಿದ್ದಾರೆ.
”ಕೋವಿಡ್ ಕಾರಣ ಆರ್ಥಿಕತೆ ಹಿನ್ನಡೆ ಅನುಭವಿಸಿದೆ ಎನ್ನುವುದು ಸರಕಾರ ಹೇಳುವ ನೆಪ. ಈ ವಿಷಯದಲ್ಲಿ ಭಾರತಕ್ಕಿಂತಲೂ ಬಾಂಗ್ಲಾ, ಪಾಕಿಸ್ತಾನ ಮತ್ತು ಅಫಘಾನಿಸ್ತಾನದಂತಹ ದೇಶಗಳೇ ಎಷ್ಟೋ ಪಾಲು ಉತ್ತಮ ಸಾಧನೆ ಮಾಡಿವೆ,” ಎಂದು ಅವರು ಹೇಳಿದ್ದಾರೆ.