ಕರಾವಳಿ

ಮರೆಯಾದ ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ; ಸಾವಿರಾರು ಮಂದಿಯಿಂದ ಅಂತಿಮ ನಮನ

Pinterest LinkedIn Tumblr

ಕುಂದಾಪುರ: ಎಚ್ಎ1ನ್1 ಹಾಗೂ ಶ್ವಾಸಕೋಶ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಾವನ್ನಪ್ಪಿದ್ದ ಕರ್ನಾಟಕದ ಐಪಿಎಸ್​ ಅಧಿಕಾರಿ ಮಧುಕರ ಶೆಟ್ಟಿ ಅವರ ಅಂತ್ಯಸಂಸ್ಕಾರ ಭಾನುವಾರ ಉಡುಪಿ ಜಿಲ್ಲೆ ಕುಂದಾಪುರದ ಯಡಾಡಿಯಲ್ಲಿ ಸಕಲ ಸರ್ಕಾರಿ ಗೌರವಗಳಿಂದ ನಡೆಯಿತು. ತಂದೆ- ತಾಯಿಯ ಸ್ಮಾರಕ ಪಕ್ಕದಲ್ಲೇ ಮಧುಕರ್ ಶೆಟ್ಟಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.

ಕುಶಾಲತೋಪು ಹಾರಿಸಿ, ರಾಷ್ಟ್ರಗೀತೆಯನ್ನು ಪೊಲೀಸ್ ಬ್ಯಾಂಡ್ ನಲ್ಲಿ ನುಡಿಸಿಡಿ ಸಕಲ ಸರಕಾರಿ ಗೌರವಗಳೊಡನೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮಧುಕರ ಶೆಟ್ಟಿ ಅವರ ಸಹೋದರ ಮುರಳೀಧರ ಶೆಟ್ಟಿ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದರು. ಕುಂದಾಪುರದ ಯಡಾಡಿಯಲ್ಲಿರುವ ಮಧುಕರ ಶೆಟ್ಟಿ ಅವರ ಮನೆ ಎದುರು ಭಾಗದಲ್ಲಿನ ತೋಟದಲ್ಲಿ ತಂದೆ ರಘುರಾಮ್ ಶೆಟ್ಟಿ ಹಾಗೂ ತಾಯಿ ಪ್ರಪುಲ್ಲಾ ಶೆಟ್ಟಿ ಸಮಾಧಿಯಿದ್ದು ಅದರ ಪಕ್ಕದಲ್ಲೇ ಮಧುಕರ ಶೆಟ್ಟಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸಾವಿರಾರು ಮಂದಿಯಿಂದ ಅಂತಿಮ ದರ್ಶನ…
ಹೈದರಾಬಾದ್​ನಲ್ಲಿ ಕೊನೆಯುಸಿರೆಳೆದಿದ್ದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿಮೃತದೇಹವನ್ನು ಮಂಗಳೂರು ವಿಮಾನ ನಿಲ್ದಾಣದಿಂದ ತಡರಾತ್ರಿ ಯಡಾಡಿಯ ‘ರೈ ಫಾರ್ಮ್’ಗೆ ತರಲಾಗಿದ್ದು ಮುಂಜಾನೆಯಿಂದ ಜನಪ್ರತಿನಿಧಿಗಳು, ಸಾರ್ವಜನಿಕರು, ಬಂಧು-ಮಿತ್ರರು, ರಾಜ್ಯ ಹಾಗೂ ಹೊರ ರಾಜ್ಯದ ಅಧಿಕಾರಿಗಳು ಮಧುಕರ ಶೆಟ್ಟಿಯವರ ಅಂತಿಮದರ್ಶನ ಪಡೆದಿದ್ದರು. ಅಂತಿಮ ದರ್ಶನದ ಬಳಿಕ ಮನೆ ಮುಂಭಾಗದಲ್ಲಿನ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಲಕ್ಷ್ಮಣ ನಿಂಬರ್ಗಿ ನೇತೃತ್ವದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿತ್ತು. ಈ ವೇಳೆ ಅವರ ಪತ್ನಿ, ಪುತ್ರಿ, ಸಹೋದರರು ಜೊತೆಗಿದ್ದರು. ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಬಿಜೆಪಿ ಮುಖಂಡ ಕೆ. ಜಯಪ್ರಕಾಶ ಹೆಗ್ಡೆ, ಕಾಂಗೆಸ್ ಕುಂದಾಪುರ ಬ್ಲಾಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ವಕ್ವಾಡಿ ಮೂಲದ ದುಬೈ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಮೊದಲಾದವರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಗುಪ್ತ ಶೆಟ್ಟಿ ಹಳ್ಳಿಯವರಿಂದ ನಮನ…
ಚಿಕ್ಕಮಗಳೂರು ಜಿಲ್ಲೆಯ ಎಸ್‌ಪಿಯಾಗಿದ್ದ ಸಂದರ್ಭದಲ್ಲಿ ಮಧುಕರ ಶೆಟ್ಟಿಯವರು ನಿರಾಶ್ರಿತರಾದ ಅರಣ್ಯವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದರು. ಇವರ ಬಗ್ಗೆ ಅಪಾರ ಅಭಿಮಾನವಿಟ್ಟಿದ್ದ ಗ್ರಾಮಸ್ಥರು, ಆ ಊರಿಗೆ ಗುಪ್ತ ಶೆಟ್ಟಿ ಎಂದು ಹೆಸರಿಟ್ಟಿದ್ದರು. ತಮಗೆ ಉಪಕಾರ ಮಾಡಿದ್ದ ದಕ್ಷ ಹಾಗೂ ಪ್ರಾಮಾಣಿಕ ಐಪಿಎಸ್ ಅಧಿಕಾರಿಯ ಅಂತಿಯ ದರ್ಶನ ಪಡೆಯಲು ಗುಪ್ತಶೆಟ್ಟಿಹಳ್ಳಿ ಗ್ರಾಮದ ಮಹಿಳೆಯರು, ಮಕ್ಕಳು ಹಾಗೂ ವೃದ್ದರು ಸೇರಿದಂತೆ 50ಕ್ಕೂ ಹೆಚ್ಚು ಜನರು ಯಡಾಡಿ ಗ್ರಾಮಕ್ಕೆ ಬಂದು ಅಂತಿಮ ದರ್ಶನ ಪಡೆದರು.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ:

ನಾಳೆ ಯಡಾಡಿಯಲ್ಲಿ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ(Video)

ಎಚ್‌1ಎನ್‌1ನಿಂದ ಬಳಲುತ್ತಿದ್ದ ಐಪಿಎಸ್ ಅಧಿಕಾರಿ ಮಧುಕರ್‌ ಶೆಟ್ಟಿ ವಿಧಿವಶ

ನಾರೋಗ್ಯಕ್ಕೆ ತುತ್ತಾದ ಐಪಿಎಸ್ ಅಧಿಕಾರಿ ಡಾ. ಮಧುಕರ್‌ ಶೆಟ್ಟರ ಆರೋಗ್ಯ ವೃದ್ಧಿಗೆ ಪ್ರಾರ್ಥನೆ

ಖಡಕ್ ಐಪಿಎಸ್ ಅಧಿಕಾರಿಗೆ ಇಷ್ಟದ ಹಾಡಿನೊಂದಿಗೆ ಕಣ್ಣೀರ ಅಂತಿಮ ನಮನ (Video)

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಂಚಭೂತಗಳಲ್ಲಿ ಲೀನ (Video)

Comments are closed.