ಕರಾವಳಿ

ಕರಾವಳಿ ಕಲೋತ್ಸವ ಕರಾವಳಿ ಉತ್ಸವದ ಭಾಗವಾಗಲಿ: ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ

Pinterest LinkedIn Tumblr

ಮಂಗಳೂರು: ‘ ಸರಕಾರದ ಆಶ್ರಯದಲ್ಲಿ ದ.ಕ.ಜಿಲ್ಲಾಡಳಿತ ಆಯೋಜಿಸುತ್ತಿರುವ ಕರಾವಳಿ ಉತ್ಸವ ಕರಾವಳಿಯ ಕಲೆ,ಸಂಸ್ಕೃತಿ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಚೆನ್ನಾಗಿ ನಡೆಯುತ್ತದೆ. ಆದರೆ ಅದು ಕೇವಲ ಮಂಗಳೂರಿಗರಿಗೆ ಸೀಮಿತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದಕ್ಕಾಗಿ ತಾಲೂಕು ಮಟ್ಟದಲ್ಲಿಯೂ ಅಂತಹ ಕಾರ್ಯಕ್ರಮಗಳನ್ನು ನಡೆಸುವ ಅಗತ್ಯವಿದೆ’ ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ , ಸಾಂಸ್ಕೃತಿಕ ಚಿಂತಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ‘ಚಿಣ್ಣರ ಲೋಕ’ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ರಿ. ಬಂಟ್ವಾಳ ಇವರ ಆಶ್ರಯದಲ್ಲಿ ಬಂಟ್ವಾಳ ಜೋಡು ಮಾರ್ಗದ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ‘ಕರಾವಳಿ ಕಲೋತ್ಸವ- 2018’ ಚಿಣ್ಣರೋತ್ಸವ – ರಾಜ್ಯ ಮಟ್ಟದ ನೃತ್ಯ ಪ್ರದರ್ಶನ ಮತ್ತು ನಾಟಕೋತ್ಸವದ ಏಳನೆಯ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಚಿಣ್ಣರ ಲೋಕ ಸಂಘಟನೆಯು ಬಹಳ ಅದ್ದೂರಿಯಿಂದ ನಡೆಸುತ್ತಿರುವ ಕಲೋತ್ಸವವು ಕರಾವಳಿ ಉತ್ಸವದ ಒಂದು ಭಾಗವಾಗಬೇಕು. ತಾಲೂಕು ಮಟ್ಟದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತವು ಸರಕಾರದಿಂದ ಗರಿಷ್ಠ ಪ್ರಮಾಣದ ಆರ್ಥಿಕ ನೆರವನ್ನು ಕಲ್ಪಿಸಿಕೊಡಬೇಕು’ ಎಂದವರು ನುಡಿದರು.ಬಂಟ್ವಾಳ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ನ್ಯಾಯವಾದಿ ಅಶ್ವಿನಿಕುಮಾರ್ ರೈ, ವರ್ಲ್ಡ್ ಕಿಂಗ್ಸ್ ಗೌರವ ಪುರಸ್ಕೃತ ಡಾ.ಹರ್ಷಕುಮಾರ್ ರೈ, ಸಿದ್ದಕಟ್ಟೆಯ ಅನಂತಪದ್ಮ ಹೆಲ್ತ್ ಸೆಂಟರ್ ನ ಡಾ.ಸುದೀಪ್ ಕುಮಾರ್, ಬೊಂಡಾಲ ಚಾರಿಟೇಬಲ್ ಟ್ರಸ್ಟ್ ನ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಪೋಲಿಸ್ ಅಧಿಕಾರಿ ಗಳಾದ ಪ್ರಸನ್ನ, ಹರೀಶ್ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದ ಯುವ ಸಾಧಕ ಶ್ರೇಯಸ್ ಕಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು.

‘ಚಿಣ್ಣರ ಲೋಕ ‘ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ಸ್ವಾಗತಿಸಿದರು. ಗೌರವಾಧ್ಯಕ್ಷ ಸುದರ್ಶನ ಜೈನ್ ಪ್ರಸ್ತಾವನೆಗೈದರು. ರಾಜೀವ ಕಕ್ಕೆಪದವು ನಿರೂಪಿಸಿ, ಶೇಷಪ್ಪ ವಂದಿಸಿದರು. ಉಪಾಧ್ಯಕ್ಷ ಜಯರಾಮ ರೈ ಉಪಸ್ಥಿತರಿದ್ದರು. ಬಳಿಕ ಸ್ನೇಹ ಕಲಾವಿದೆರ್ ಪುಣಚ ಇವರಿಂದ ‘ಕುಡ ಒಂಜಾಕ’ ತುಳು ನಾಟಕ ಜರಗಿತು.

Comments are closed.