ಕರಾವಳಿ

ನಾಳೆ ಯಡಾಡಿಯಲ್ಲಿ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ(Video)

Pinterest LinkedIn Tumblr

ಕುಂದಾಪುರ: ಎಚ್‌1ಎನ್‌1,ಶ್ವಾಸಕೋಶ ಹಾಗೂ ಹೃದಯ ಸೋಂಕಿನಿಂದ ಹೈದ್ರಾಬಾದ್‌ನ ಕಾಂಟಿನೆಂಟಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ ವಿಧಿವಶರಾದ ಉಡುಪಿ ಜಿಲ್ಲೆಯ ವಡ್ಡರ್ಸೆ ಮೂಲದ ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ (47) ಮೃತದೇಹವು ಭಾನುವಾರ ಬೆಳಿಗ್ಗೆ ಅವರ ಸ್ವನಿವಾಸವಾದ ಹೊಂಬಾಡಿ-ಮಂಡಾಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಯಡಾಡಿಗೆ ಆಗಮಿಸಲಿದ್ದು ಅಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.

 

(ಪ್ರತಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಹಾಗೂ ಪ್ರಪುಲ್ಲಾ ಶೆಟ್ಟಿಯವರ ಸಮಾಧಿ)

ಮಧುಕರ ಶೆಟ್ಟಿಯವರು ಬೆಳೆದ ಯಡಾಡಿಯ ನಿವಾಸವಾದ ‘ರೈ ಫಾರ್ಮ್’ ತೋಟದ ಮನೆಯಲ್ಲಿ ನೀರವ ಮೌನ ಕಾಣಿಸಿದೆ. ಬಂಧುಮಿತ್ರರು, ಊರಿನವರು, ಪೊಲೀಸ್ ಅಧಿಕಾರಿಗಳು ಈಗಾಗಲೇ ನಿವಾಸದ ಬಳಿ ಆಗಮಿಸಿದ್ದು ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಮಧುಕರ ಶೆಟ್ಟಿಯವರ ತಂದೆ-ತಾಯಿಯ ಸಮಾಧಿ ಇವರ ತೋಟದಲ್ಲಿಯೇ ಮಾಡಿದ್ದು ಅಲ್ಲೇ ಪಕ್ಕದಲ್ಲೇ ಇವರ ಅಂತ್ಯಸಂಸ್ಕಾರ ನಡೆಯಲಿದ್ದು ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ನೆಲ ಸಮದಟ್ಟು ಮಾಡುವ ಕಾರ್ಯವನ್ನು ಜೆಸಿಬಿ ಮೂಲಕ ಮಾಡಿಸಲಾಗುತ್ತಿದೆ. ಇಂದು ಮಧ್ಯಾಹ್ನದ ಸುಮಾರಿಗೆ ಬೆಂಗಳೂರಿಗೆ ಮೃತದೇಹ ಆಗಮಿಸಲಿದ್ದು ಸಂಜೆ ವೇಳೆಗೆ ವಿಶೇಷ ವಿಮಾನದಲ್ಲಿ ಮಂಗಳುರಿಗೆ ತರಲಾಗುತ್ತದೆ. ಬಳಿಕ ಭಾನುವಾರ ಯಡಾಡಿಗೆ ಮೃತದೇಹವನ್ನು ತಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಕುಟುಂಬಿಕರಾದ ಮನಮೋಹನದಾಸ್ ಶೆಟ್ಟಿ ‘ಕನ್ನಡಿಗ ವರ್ಲ್ಡ್’ಗೆ ತಿಳಿಸಿದ್ದಾರೆ. ಖ್ಯಾತ ಪ್ರತಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಹಾಗೂ ಪ್ರಪುಲ್ಲಾ ಶೆಟ್ಟಿಯವರ ಮೂರು ಪುತ್ರರಲ್ಲಿ ಎರಡನೇಯವರಾದ ಮಧುಕರ್ ಶೆಟ್ಟಿ ಪ್ರಸ್ತುತ ಹೈದರಬಾದಿನಲ್ಲಿ ನೆಲೆಸಿದ್ದು ಪತ್ನಿ ಹಾಗೂ ಪುತ್ರಿ ಅಮೆರಿಕಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

ಇನ್ನು ಕರ್ನಾಟಕ ಕೇಡರ್ 1999 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಹೈದರಾಬಾದಿನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚಿನ ಮೂರ್ನಾಲ್ಕು ತಿಂಗಳ ಹಿಂದೆ ಅಂದರೆ ನವರಾತ್ರಿ ಸಂದರ್ಭ ಯಡಾಡಿಗೆ ಆಗಮಿಸಿದ್ದರು ಎಂದು ಕುಟುಂಬಿಕರು ಹೇಳಿದ್ದಾರೆ. ಇಲ್ಲಿರುವ ಮನೆ, ತೋಟ, ಜಾನುವಾರುಗಳನ್ನು ಬೆಟ್ಟ ಶೆಟ್ಟಿ ಎನ್ನುವವರು ನೋಡಿಕೊಳ್ಳುತ್ತಿದ್ದಾರೆ.

ಭಾನುವಾರ ನಡೆಯಲಿರುವ ಅಂತಿಮವಿಧಿ ವಿಧಾನದ ಸಂದರ್ಭ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಬರುವ ಸಾಧ್ಯತೆಗಳಿದೆ ಎನ್ನಲಾಗಿದೆ. ತಡರಾತ್ರಿಯಿಂದಲೇ ಯಡಾಡಿಯಲ್ಲಿ ಕೋಟ, ಬ್ರಹ್ಮಾವರ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಕುಂದಾಪುರ ತಹಸಿಲ್ದಾರ್ ತಿಪ್ಪೆಸ್ವಾಮಿ ಮಧುಕರ್ ಶೆಟ್ಟಿಯವರ ನಿವಾಸದ ಬಳಿ ಮೊಕ್ಕಾಂ ಹೂಡಿದ್ದಾರೆ.

ಶಾಸಕ ಹಾಲಾಡಿ ಸಂತಾಪ..
ನಮ್ಮೂರು, ನಮ್ಮ ಕ್ಷೇತ್ರದ ಪ್ರಾಮಾಣಿಕ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿಯವರ ಅಕಾಲಿಕ ಮರಣ ನೋವು ತಂದಿದೆ. ಅವರ ಅನಾರೋಗ್ಯದ ಸಂದರ್ಭವೇ ಸಂಬಂದಪಟ್ಟ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡಿದ್ದೆ. ಮಧುಕರ ಶೆಟ್ಟಿ ವೈಯಕ್ತಿಕವಾಗಿ ಆತ್ಮೀಯರಾಗಿದ್ದರು. ಅವರ ಸಿದ್ದಾಂತಗಳು ಇಷ್ಟವಾಗಿತ್ತು. ಅವರಂತಹ ಅಧಿಕಾರಿ ಸಾವು ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದ್ದು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವೆ. ದೇವರು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.