ಕರಾವಳಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ವಾಪಾಸು ಪಡೆದಿರುವ ಪ್ರಕರಣಗಳ ಮರು ತನಿಖೆ :ಯಡಿಯೂರಪ್ಪ

Pinterest LinkedIn Tumblr

ಮಂಗಳೂರು, ನವೆಂಬರ್.12: ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಶನಿವಾರ ಮಂಗಳೂರಿಗೆ ತಲುಪಿದ್ದು, ನಗರದ ನೆಹರು ಮೈದಾನದಲ್ಲಿ ಮಂಗಳೂರು ಉತ್ತರ, ದಕ್ಷಿಣ ಮತ್ತು ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸಮಾವೇಶ ನಡೆಯಿತು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮುಖ್ಯ ಮಂತ್ರಿಯಾದ ತಕ್ಷಣ 24 ಗಂಟೆಗಳೊಳಗೆ ಕಾಂಗ್ರೆಸ್ ಸರಕಾರ ವಾಪಾಸು ಪಡೆದಿರುವ ಪ್ರಕರಣಗಳ ಮರು ತನಿಖೆ ನಡೆಸುತ್ತೇನೆ ಎಂದು ಹೇಳಿದರು.

‘150 ಕ್ಷೇತ್ರವನ್ನು ಗೆದ್ದು ಕರ್ನಾಟಕದಲ್ಲಿ ಸ್ವಚ್ಛ, ದಕ್ಷ ಆಡಳಿತವನ್ನು ನಡೆಸುವ ಸಂಕಲ್ಪದಿಂದ ಯಾತ್ರೆ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿ, ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣವನ್ನು ಮರು ತನಿಖೆ ಮಾಡಿಸುತ್ತೇವೆ’ ಎಂದು ಹೇಳಿದರು.

ಪೊಲೀಸ್ ಅಧಿಕಾರಿ ಗಣಪತಿ ಹತ್ಯೆ ಪ್ರಕರಣದ ಆರೋಪ ಹೊಂದಿರುವ ಸಚಿವ ಜಾರ್ಜ್ ರಾಜಿನಾಮೆ ನೀಡದಿದ್ದರೆ ವಿಧಾನ ಸಭೆಯ ಮುಂದಿನ ಅಧಿವೇಶನ ನಡೆಯುವುದಕ್ಕೆ ಅವಕಾಶ ನಿಡುವುದಿಲ್ಲ. ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯದಿದ್ದರೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಯುವುದಿಲ್ಲ’ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ ಅವರು, ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೇರಿದಂತೆ ಜಗತ್ತು ಮೋದಿಯ ಸಾಧನೆಯನ್ನು ಹೋಗಳುತ್ತಿದ್ದರೆ ಸಿದ್ದರಾಮಯ್ಯ ಟೀಕಿಸುತ್ತಿದ್ದಾರೆ. ಮೋದಿಯ ಮುಂದೆ ”ಸಿದ್ದರಾಮಯ್ಯ ಬಚ್ಚಾ ..ಇದ್ದೀಯಾ” ಎಂದು ಟೀಕಿಸಿದರು.

ಮೋದಿ ಆಶಯ ಕಾಂಗ್ರೆಸ್ ಮುಕ್ತ ಭಾರತ ಆಗಬೇಕೆನ್ನುವುದು. ಅದು ಆಗ ಬೇಕಾದರೆ ಮೊದಲು ಕರ್ನಾಟಕ ರಾಜ್ಯ ಕಾಂಗ್ರೆಸ್ ಮುಕ್ತವಾಗಬೇಕು. ಈ ಉದ್ದೇಶದಿಂದ ರಾಜ್ಯದಲ್ಲಿ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಜನ ನೆಮ್ಮದಿಯಿಂದ ಬದುಕ ಬೇಕು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ದೊರೆಯಬೇಕು ಎನ್ನುವುದು ಬಿಜೆಪಿಯ ಗುರಿಯಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ನಳೀನ್ ಕುಮಾರ್ ಕಟೀಲ್, ಶ್ರೀರಾಮುಲು, ಕೃಷ್ಣ ಜೆ.ಪಾಲೆಮಾರ್, ರವಿ ಕುಮಾರ್, ಕುಮಾರ್ ಬಂಗಾರಪ್ಪ, ವಿಕ್ರಮಾರ್ಜುನ ಹೆಗಡೆ, ಯೋಗೀಶ್ ಭಟ್, ಕ್ಯಾ. ಗಣೇಶ್ ಕಾರ್ಣಿಕ್, ಸಂಜೀವ ಮಠಂದೂರು ಮುಂತಾದವರು ಪಾಲ್ಗೊಂಡಿದ್ದರು.

Comments are closed.