ಕರಾವಳಿ

ಮೂಡುಬಿದಿರೆ “ಕೋಟಿ-ಚೆನ್ನಯ” ಹೊನಲು ಬೆಳಕಿನ ಜೋಡುಕರೆ ಕಂಬಳಕ್ಕೆ ಚಾಲನೆ

Pinterest LinkedIn Tumblr

ಮೂಡುಬಿದಿರೆ, ನವೆಂಬರ್. 12 :ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಮೂಡುಬಿದಿರೆ ಕಡಲಕೆರೆ ನಿಸರ್ಗಧಾಮದ ಕಂಬಳ ಕ್ರೀಡಾಂಗಣದಲ್ಲಿ ನಡೆಯುವ ವಿಜಯೋತ್ಸವದ “ಕೋಟಿ-ಚೆನ್ನಯ” ಜೋಡುಕರೆ ಕಂಬಳದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.

ಆಲಂಗಾರು ಚರ್ಚಿನ ಧರ್ಮಗುರು ರೆ/ಫಾ/ಸುನೀಲ್ ವೇಗಸ್ ಮತ್ತು ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇದಮೂರ್ತಿ ಈಶ್ವರ ಭಟ್ ಜತೆಗೂಡಿ ಕಂಬಳದ ಕರೆಯಲ್ಲಿ ದೀಪ ಬೆಳಗಿಸುವ ಮೂಲಕ 15ನೇ ವರ್ಷದ ಹೊನಲು ಬೆಳಕಿನ ಕಂಬಳಕ್ಕೆ ಚಾಲನೆ ನೀಡಿದರು.ಅದಕ್ಕೂ ಮೊದಲು ಒಂಟಿಕಟ್ಟೆಯ ಅಯ್ಯಪ್ಪ ಮಂದಿರದಲ್ಲಿ ಪೂಜೆಯನ್ನು ಸಲ್ಲಿಸಿ ನಂತರ ದೇವಸ್ಥಾನಗಳ ಪ್ರಸಾದಗಳನ್ನು ಕಂಬಳದ ಕರೆಗೆ ಹಾಕಲಾಯಿತು.

ಈ ವೇಳೆ ಮಾತನಾಡಿದ ಮುಲ್ಕಿ ಚರ್ಚಿನ ಧರ್ಮಗುರು ರೆ/ಫಾ/ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಕರಾವಳಿಯ ಐಕ್ಯ ಸಂಕೇತ ಕಂಬಳ ಸರ್ವಧರ್ಮೀಯರ ಉತ್ಸವ. ಇಲ್ಲಿ ಎಲ್ಲ ಧಾರ್ಮಿಕ ನಂಬಿಕೆಗಳ ಜನರು ಭಾಗವಹಿಸಿ ಐಕ್ಯತೆ ಪ್ರದರ್ಶಿಸು ತ್ತಿದ್ದಾರೆ. ಇದು ನಮ್ಮ ನಾಡುನುಡಿಯ ಹೆಮ್ಮೆಯ ಸಂಕೇತ. ನಮ್ಮ ನೆಲ ಜಲದ ರಕ್ಷಣೆಯ ಜೊತೆ ನಮ್ಮ ಸಂಪ್ರದಾಯ ಆಚರಣೆಗಳನ್ನು ಉಳಿಸಿಕೊಳ್ಳಲು ನಾವೆಲ್ಲಾ ಹೆಗಲು ನೀಡಬೇಕು. ನಾವು ಯಾವ ಬೆಲೆ ತೆತ್ತಾದರೂ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಕರಾವಳಿಯಜಪದ ಕ್ರೀಡೆಯಾಗಿರುವ ಕಂಬಳಕ್ಕೆ ಕಾನೂನಿನ ಮಾನ್ಯತೆ ಸಿಗಬೇಕಿದ್ದಲ್ಲಿ ಸಂಶೋಧನಾ ಕೇಂದ್ರದ ಅಗತ್ಯವಿದೆ. ಕಂಬಳದ ಪ್ರಾಚೀನತೆ ಹಾಗೂ ಅದರ ಸಾಂಪ್ರದಾಯಿಕ ಮಹತ್ವ, ಕಂಬಳ ಜನಜೀವನದಲ್ಲಿ ಹಾಸುಹೊಕ್ಕಿರುವ ರೀತಿ ನೀತಿಗಳನ್ನು ಇತಿಹಾಸದ ದೃಷ್ಟಿಯಿಂದ ಸಂಶೋಧನೆ ನಡೆಸುವುದರಿಂದ ಅದಕ್ಕೆ ಮಾನ್ಯತೆ ಸಿಗುವುದು ಸಾಧ್ಯವಾಗುತ್ತದೆ. ಜನಪ್ರತಿನಿಧಿಗಳಿಂದ ಪ್ರಯತ್ನ ಹಾಗೂ ಜನಸಾಮಾನ್ಯರಿಂದ ಪ್ರೋತ್ಸಾಹ ಕಂಬಳಕ್ಕೆ ಅತೀ ಅಗತ್ಯ ಎಂದರು.

ಚೌಟರ ಅರಮನೆಯ ಕುಲದೀಪ್ ಎಂ. ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೋ ಕಬಡ್ಡಿಯ ಸುಖೇಶ್ ಹೆಗ್ಡೆ ಕಡ್ತಲ, ಕಂಬಳ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಕೆ. ಅಭಯಚಂದ್ರ ಜೈನ್, ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್.ಸುವರ್ಣ, ಹನುಮಂತ ಮತ್ತು ವೆಂಕಟರಮಣ ದೇವಾಸ್ಥಾನದ ಆಡಳಿತ ಮೋಕ್ತೇಸರ ಜಿ.ಉಮೇಶ್ ಪೈ, ಉದ್ಯಮಿಗಳಾದ ಸ್ಟೀಫನ್ ಮೆಂಡಿಸ್, ಉದ್ಯಮಿ ಅಬುಲಾಲ್ ಪುತ್ತಿಗೆ,ನಂದಕುಮಾರ್ ಕುಡ್ವ, ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್, ಪುರಸಭಾ ಸದಸ್ಯ ನಾಗರಾಜ ಪೂಜಾರಿ, ರೋಟರಿ ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್, ಲಯನ್ಸ್ ಅಧ್ಯಕ್ಷ ರಾಮಚಂದ್ರ ಆಚಾರ್ಯ, ತ್ರಿಭುವನ್ ಜೇಸಿಸ್ನ ಅಧ್ಯಕ್ಷ ಸಂತೋಷ್ ಕುಮಾರ್, ರೋಟರ್ಯಾಕ್ಟ್ ಕ್ಲಬ್ನ ಸಚಿನ್ ಫೆರ್ನಾಂಡಿಸ್, ಮಿಡ್ ಟೌನ್ ರೋಟರಿ ಕ್ಲಬ್ನ ಅಧ್ಯಕ್ಷ ಕೂಮಾರ್ ಪೂಜಾರಿ, ಅಬ್ದುಲ್ ಲತೀಫ್, ಪದ್ಮಶ್ರೀ ಏಜೆನ್ಸ್ನ ಅಭಿಜಿತ್ ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಕೋಶಾಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಕಾರ್ಯದರ್ಶಿಗಳಾದ ಸುರೇಶ್ ಪ್ರಭು, ರತ್ನಾಕರ ಸಿ ಮೊಲಿ, ಚಂದ್ರಹಾಸ ಸನಿಲ್, ಹರ್ಷವರ್ಧನ ಪಡಿವಾಳ್, ಪ್ರೇಮನಾಥ ಮಾರ್ಲ, ಹಾಗೂ ದಿನಕರ ಶೆಟ್ಟಿ,ವಲೇರಿಯನ್ ಸಿಕ್ವೇರಾ, ಮಹಿಳಾ ಮುಖಂಡರಾದ ಸವಿತಾ ಟಿ.ಎನ್, ಸುಪ್ರಿಯಾ ಡಿ.ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Comments are closed.