ಮಂಗಳೂರು, ನವೆಂಬರ್. 12: ಹಾಸನ ಕಡೆಯಿಂದ ಮಂಗಳೂರು ಕಡೆಗೆ ಮಾರುತಿ 800 ಕಾರಿನಲ್ಲಿ ಬೃಹತ್ ಪ್ರಮಾಣದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾರು ಸಮೇತ ಮಂಗಳೂರು ಪೂರ್ವ (ಕದ್ರಿ ) ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹಾಸನ ಬೇಲೂರು ತಾಲೂಕಿನವರಾದ ಪಿ.ರಘು (36) ಮತ್ತು ಪ್ರಕಾಶ್ (26) ಎಂದು ಗುರುತಿಸಲಾಗಿದೆ. ಬಂಧಿತರಿಂದ 3,30,000 ರೂ. ವೌಲ್ಯದ 11 ಕೆ.ಜಿ. 70 ಗ್ರಾಂ ತೂಕದ ಗಾಂಜಾ, ಎರಡು ಮೊಬೈಲ್ ಮತ್ತು 50 ಸಾವಿರ ರೂ. ವೌಲ್ಯದ ಮಾರುತಿ 800 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶದಿಂದ ತಂದು ಹಾಸನ ಕಡೆಯಿಂದ ಮಾರುತಿ 800 ಕಾರಿನಲ್ಲಿ ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಆಗುತ್ತಿದೆ ಎಂದು ಬಗ್ಗೆ ಮಾಹಿತಿ ಪಡೆದ ಪೂರ್ವ ಠಾಣಾ ಇನ್ಸ್ಪೆಕ್ಟರ್, ಎಸ್ಐ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಾಷ್ಟ್ರೀಯ ಹೆದ್ದಾರಿ 169 ಮರೋಳಿ ಮಂಗಳೂರು ಗ್ರಾಮಾಂತರ ಠಾಣೆಯ ಹಳೇ ತಾತ್ಕಾಲಿಕ ಕಟ್ಟಡದ ಎದುರು ಬಂಧಿಸಿದ್ದಾರೆ. ಗಾಂಜಾವನ್ನು ಆಂದ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಪಡೇರು ಎಂಬಲ್ಲಿಂದ ತಂದಿರುವುದಾಗಿ ಅರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮೀಷನರ್ ಟಿ ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹನುಮಂತರಾಯ, ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿರವರಾದ ಶ್ರೀಮತಿ ಉಮಾ ಪ್ರಶಾಂತ್ ಹಾಗೂ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಉದಯ್ ಎಂ ನಾಯಕ್ ರವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕ ಮಾರುತಿ ಜಿ.ನಾಯಕ್, ಪಿಎಸ್ಐ ಹರೀಶ್ ಎಚ್.ವಿ. ಹಾಗೂ ಸಿಬ್ಬಂದಿಗಳಾದ ಎಎಸ್ಐ ಜನಾರ್ಧನ, ಎಎಸ್ಐ ಮನೋಹರ, ಎಚ್ಸಿ ಜಯಾನಂದ, ಎಚ್ಸಿ ವೆಂಕಟೇಶ್, ಎಚ್ಸಿ ಗಿರೀಶ್ ಕುಮಾರ್, ಎಚ್ಸಿ ಮಹೇಶ್, ಎಚ್ಸಿ ಅಶಿತ್ ಕಿರಣ್, ಚಾಲಕ ಅಜಿತ್ ಮ್ಯಾಥ್ಯು ಪಾಲ್ಗೊಂಡಿದ್ದರು.