ಕರಾವಳಿ

ಜನನಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ದಿ ಹಾಗೂ ಚಾರಿಟೇಬಲ್ ಟ್ರಸ್ಟ್‌ನಿಂದ ಕಲರವ-2016 ಕಾರ್ಯಕ್ರಮ

Pinterest LinkedIn Tumblr

janani_konaje_1

ಮಂಗಳೂರು : ದೇಶದ ಮೊದಲ ಪ್ರಧಾನಿ ನೆಹರು ಹೇಳಿದಂತೆ ಭಾರತದ ಭವಿಷ್ಯವನ್ನು ಮಕ್ಕಳ ಕಣ್ಣಿನಲ್ಲಿ ನೋಡಬಹುದು, ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ಮಹತ್ತರ ಅಭಿವೃದ್ಧಿಯಿಂದ ಮಕ್ಕಳ ಕಣ್ಣು ಪ್ರಕಾಶಿಸುವ ಸಂದರ್ಭ ದೇಶದ ಅಭಿವೃದ್ಧಿ ಆಗಿದೆ ಎಂಬುದು ಗೊತ್ತಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು.

ಅವರು ಜನನಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ದಿ ಹಾಗೂ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಕೊಣಾಜೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲರವ-2016 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

janani_konaje_3

ದೇಶ ವಿಶ್ವದಲ್ಲಿ ಒಂದನೇ ಸ್ಥಾನಕ್ಕೆ ಬರಬೇಕು ಅನ್ನುವುದು ಪ್ರತಿಯೊಬ್ಬ ನಾಗರಿಕನ ಕನಸು. ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತಲ್ಲಿ ದೇಶ ಬದಲಾಗುವುದಿಲ್ಲ. ಐ‌ಎ‌ಎಸ್ ಅಧಿಕಾರಿ, ವ್ಯಾಪಾರಸ್ಥ ಬಲಿಷ್ಥನಾದರೂ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೌಲ್ಯಯುತ ಶಿಕ್ಷಣದಿಂದ ಬಲಿಷ್ಠರಾದಾಗ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ. ಅದಕ್ಕೆ ಪೂರಕವಾದ ಎಲ್ಲ ವ್ಯವಸ್ಥೆ ವಿದ್ಯಾರ್ಥಿಗಳಿಗೆ ನೀಡುವ ಕೆಲಸ ಎಲ್ಲರಿಂದ ಆಗಬೇಕಿದೆ ಎಂದರು.

janani_konaje_2

ಜವಾಹಾಲ್ ಲಾಲ್ ನೆಹರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದ ಬಡಜನರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಜಾರಿಗೆ ತಂದ ಹಸಿರುಕ್ರಾಂತಿಯಿಂದಾಗಿ ದೇಶಾದ್ಯಂತ ವ್ಯಾಪಾರ ವಹಿವಾಟು, ರಫ್ತುಗಳು ಆರಂಭವಾದವು. ಅಣೆಕಟ್ಟುಗಳ ನಿರ್ಮಾಣವೂ ಅದೇ ಸಂದರ್ಭದಲ್ಲಿ ನಡೆಯಿತು. ಅದಕ್ಕಾಗಿ ವಿದ್ಯಾರ್ಥಿಗಳು ಇತಿಹಾಸವನ್ನು ಓದುವ ಮೂಲಕ ಭವಿಷ್ಯದಲ್ಲಿ ಇತಿಹಾಸವನ್ನು ನಿರ್ಮಾಣ ಮಾಡಬೇಕಾಗಿದೆ ಎಂದರು. ಟ್ರಸ್ಟ್ ನ ಗೌರವಾಧ್ಯಕ್ಷ ಹೈದರ್ ಪರ್ತಿಪಾಡಿ ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಿಯದರ್ಶಿನಿ ಮಹಿಳಾ ಸಂಘದ ಅಧ್ಯಕ್ಷೆ ಶಾಂತಮ್ಮ, ರಾಜಗುಡ್ಡೆ ಶಾಲೆಯ ನಿವೃತ್ತ ಶಿಕ್ಷಕಿ ಗಂಗಾಭಾಯಿ, ಮಲಾರು ಶಾಲೆಯ ಶಿಕ್ಷಕ ರಾಧಾಕೃಷ್ಣ ಭಟ್, ಕೊಣಾಜೆ ಪದವು ಶಾಲೆಯ ಮುಖ್ಯ ಶಿಕ್ಷಕಿ ಪ್ರೆಸ್ಸಿ ಕುವೆಲ್ಲೋ ಹಾಗೂ ಪಿಲಾರು ಶಾಲೆಯ ಮುಖ್ಯ ಶಿಕ್ಷಕ ರೋಹಿತಾಶ್ವ.ಯು ಇವರನ್ನು ಸನ್ಮಾನಿಸಲಾಯಿತು.

ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ, ಸಿ‌ಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ಸ್ಥಾಪಕಾಧ್ಯಕ್ಷ ಗೀತಾ ಕೆ. ಉಚ್ಚಿಲ್. ಸದಸ್ಯರಾದ ಅಬ್ದುಲ್ ಮಜೀದ್, ಚಂದನ್ ರೈ ಪುತ್ತೂರು, ಪಿಯೊಷ್ ಮೊಂತೋರೊ, ಮೋಹನ್ ಮೆಂಡನ್, ಖಲೀಲ್ ಬಡಾಜ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟಿ ಉಪಾಧ್ಯಕ್ಷೆ ಶರ್ಮಿಳಾ ದಿಲೀಪ್ ಮತ್ತು ಸುಗುಣ ಕಾರ್ಯಕ್ರಮ ನಿರೂಪಿಸಿದರು. ಪ್ರ.ಕಾರ್ಯದರ್ಶಿ ಸುಮತಿ ಹೆಗ್ಡೆ ವಂದಿಸಿದರು.

Comments are closed.