ಕರಾವಳಿ

ಲೆ.ಕರ್ನಲ್ ಅಶೋಕ್ ಕಿಣಿಯವರಿಂದ ಜಾಗೃತಿ ಸೆಲ್ಫ್ ಡಿಫೆನ್ಸ್ ಕಾರ್ಯಾಗಾರ ಅಭಿಯಾನ ಉದ್ಘಾಟನೆ

Pinterest LinkedIn Tumblr

jagrthi_self_defence_1

ಮಂಗಳೂರು: ಪುರಾಣದಲ್ಲಿ ರಾವಣ ಸೀತೆಗೆ ಗೌರವ ಕೊಡದೆ ಆಕೆಯನ್ನು ಅಪಹರಿಸಿ ಅಶೋಕ ವನದಲ್ಲಿಟ್ಟ ಎಂಬ ಕಾರಣಕ್ಕೆ ಶ್ರೀರಾಮ ಲಂಕೆಗೆ ದಾಳಿ ಮಾಡಿ ರಾವಣ ಸಂಹಾರ ಮಾಡಿದ. ದುಷ್ಟ ಸಂಹಾರದ ನೆನಪಿಗಾಗಿ ಪ್ರತಿವರ್ಷವೂ ರಾವಣ ಪ್ರತಿಕೃತಿ ದಹಿಸುತ್ತೇವೆ. ಆದರೆ ಮೊದಲು ಜನರಲ್ಲಿರುವ ರಾವಣ ಮನೋಭಾವ ಸಂಹಾರವಾಗಬೇಕು ಎಂದು ಡಾ.ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದಾಗ ರಾಷ್ಟ್ರಪತಿ ಭವನದ ಕಂಟ್ರೋಲರ್ (ಕಂಟ್ರೋಲರ್ ಆಫ್ ಪ್ರೆಸಿಡೆಂಟ್ ಹೌಸ್‌ಹೋಲ್ಡ್) ಆಗಿದ್ದ ಕರಾವಳಿ ಮೂಲದ ಲೆ.ಕರ್ನಲ್ ಅಶೋಕ್ ಕಿಣಿ ಹೇಳಿದರು.

ಕಾವೂರು ಬಿಜಿ‌ಎಸ್ ಕಾಲೇಜಿನಲ್ಲಿ ಮಂಗಳೂರಿನ ಸಾಧನಾ ಸಂಸ್ಥೆ ಹಮ್ಮಿಕೊಂಡ ಜಾಗೃತಿ ಸೆಲ್ಫ್ ಡಿಫೆನ್ಸ್ ತರಬೇತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

jagrthi_self_defence_2

ರಾವಣ ಮಹಿಳೆಗೆ ಗೌರವ ಕೊಡಲಿಲ್ಲ ಎಂದು ವರ್ಷ ವರ್ಷ ಆತನ ಪ್ರತಿಕೃತಿ ಸುಡುವ ಸಂಪ್ರದಾಯ ಕೆಲವೆಡೆ ಇದೆ. ಆದರೆ ಆಧುನಿಕ ಸಮಾದಲ್ಲಿ ಮಹಿಳೆಗೆ ಎಷ್ಟು ಜನ ಗೌರವ ಕೊಡುತ್ತಿದ್ದಾರೆ ಎಂಬುದರ ಆತ್ಮಾವಲೋಕನ ಆಗಬೇಕು. ರಾಮನ ಹೆಸರಲ್ಲಿ ರಾವಣನ ಕೃತ್ಯ ನಡೆಯುವುದು ನಿಲ್ಲಬೇಕು ಎಂದು ಹೇಳಿದರು.

ಪುರಾಣಗಳಲ್ಲಿ ದುಷ್ಟ ಶಕ್ತಿಗಳ ಸಂಹಾರಕ್ಕೆ ಆದಿಶಕ್ತಿಯೇ ಅವತಾರ ಎತ್ತಿ ಬಂದಿದ್ದಳು. ಪ್ರಸಕ್ತ ಕಾಲಘಟ್ಟದಲ್ಲೂ ಸಮಾಜದ ದುಷ್ಟ ಶಕ್ತಿಗಳ ಸಂಹಾರಕ್ಕೆ ನಾರಿ ಶಕ್ತಿ ಜಾಗೃತವಾಗಬೇಕು. ಮಹಿಳೆ ಅಭಿವೃದ್ಧಿ ಹೊಂದಬೇಕಾದರೆ ಆಧ್ಯಾತ್ಮಿಕ ಶಕ್ತಿಯೂ ಬೇಕು. ಮಹಿಳೆ ಸದೃಢವಾಗಿ, ಸಶಕ್ತಳಾಗಿ ಬೆದರಿಸಲು ಬರುವವರಿಗೆ ತಿರುಗೇಟು ನೀಡುವ ಶಕ್ತಿ ಹೊಂದಬೇಕು ಎಂದು ಆಶಿಸಿದರು.

jagrthi_self_defence_3

ಅರಿಯಿರಿ ಶಸ್ತ್ರ ವಿದ್ಯೆ ಶಾಸ್ತ್ರ ವಿದ್ಯೆ

ಕಾವೂರು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು. ನಮ್ಮ ನಡೆ -ನುಡಿ, ಉಡುಗೆ -ತೊಡುಗೆಗಳಲ್ಲಿ ಪಾಶ್ಚಾತ್ಯ ಅನುಕರಣೆ ಸಲ್ಲದು. ನಮ್ಮ ದೇಶದ ಸಂಸ್ಕೃತಿ ಕಲಿಯಲು ಹೆಣ್ಮಕ್ಕಳೂ ಶಸ್ತ್ರ ವಿದ್ಯೆ, ಶಸ್ತ್ರ ವಿದ್ಯೆ ಕಲಿಯಬೇಕು. ಶಸ್ತ್ರ ವಿದ್ಯೆ ನಮ್ಮ ಸ್ವಯಂ ರಕ್ಷಣೆಗೆ, ಶಾಸ್ತ್ರ ವಿದ್ಯೆ ನಮ್ಮ ಜೀವನ ಪರ್ಯಂತ ನೆರವಿಗೆ ಬರುತ್ತದೆ. ಆತ್ಮಸ್ಥೈರ್ಯ, ಆತ್ಮಬಲ, ಆತ್ಮವಿಶ್ವಾಸ ರೂಢಿಸಿಕೊಂಡು ಮುನ್ನಡೆಯಬೇಕು. ಜಾಗೃತಿ ಅಭಿಯಾನ ನಿರಂತರ ಮುನ್ನಡೆಯುವಂತಾಗಲಿ ಎಂದು ಹೇಳಿದರು.

ಪತ್ರಕರ್ತ ಪ್ರಕಾಶ್ ಇಳಂತಿಲ ಅಧ್ಯಕ್ಷತೆ ವಹಿಸಿದ್ದರು. ಸಾಧನಾ ಸಂಸ್ಥೆ ಕಾರ್ಯಕರ್ತೆ ಅಕ್ಷತಾ ಬಜ್ಪೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ವಂದಿಸಿದರು. ಸಭಾ ಕಾರ್ಯಕ್ರಮ ಬಳಿಕ ಇನ್ಸಿಟ್ಯೂಟ್ ಆಫ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್ (ಜೆ‌ಎಸ್‌ಕೆ‌ಎ) ಮಂಗಳೂರು ಇದರ ವಿದ್ಯಾರ್ಥಿಗಳಿಂದ ಸೆಲ್ಫ್ ಡಿಫೆನ್ಸ್ ತರಬೇತಿ ಕಾರ್ಯಾಗಾರ ನಡೆಯಿತು.

ಲಕ್ಷ್ಮಿಗಿಂತ ಮೊದಲು ಸರಸ್ವತಿ

ಅಬ್ದುಲ್ ಕಲಾಂ ಜತೆ ರಾಷ್ಟ್ರಪತಿ ಭವನದಲ್ಲಿ ಕಳೆದ ನೆನಪು ಮೆಲುಕು ಹಾಕಿದ ಅಶೋಕ್ ಕಿಣಿ, ಒಮ್ಮೆ ದೀಪಾವಳಿ ಸಂದರ್ಭ ರಾಷ್ಟ್ರಪತಿ ಭವನದಲ್ಲಿ ಸಾಯಂಕಾಲ ದೀಪ ಹಚ್ಚಿದ್ದೆವು. ಕಲಾಂ ಅವರಿಗೆ ದೀಪ ಹಚ್ಚಿದ ಕಾರಣ ವಿವರಿಸುತ್ತ, ಮುಸ್ಸಂಜೆ ವೇಳೆ ದೀಪ ಹಚ್ಚಿ ಲಕ್ಷ್ಮಿಯನ್ನು ಸ್ವಾಗತಿಸುತ್ತೇವೆ ಎಂದು ನಾನು ಹೇಳಿದ್ದೆ. ಆಗ ಕಲಾಂ ಅವರು ಲಕ್ಷ್ಮಿಗಿಂತ ಮೊದಲು ಸರಸ್ವತಿ ಬಂದರೆ ಒಳ್ಳೆಯದಲ್ಲವೆ? ಎಂದು ನನ್ನಲ್ಲಿ ಕೇಳಿದ್ದರು. ಅಂದರೆ ವಿದ್ಯೆಯಿಂದ ಕಷ್ಟಪಟ್ಟು ಸಂಪಾದಿಸುವ ಹಣಕ್ಕೆ ಬೆಲೆ. ಅಡ್ಡದಾರಿಯಿಂದ ಸಂಪಾದಿಸುವ ಹಣಕ್ಕೆ ಬೆಲೆ ಇಲ್ಲ ಎಂಬುವುದರ ಅದರ ಭಾವಾರ್ಥ ಎಂದು ಕರ್ನಲ್ ಅಶೋಕ್ ಕಿಣಿ ವಿಶ್ಲೇಷಿಸಿದರು.

ಹೆಣ್ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರಗಳಿಂದ ರಕ್ಷಿಸಲು ಸಾಧನಾ ಸಂಸ್ಥೆ ಮೂಲಕ ಸೆಲ್ಫ್ ಡಿಫೆನ್ಸ್ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿzವೆ. ಸೆಲ್ಫ್ ಡಿಫೆನ್ಸ್ ತರಬೇತಿ ಪಡೆಯುವ ಮೂಲಕ ಹೆಣ್ಮಕ್ಕಳು ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಲು ಶಕ್ತರಾಗಬಲ್ಲರು. ಸಾಧನಾ ಸಂಸ್ಥೆಯ ಮೊದಲ ಹೆಜ್ಜೆ ಇದು. ಹೈಸ್ಕೂಲ್ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಈ ತರಬೇತಿ ನೀಡುವ ಯೋಜನೆ ನಮ್ಮದು :ಅಕ್ಷತಾ ಬಜ್ಪೆ ಕಾರ್ಯಕರ್ತೆ `ಸಾಧನಾ’ ಮಂಗಳೂರು.

Comments are closed.