ಪ್ರತಿ ಮಹಿಳೆಯೂ ಸಹ “”ಬದುಕಿನ ಬದಲಾವಣೆಯ” ಹಂತವನ್ನು -ಅಂದರೆ ಕೊನೆಯ ಮಾಸಿಕ ಋತುಚಕ್ರದ ಹಂತವನ್ನು ಎದುರಿಸಲೇ ಬೇಕು. ತಮ್ಮ 51ನೇಯ ವಯಸ್ಸಿನಲ್ಲಿ ಸರಾಸರಿ ಸಂಖ್ಯೆಯ ಮಹಿಳೆಯರು ಈ ಹಂತವನ್ನು ತಲುಪುತ್ತಾರೆ. ಇದು ಈ ವಯಸ್ಸಿಗಿಂತ ಮೊದಲು ಅಥವಾ ನಂತರವೂ ಆಗಿರಬಹುದು. ಪ್ರತಿ ಮಹಿಳೆಯ ಮುಟ್ಟು ನಿಲ್ಲುವ ಲಕ್ಷಣಗಳೂ ಸಹ ಭಿನ್ನವಾಗಿರುತ್ತವೆ. ಸಾಮಾನ್ಯ ಲಕ್ಷಣಗಳು ಅಂದರೆ ಹಾಟ್ ಫ್ಲಾಷ್‌ಗಳು – ಅಂದರೆ ಇದ್ದಕ್ಕಿದಂತೆಯೇ ಮೈ ಮುಖಗಳು ಬಿಸಿಯೇರುವುದು, ರಾತ್ರಿ ಸಮಯದಲ್ಲಿ ಬೆವರುವುದು, ಮಧ್ಯ ವಯಸ್ಸಿನಲ್ಲಿ ದೇಹದ ತೂಕವು ಹೆಚ್ಚಾಗುವುದು, ನಿದ್ದೆಯ ಅಡಚಣೆಗಳು ಮತ್ತು ಮನಃಸ್ಥಿತಿಯಲ್ಲಿ ವ್ಯತ್ಯಾಸವಾಗುವುದು. ಆದರೆ ಕೆಲವು ಮಹಿಳೆಯರು ಈ ಯಾವ ಲಕ್ಷಣಗಳು ಇಲ್ಲದೆಯೇ ಮುಟ್ಟು ನಿಲ್ಲುವ ಹಂತವನ್ನು ದಾಟಿ ಹೋಗುತ್ತಾರೆ.
ಮುಟ್ಟು ನಿಲ್ಲುವುದಕ್ಕೆ
ಕಾರಣ ಏನು?
ಮಹಿಳೆಗೆ ವಯಸ್ಸಾಗುತ್ತಾ ಹೋದ ಹಾಗೆ, ಆಕೆಯ ಅಂಡಾಶಯದಲ್ಲಿ ಅವರ ಸಂತಾನೋತ್ಪತ್ತಿ ವ್ಯವಸ್ಥೆಯ ಬಹುಮುಖ್ಯ ಹಾರ್ಮೋನ್‌ಗಳಾದ ಈಸ್ಟ್ರೋಜನ್ ಮತ್ತು ಪ್ರಾಜೆಸ್ಟರಾನ್‌ಗಳ ಸ್ರವಿಸುವಿಕೆ ಕಡಿಮೆಯಾಗುತ್ತದೆ. ಈಸ್ಟ್ರೋಜನ್ ಮಟ್ಟವು ಕುಸಿದ ಹಾಗೆಲ್ಲಾ, ಮುಟ್ಟು ನಿಲ್ಲುವ ಪರಿವರ್ತನಾ ಅವಧಿಯ ಮೊದಲ ಲಕ್ಷಣವಾದ ಋತುಚಕ್ರದಲ್ಲಿ ಏರುಪೇರಾಗುವಿಕೆಯು ಕಾಣಿಸಿಕೊಳ್ಳುತ್ತದೆ, ಇದರಲ್ಲಿ ಸ್ರವಿಸುವ ಅವಧಿಯು ಅಸಹಜವಾಗಿ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಮಾತ್ರವಲ್ಲದೆ ಎರಡು ಋತುಚಕ್ರಗಳ ನಡುವಿನ ಅವಧಿಯೂ ಸಹ ದೀರ್ಘವಾಗಬಹುದು.
ಮುಪ್ಪಾಗುವಿಕೆ ಮತ್ತು ಮುಟ್ಟು ನಿಲ್ಲುವುದಕ್ಕೆ ಸಂಬಂಧಿಸಿದ ಕೆಲವು ಲಕ್ಷಣಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ. ಆದರೆ ಒಳ್ಳೆಯ ಪೋಷಕಾಂಶಗಳಿಂದ ಮುಟ್ಟು ನಿಲ್ಲುವಮತ್ತು ಅನಂತರದ ಅವಧಿಯಲ್ಲಿ ಕಾಣಿಸಿಕೊಳ್ಳುವ ಕೆಲವು ಪರಿಸ್ಥಿತಿಗಳನ್ನು ಹೋಗಲಾಡಿಸಬಹುದು.
ಮುಟ್ಟು ನಿಲ್ಲುವ ಅವಧಿಯಲ್ಲಿನ
ಮೂಲ ಆಹಾರ ಕ್ರಮಗಳು
ಮುಟ್ಟು ನಿಲ್ಲುವ ಅವಧಿಯಲ್ಲಿ ನಿಮ್ಮ ಶರೀರಕ್ಕೆ ಬೇಕಾಗುವ ಎಲ್ಲ ಆವಶ್ಯಕ ಪೋಷಕಾಂಶಗಳನ್ನು ಒದಗಿಸಲು ವಿವಿಧ ರೀತಿಯ ಆಹಾರಗಳನ್ನು ಸೇವಿಸಬೇಕು. ಸಾಮಾನ್ಯವಾಗಿ ಮಹಿಳೆಯರು ಸೇವಿಸುವ ಆಹಾರದಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳು ಕಡಿಮೆ ಇರುವ ಕಾರಣ ಮುಂದೆ ಹೇಳುವ ಸಲಹೆಗಳನ್ನು ಅನುಸರಿಸುವುದು ಆವಶ್ಯಕ.
ಸಾಕಷ್ಟು ಕ್ಯಾಲ್ಸಿಯಂ ಅನ್ನು ಸೇವಿಸಿ: ಪ್ರತಿ ದಿನ ಎರಡರಿಂದ ನಾಲ್ಕು ಸರ್ವಿಂಗ್ಸ್ ಹಾಲಿನ ಉತ್ಪನ್ನಗಳು ಮತ್ತು ಕ್ಯಾಲ್ಸಿಯಂಯುಕ್ತ ಆಹಾರಗಳನ್ನು ಸೇವಿಸಿ. ಹಾಲಿನ ಉತ್ಪನ್ನಗಳು, ಮೀನುಗಳು (ಸಾರ್ಡಿನ್ ಮತ್ತು ಸಾಲ್ಮನ್) ಬ್ರಾಕಲಿ ಮತ್ತು ದವಸ ಧಾನ್ಯಗಳನ್ನು ಸೇವಿಸಿ.
ಕಬ್ಬಿಣ ಅಂಶದ ಸೇವನೆಯನ್ನು ಹೆಚ್ಚಿ ಸಿಕೊಳ್ಳಿ: ದಿನಕ್ಕೆ ಕನಿಷ್ಠ ಮೂರು ಸರ್ವಿಂಗ್ಸ್ ಕಬ್ಬಿಣಾಂಶ ಸಮೃದ್ಧ ಇರುವ ಆಹಾರವನ್ನು ಸೇವಿಸಿ. ತೆಳು ಮಾಂಸ, ಮೊಟ್ಟೆ, ಮೀನು, ಚಿಕನ್, ಹಸುರು ಸೊಪ್ಪು$ ತರಕಾರಿಗಳು, ಬೀಜಗಳು ಮತ್ತು ಪುಷ್ಟಿಗೊಳಿಸಲಾದ ಧಾನ್ಯಗಳ ಉತ್ಪನ್ನಗಳಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿರುತ್ತದೆ.
ಸಾಕಷ್ಟು ನಾರಿನ ಅಂಶವನ್ನು ಸೇವಿಸಿ: ಸಾಕಷ್ಟು ನಾರಿನ ಅಂಶ ಇರುವ ಆಹಾರಗಳಾದ ಇಡಿಯ ಧಾನ್ಯದ ಬ್ರೆಡ್, ಪಾಸ್ತಾ, ಅನ್ನ, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ ಮತ್ತು ನಿಮಗೆ ನೀವೆ ಸಹಾಯ ಮಾಡಿಕೊಳ್ಳಿ.
ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ: ಪ್ರತಿದಿನ ಒಂದೂವರೆ ಕಪ್ ಹಣ್ಣು ಮತ್ತು 2 ಕಪ್ ತರಕಾರಿಗಳನ್ನು ಸೇವಿಸಿ.
ಸಾಮಗ್ರಿಯ ಲೇಬಲ್ ಅನ್ನು ಓದಿಕೊಳ್ಳಿ: ಒಳ್ಳೆಯ ಜೀವನಶೈಲಿಗಾಗಿ ಮತ್ತು ನಿಮಗೆ ನೀವೆ ಸಹಾಯ ಮಾಡಿಕೊಳ್ಳಲು ಸಿದ್ಧ ಆಹಾರದ ಪ್ಯಾಕೆಟ್ ಮೇಲಿರುವ ಆ ಆಹಾರಕ್ಕೆ ಬಳಸಲಾಗಿರುವ ಸಾಮಗ್ರಿಗಳ ಪಟ್ಟಿಯನ್ನು ಸರಿಯಗಿ ಓದಿಕೊಳ್ಳಿ.
ಯಥೇತ್ಛವಾಗಿ ನೀರು ಕುಡಿಯಿರಿ: ದಿನಕ್ಕೆ 8 ಗ್ಲಾಸ್‌ನಷ್ಟು ನೀರು ಕುಡಿಯುವುದರಿಂದ ಅದು ಹೆಚ್ಚಿನ ಆರೋಗ್ಯವಂತ ವಯಸ್ಕರ ದಿನದ ಆವಶ್ಯಕತೆಯನ್ನು ಪೂರೈಸುತ್ತದೆ ಎನ್ನು ವುದು ಒಂದು ಸಾಮಾನ್ಯ ನಿಯಮ.
ಆರೋಗ್ಯಕರ ದೇಹತೂಕವನ್ನು ಕಾಪಾಡಿಕೊಳ್ಳಿ: ನೀವು ಅಧಿಕ ದೇಹತೂಕ ಹೊಂದಿದವರಾಗಿದ್ದರೆ, ನೀವು ತಿನ್ನುವ ಆಹಾರದ ಪ್ರಮಾಣವನ್ನು ಮತ್ತು ಅಧಿಕ ಕೊಬ್ಬು ಇರುವ ಆಹಾರವನ್ನು ತಗ್ಗಿಸಿಕೊಳ್ಳಿ. ಊಟ ತಪ್ಪಿಸಬೇಡಿ. ಒಬ್ಬ ಆಹಾರ ತಜ್ಞರು ಅಥವಾ ನಿಮ್ಮ ವೈದ್ಯರು ನೀವು ಹೊಂದಿರಬೇಕಾದ ಪ್ರಮಾಣಕ್ಕೆ ದೇಹತೂಕದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಬಹುದು.
ಅಧಿಕ ಕೊಬ್ಬು ಇರುವ ಆಹಾರ ಸೇವನೆಯನ್ನು ತಗ್ಗಿಸಿಕೊಳ್ಳಿ: ಸ್ಯಾಚುರೇಟೆಡ್ ಕೊಬ್ಬು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಹೃದಯದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
ಅಧಿಕ ಜಿಡ್ಡಿನ ಆಹಾರಗಳ ಸೇವನೆಯನ್ನು ತಗ್ಗಿಸಿಕೊಳ್ಳಿ: ಸ್ಯಾಚುರೇಟೆಡ್ ಕೊಬ್ಬು ಶರೀರದ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಹೃದಯದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಮಾಂಸದ ಕೊಬ್ಬು, ಪೂರ್ಣ ಹಾಲು, ಐಸ್ ಕ್ರೀಂ ಮತ್ತು ಚೀಸ್‌ಗಳಲ್ಲಿ ಈ ವಿಧದ ಕೊಬ್ಬು ಇರುತ್ತದೆ. ಅನೇಕ ರೀತಿಯ ಸಸ್ಯ ಜನ್ಯ ತರಕಾರಿ ಎಣ್ಣೆಯಲ್ಲಿ, ಬೇಕರಿ ತಿಂಡಿಗಳಲ್ಲಿ ಮತ್ತು ಕೆಲವು ರೀತಿಯ ಮಾರ್ಜರಿನ್‌ಗಳಲ್ಲಿ ಇರುವ ಟ್ರಾನ್ಸ್ ಕೊಬ್ಬನ್ನು ಗಮನಿಸಿ. ಟ್ರಾನ್ಸ್ ಕೊಬ್ಬು ಕೊಲೆಸ್ಟ್ರಾಲ್ ಮತ್ತು ಹೃದಯದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
ಸಕ್ಕರೆ ಮತ್ತು ಉಪ್ಪನ್ನು ಒಂದು ಹದ ಪ್ರಮಾಣದಲ್ಲಿ ಬಳಸಿ: ಆಹಾರದಲ್ಲಿನ ವಿಶೇಷ ಪ್ರಮಾಣದ ಸೋಡಿಯಂ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ.
ಮಧ್ಯವಯಸ್ಸಿನ ಮೆಟಬಾಲಿಕ್ ತೊಡಕನ್ನು ತಪ್ಪಿಸಿಕೊಳ್ಳುವುದು:
ನಿಮ್ಮ ಶರೀರದ ನೈಸರ್ಗಿಕ ಮೆಟಬಾಲಿಕ್ ಅಥವಾ ಚಯಾಪ ಚಯ ವ್ಯವಸ್ಥೆಯನ್ನು ಹೇಗೆ ತಗ್ಗಿಸಿಕೊಳ್ಳ ಬಹುದು ಎಂಬ ಬಗ್ಗೆ ಯೋಜಿಸಿ ಕೊಳ್ಳಿ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಇಂಥಹದೇ ಸಮಯ ಎಂಬುದು ಯಾವುದೂ ಇಲ್ಲ ಅದು ಯಾವ ಸಮಯ ಬೇಕಾದರೂ ಆಗಿರ ಬಹುದು. ಮುಂದೆ ಹೇಳುವ ಸಲಹೆ ಗಳನ್ನು ಅನುಸರಿಸುವ ಮೂಲಕ, ದೇಹದ ಮೆಟಬಾಲಿಸಂ ಅಂಶವನ್ನು ತಗ್ಗಿಸಿಕೊಂಡು, ಮಧ್ಯವಯಸ್ಸಿನಲ್ಲಿ ಬರುವಂತಹ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.
ದೈಹಿಕವಾಗಿ ಚಟುವಟಿಕೆಯಿಂದ ಇರಿ: ವಯಸ್ಕರು ವಾರದ ಹೆಚ್ಚಿನ ದಿನಗಳಲ್ಲಿ ಕನಿಷ್ಠ 30 ನಿಮಿಷಗಳ ಅವಧಿಯ ಸಾಧಾರಣದಿಂದ-ತೀವ್ರ ವ್ಯಾಯಾಮಗಳಲ್ಲಿ ತೊಡಗಬೇಕು. ವ್ಯಾಯಾಮ ಅಂದರೆ ಜಿಮ್‌ಗೆ ಹೋಗಿ ಬರುವುದು ಅಷ್ಟೇ ಅಲ್ಲ, ನಿಜವಾಗಿಯೂ ವ್ಯಾಯಾಮದಲ್ಲಿ ತೊಡಗಬೇಕು . ದಿನನಿತ್ಯದ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮೆಟ್ಟಲುಗಳನ್ನು ಹತ್ತಿ ಇಳಿಯಲು ಲಿಫ್ಟ್ ಅನ್ನು ಉಪಯೋಗಿಸಬೇಡಿ, ನೀವು ತಲುಪಬೇಕಿರುವ ಜಾಗಕ್ಕೆ ಸ್ವಲ್ಪ ದೂರದಲ್ಲಿಯೇ ನಿಮ್ಮ ವಾಹನವನ್ನು ನಿಲ್ಲಿಸಿ, ತಲುಪಬೇಕಾಗಿರುವಲ್ಲಿಗೆ ಸ್ವಲ್ಪ ದೂರ ನಡೆದುಕೊಂಡೇ ಹೋಗಿ, ತೋಟಗಾರಿಕೆ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿ.
ಸರಿಯಾದ ಆಹಾರ ಸೇವಿಸಿ: ಹಣ್ಣು ತರಕಾರಿಗಳು, ಇಡಿ ಧಾನ್ಯಗಳು, ಕಡಿಮೆ ಕೊಬ್ಬು ಇರುವ ಹಾಲಿನ ಉತ್ಪನ್ನಗಳು ಹಾಗೂ ಕಡಿಮೆ ಅಂಶ ಇರುವ ಪ್ರೋಟೀನ್ ಉತ್ಪನಗಳು ನಿಮಗೆ ಅಗತ್ಯವಿಲ್ಲದ ಹೆಚ್ಚುವರಿ ಪ್ರೋಟೀನ್ ಅನ್ನು ಪೂರೈಸದೆ ನಿಮ್ಮ ಶರೀರಕ್ಕೆ ಅಗತ್ಯ ಇರುವಷ್ಟೆ ಪೋಷಕಾಂಶಗಳನ್ನು ಒದಗಿಸುತ್ತವೆ.
ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸಬೇಡಿ: ಆಹಾರ ಸೇವಿಸುವಾಗ ಸಣ್ಣ ಗಾತ್ರದ ತಟ್ಟೆ, ಬಟ್ಟಲು ಮತ್ತು ಲೋಟಗಳನ್ನು ಬಳಸಿ. ಹೆಚ್ಚಾಗಿ ಆಹಾರಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳಿ. ಇದರಿಂದ ನಿಮ್ಮ ಆಹಾರದಲ್ಲಿ ಯಾವುದನ್ನು ಎಷ್ಟು ಕಡಿಮೆ ಬಳಸಬಹುದು ಎಂಬ ಬಗ್ಗೆ ನಿಮಗೆ ನಿಯಂತ್ರಣ ಇರುತ್ತದೆ. ಹೊರಗೆ ಆಹಾರ ಸೇವಿಸುತ್ತೀರಾದರೆ, ಕಡಿಮೆ ಕ್ಯಾಲೊರಿಯ ಆಹಾರಗಳನ್ನೇ ಆರಿಸಿಕೊಳ್ಳಿ. ನಿಮ್ಮ ಆಹಾರದಲ್ಲಿ ತರಕಾರಿಗಳು, ಹಣ್ಣು ಮತ್ತು ಇಡೀ ಧಾನ್ಯಗಳು ಇರಲಿ.
ಮುಟ್ಟು ನಿಲ್ಲುವ ಅವಧಿಯ
ಲಕ್ಷಣಗಳನ್ನು ತಗ್ಗಿಸುವ
ಆಹಾರಗಳು:
ಐಸೋಫ್ಲೇವನ್ಸ್‌ಗಳನ್ನು ಹೊಂದಿರುವ (ಸಸ್ಯ ಜನ್ಯ ಈಸ್ಟ್ರೋಜನ್) ಆಹಾರಗಳನ್ನು ಸೇವಿಸುವುದರಿಂದ ಅದು ಶರೀರದಲ್ಲಿ ಒಂದು ಸಣ್ಣ ಪ್ರಮಾಣದ ಈಸ್ಟ್ರೋಜನ್ ರೀತಿಯಲ್ಲಿ ಕಾರ್ಯವೆಸಗುತ್ತದೆ. ಈ ದೃಷ್ಟಿಯಲ್ಲಿ ಮುಟ್ಟು ನಿಲ್ಲುವ ಲಕ್ಷಣಗಳನ್ನು ತಗ್ಗಿಸಲು ಸೋಯಾ ಆಹಾರಗಳಿಂದ ಸಹಾಯ ಆಗಬಹುದು. ಟೋಪು (ಠಿಟfu) ಮತ್ತು ಸೋಯಾ ಹಾಲಿನಲ್ಲಿ ಐಸೋಫ್ಲೇವನ್ಸ್ ಗಳು ವಿಶೇಷವಾಗಿವೆ.
ಮುಟ್ಟು ನಿಲ್ಲುವ ಸಮಯದಲ್ಲಿ
ವರ್ಜಿಸಬೇಕಾದ ಆಹಾರಗಳು:
ಮುಟ್ಟು ನಿಲ್ಲುವ ಸಮಯದಲ್ಲಿ ನಿಮಗೆ ಹಾಟ್-ಫ್ಲಾಶಸ್ ಅಂದರೆ ಮುಖ-ಮೈಕೈಗಳು ಕೆಂಪೇರುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ, ಅದಕ್ಕೆ ಕಾರಣವಾಗುವ ಮತ್ತು ಕೆರಳಿಸುವ ಆಹಾರ ಮತ್ತು ಪಾನೀಯಗಳಾದ ಮಸಾಲೆ ಪದಾರ್ಥಗಳು, ಕೆಫಿನ್ ಮತ್ತು ಅಲ್ಕೋಹಾಲ್ ಇತ್ಯಾದಿಗಳನ್ನು ವರ್ಜಿಸಿ.
ಒಳ್ಳೆಯ ಪೋಷಣಾಭರಿತವಾದ ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ಮುಟ್ಟು ನಿಲ್ಲುವ ಸಮಯವನ್ನೂ ಸಹ ಆರೋಗ್ಯಕರವಾಗಿ ನಿಭಾಯಿಸಬಹುದು. ವ್ಯಾಯಾಮ ಮತ್ತು ಸರಿಯಾದ ಆಹಾರ ಸೇವನಾ ಅಭ್ಯಾಸಗಳು ನಿಮ್ಮ ಭಾವನೆ ಮತ್ತು ಅನಿಸಿಕೆಗಳಲ್ಲಿ ನೈಜ ಬದಲಾವಣೆಗಳನ್ನು ತರುತ್ತವೆ ಮತ್ತು ಮುಟ್ಟು ನಿಲ್ಲುವ ಅವಧಿಯಲ್ಲಿ ಮತ್ತು ಆಮೇಲೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಮುಟ್ಟು ನಿಲ್ಲುವ ಅವಧಿಯಲ್ಲಿ ಸಹಾಯವಾಗಬಹುದಾದಂತಹ ಜೀವನಶೈಲಿಯ ಧನಾತ್ಮಕ ಬದಲಾವಣೆಗಳು :
ಧೂಮಪಾನವನ್ನು ಬಿಟ್ಟು ಬಿಡಿ (ಇದು ಒಂದು ದೊಡ್ಡ ಅಪಾಯಕಾರಿ ಅಂಶ ಆಗಿದ್ದು, ಧೂಮಪಾನದಿಂದ ಆಸ್ಟಿಪೋಪೋರೋಸಿಸ್ ಅಂದರೆ ಮೂಳೆ ಸವಕಳಿ ಮತ್ತು ಹೃದಯದ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ).
ಒಳ್ಳೆಯ ದೇಹತೂಕವನ್ನು ಮತ್ತು ತೆಳು ದೇಹ ಸಾಂದ್ರತೆಯನ್ನು ಕಾಪಾಡಿಕೊಳ್ಳಿ
ನಿಮ್ಮ ಚಿಂತನೆ ಧನಾತ್ಮಕವಾಗಿರಲಿ. ಭಾವನಾತ್ಮಕ ಬೆಂಬಲವನ್ನು ಪಡೆಯಿರಿ- ಅಗತ್ಯ ಬಿದ್ದರೆ ನಿಮ್ಮ ವೈದ್ಯರು ಮತ್ತು ಸ್ನೇಹಿತರ ಜೊತೆಗೆ ಮಾತುಕತೆ ನಡೆಸಿ.
ಒತ್ತಡವನ್ನು ನಿಯಂತ್ರಿಸಿಕೊಳ್ಳಿ- ಆರಾಮವಾಗಿರಲು ಕಲಿಯಿರಿ. ಪ್ರತಿ ದಿನ ಕೇವಲ ನಿಮಗಾಗಿ ಏನನ್ನಾದರೂ ಮಾಡಲು – 30 ನಿಮಿಷಗಳನ್ನು ಮೀಸಲಾಗಿರಿಸಿಕೊಳ್ಳಿ.
ತಂಪಾದ ಕೋಣೆಯಲ್ಲಿ ನಿದ್ದೆ ಮಾಡಿ.
ಹೊರಗೆ ಹೋಗುವಾಗ ನಿಮ್ಮ ಶರೀರದ ಉಷ್ಣತೆಯನ್ನು ತಗ್ಗಿಸಿ ಕೊಳ್ಳಲು, ಒಂದು ಸಣ್ಣ ಬ್ಯಾಟರಿ ಚಾಲಿತ ಫ್ಯಾನ್ ನಿಮ್ಮ ಬಳಿ ಇರಲಿ. ತುಂತುರು ಹನಿ ಸಿಂಪಡ ಣೆಯಿಂದಲೂ ಸಹಾಯ ವಾಗಬಹುದು. ಹೊರಗೆ ಹೋಗು ವಾಗ ಒಂದು ಸಣ್ಣ ಬಾಟಲಿಯಲ್ಲಿ ನೀರನ್ನು ಒಯ್ಯಲು ಮರೆಯಬೇಡಿ.
ನಕ್ಕು ಬಿಡಲು ಮತ್ತು ಉಲ್ಲಾಸದಿಂದ ಇರಲು ಕಲಿತುಕೊಳ್ಳಿ!!!!
ಸುವರ್ಣ ಹೆಬ್ಟಾರ್
ಮುಖ್ಯಸ್ಥರು, ಪಥ್ಯಾಹಾರ ವಿಭಾಗ,
ಕೆ.ಎಂ.ಸಿ., ಮಣಿಪಾಲ.(ಉದಯವಾಣಿ)