ಮಂಗಳೂರು,ಫೆ.01: ಶಾಲೆಯೊಂದರ ಪಕ್ಕದಲ್ಲಿ ಕಾರ್ಯಾಚರಿಸುತ್ತಿದ್ದ ಫರ್ನಿಚರ್ ಮಳಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 15 ಲಕ್ಷ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾದ ಘಟನೆ ಸೋಮವಾರ ನಗರದ ದೇರೆಬೈಲ್ ಸಮೀಪದ ಕೊಂಚಾಡಿಯಲ್ಲಿ ಸಂಭವಿಸಿದೆ.
ಬೆಂಕಿ ದುರಂತ ಸಂಭವಿಸಿದ ಈ ಫ್ಲ್ಯೈಪುಡ್ ಪ್ಯಾಕ್ಟರಿಗೆ ತಾಗಿಕೊಂಡು 3 ಶಾಲೆಗಳು (ವಿಧ್ಯಾ ನರ್ಸರಿ ಸ್ಕೂಲ್ , ವಿಧ್ಯಾ ಹೈಸ್ಕೂಲ್ ಹಾಗೂ ಇಂದಿರಾ ಮೆಮೋರಿಯಲ್ ಸ್ಕೂಲ್) ಕಾರ್ಯನಿರ್ವಹಿಸುತ್ತಿದ್ದು, ಬೆಂಕಿ ತಗುಲಿದ ತಕ್ಷಣ ಶಾಲಾ ಮಕ್ಕಳನ್ನು ತರಗತಿಗಳಿಂದ ತೆರೆವುಗೊಳಿಸಲಾಯಿತು.
ಫರ್ನಿಚರ್ ಮಳಿಗೆ ಹಾಗೂ ಶಾಲಾ ಕಟ್ಟಡಗಳ ಮಧ್ಯೆ ಸ್ಥಳಾವಕಾಶದ ಕೊರತೆ ಇದ್ದುದ್ದರಿಂದ ಶಾಲಾ ಕಟ್ಟಡಕ್ಕೆ ಬೆಂಕಿ ತಗಲುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಮುಂಜಾಗುರುತ ಕ್ರಮವಾಗಿ ಮಕ್ಕಳನ್ನು ಕೂಡಲೇ ತೆರವುಗೊಳಿಸಲಾಯಿತು. ಈ ಸಂದರ್ಭ ಹೆದರಿದ ಮಕ್ಕಳು ತಮ್ಮ ಬ್ಯಾಗ್ ಹಾಗೂ ಪುಸ್ತಕಗಳನ್ನು ಶಾಲೆಯೊಳಗೆಯೇ ಬಿಟ್ಟು ಶಾಲೆಯಿಂದ ಹೊರಗೆ ಓಡಿ ಬಂದಿದ್ದಾರೆ ಎನ್ನಲಾಗಿದೆ.
ಮಂಗಳೂರಿನ ಖ್ಯಾತ ಉದ್ಯಮಿ ಲಕ್ಷ್ಮಣ ದೇವಾಡಿಗ ಅವರಿಗೆ ಸೇರಿದ ಈ ಸಂಸ್ಥೆ ನಾಲ್ಕು ತಿಂಗಳ ಹಿಂದೆಯಷ್ಟೇ ಪ್ರಾರಂಭಗೊಂಡಿದ್ದು, ಶಾರ್ಟ್ ಶರ್ಕ್ಯೂಟ್‌ನಿಂದ ಬೆಂಕಿಯುಂಟಾಗಿ ಈ ಅವಘಡ ಉಂಟಾಗಿರಬೇಕೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಬೆಂಕಿ ಅವಘಡ ಸಂಭವಿಸಿದ ತಕ್ಷಣ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಲಾಗಿದ್ದು, ಅಗ್ನಿ ಶಾಮಕ ದಳದ ಸಿಂಬಂದಿಗಳು ಘಟನ ಸ್ಥಳಕ್ಕೆ ತಲುಪುವಲ್ಲಿ ಸುಮಾರು ಅರ್ಧ ತಾಸು ವಿಳಂಬಗೊಂಡ ಕಾರಣ ಸ್ಥಳೀಯರು ಸ್ಪಲ್ಪ ಮಟ್ಟನ ಬೆಂಕಿ ನಂದಿಸುವವಲ್ಲಿ ಯಶಸ್ವಿಯಾದರು. ಈ ಮೂಲಕ ಹೆಚ್ಚಿನ ಅವಘಡ ಸಂಭವಿಸುವುದು ತಪ್ಪಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.