ಕುಂದಾಪುರ: ಫೆ.1 ಸೋಮವಾರದಿಂದ ಹೆಲ್ಮೆಟ್ ಕಡ್ಡಾಯ ನಿಯಮ ಕಡ್ಡಾಯವಾಗಿ ಅನುಷ್ಟಾನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನ ಸವಾರರಿಗೆ ದಂಡ ಹಾಕುವ ಹಾಗೂ ಇಬ್ಬರು ಸವಾರರು ಹೆಲ್ಮೆಟ್ ಧರಿಸಿದರೇ ಅವರಿಗೆ ಗುಲಾಬಿ ಹೂ ನೀಡಿ ಅಭಿನಂದಿಸುವ ಕಾರ್ಯ ಕುಂದಾಪುರದಲ್ಲಿ ನಡೆಯಿತು.
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಜಯ, ದೇವೇಂದ್ರ ಹಾಗೂ ಸಿಬ್ಬಂದಿಗಳು ವಿವಿದೆಡೆಗಳಲ್ಲಿ ಕಾರ್ಯಾಚರಣೆ ನಡೆಸಿದರು.
ಟ್ರಾಫಿಕ್ ಪೊಲೀಸರ ‘ಸ್ಪೆಷಲ್ ಡ್ರೈವ್’
ನಿಯಮ ಜಾರಿಯಾದರೂ ಕೂಡ ಹೆಲ್ಮೆಟ್ ಹಾಕದವರಿಗೆ ಬಿಸಿಮುಟ್ಟಿಸಲು ಕುಂದಾಪುರ ಸಂಚಾರಿ ಪೊಲೀಸರು ಬೆಳಿಗ್ಗೆ 9.30ರಿಂದಲೇ ಬೀದಿಗಿಳಿದರು. ಕುಂದಾಪುರ ಸಂಚಾರಿ ಠಾಣೆ ವ್ಯಾಪ್ತಿಯ ಅಲ್ಲಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ‘ಸ್ಪೆಷಲ್ ಡ್ರೈವ್’ ನಡೆಸುವ ಮೂಲಕ ಹೆಲ್ಮೆಟ್ ಹಾಕದೇ ರಸ್ತೆಗಿಳಿದ ವಾಹನ ಸವಾರರನ್ನು(ಹಿಂಬದಿ ಸವಾರರು ಹಾಕದಿದ್ದರೇ ದಂಡ) ನಿಲ್ಲಿಸಿ ಅವರಿಗೆ ಹೆಲ್ಮೆಟ್ ಕಡ್ಡಾಯದ ಕುರಿತು ವಾರ್ನಿಂಗ್ ಮಾಡಿದ್ದಲ್ಲದೇ ದಂಡ ವಿಧಿಸಿ ಮುಂದೆ ತಪ್ಪು ಮಾಡದಂತೆ ಖಡಕ್ ಎಚ್ಚರಿಕೆಯನ್ನು ನೀಡಿದ್ರು.
ಹೆಲ್ಮೆಟ್ ಹಾಕಿದವ್ರಿಗೆ ರೋಸ್
ಇನ್ನು ನಿಯಮದಂತೆ ದ್ವಿಚಕ್ರ ವಾಹನದ ಸವಾರ ಹಾಗೂ ಹಿಂಬದಿ ಸವಾರರಿಬ್ಬರು ಹೆಲ್ಮೆಟ್ ಧರಿಸಿದರೇ ಅವರನ್ನು ಗುರುತಿಸಿ ನಿಲ್ಲಿಸಿ ಅವರಿಗೆ ಕೆಂಪು ಗುಲಾಬಿ ಹೂ ನೀಡುವ ಮೂಲಕ ಅಭಿನಂದನೆ ಸೂಚಿಸಿದ್ದಲ್ಲದೇ ಅದು ಇತರರಿಗೆ ಮಾದರಿಯಾಗುವಂತೆ ಪ್ರೇರೇಪಿಸಿದರು. ಮುಕ್ಕಾಲು ಗಂಟೆ ಅವಧಿಯಲ್ಲಿ 25ಕ್ಕೂ ಅಧಿಕ ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನಗಳು ಪೊಲೀಸರಿಂದ ಗುಲಾಬಿ ಸ್ವೀಕರಿಸಿದ್ದು ಹೆಲ್ಮೆಟ್ ಕಡ್ಡಾಯದ ಅರಿವು ಸವಾರರಲ್ಲಿ ಮೂಡಿರುವುದಕ್ಕೆ ನಿದರ್ಶನವಾಗಿತ್ತು.
ಹೆಲ್ಮೆಟ್ ಕಡ್ಡಾಯಕ್ಕೆ ಸಖತ್ ರೆಸ್ಪಾನ್ಸ್
ಇನ್ನು ಕುಂದಾಪುರದಲ್ಲಿ ಒಂಟಿ ದ್ವಿಚಕ್ರ ವಾಹನ ಸವಾರರು 90-95%ದಷ್ಟು ಹೆಲ್ಮೆಟ್ ಧರಿಸಿಯೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದು ಕೆಲವರು ಮಾತ್ರವೇ ಹೆಲ್ಮೆಟ್ ಧರಿಸದೇ ಪೊಲೀಸರ ಕಣ್ತಪ್ಪಿಸಿ ಚಲಾಯಿಸುವ ದ್ರಶ್ಯವೂ ಕಂಡುಬಂತು. ಅಲ್ಲದೇ ಕೆಲವು ದ್ವಿಚ್ಕರ ವಾಹನ ಸವಾರರು ಮಾತ್ರವೇ ಹೆಲ್ಮೆಟ್ ಧರಿಸಿದ್ದು ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿರುವುದು ಕಂಡುಬಂದಿತು. ಅವರೆಲ್ಲರಿಗೂ ದಂಡ ವಿಧಿಸಿದ್ದಲ್ಲದೇ ಮುನೆಚ್ಚರಿಕೆಯನ್ನು ಟ್ರಾಫಿಕ್ ಪೊಲಿಸರು ನೀಡಿದರು. ಇನ್ನು ಕೆಲವರು ನಿಯಮ ನಮಗಲ್ಲ ಎಂಬಂತೆ ಪೊಲೀಸರ ಎದುರೇ ತಪ್ಪಿಸಿಕೊಂಡು ಹೋಗುತ್ತಿದ್ದುದು ಮಾಮೂಲಿಯಾಗಿತ್ತು.
ಇವತ್ತೇ ತಗೊಳ್ತೇವೆ ಸರ್..!
ಸರ್…ಇಂದು ಒಂದನೇ ತಾರಿಖು ಎಂದು ಮರೆತು ಹೋಗಿತ್ತು, ಸರ್…ಮನೆಯಲ್ಲಿದೆ ಹಾಕೊಳ್ಳೋಕೆ ಮರೆತಿದ್ದೆ, ಸರ್…ಹೆಲ್ಮೆಟ್ ಕೊಂಡುಕೊಳ್ಳಲಿಲ್ಲ ಈಗ ತೆಗೆದುಕೊಳ್ಳುತ್ತೇನೆ, ಸರ್…ಇಬ್ಬರೂ ಹಾಕಲೇ ಬೇಕಾ? ಸರ್ ಇದೊಂದು ಸಲ ಬಿಟ್ಟು ಬಿಡಿ ದಂಡ ಹಾಕ್ಬೇಡಿ ಪ್ಲೀಸ್.. ಹೀಗೆ ಹಲವರು ತಮ್ಮದೇ ಆದ ರೀತಿಯಲ್ಲಿ ಪೊಲೀಸರೆದುರು ವಿನಂತಿ ಮಾಡಿಕೊಂಡ ಬಗೆಯಿದು. ಎಲ್ಲರಿಗೂ ಪೊಲೀಸರು ವಾರ್ನ್ ಮಾಡಿ ಹೀಗೆ ಪುನಃ ರಿಪೀಟ್ ಮಾಡಬೇಡಿ ಎಂದು ಖಡಕ್ ಆಗಿಯೇ ಎಚ್ಚರಿಸಿದ್ರು.
ಹೆಲ್ಮೆಟ್ ಖರೀದಿ ಜೋರು
ಇನ್ನು ಕುಂದಾಪುರದ ಹಲವೆಡೆ ಬೀದಿ ಬದಿ ಹೆಲ್ಮೆಟ್ ಮಾರುತ್ತಿದ್ದು ಸೋಮವಾರವೂ ಕೂಡ ಹೆಲ್ಮೆಟ್ ಖರೀದಿ ಜೋರಾಗಿತ್ತು. ಬೇಡಿಕೆ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ತರಹೇವಾರಿ ಹೆಲ್ಮೆಟ್ ಮಾರುತ್ತಿದ್ದು ಬೆಲೆಯೂ ಕೂಡ ಗ್ರಾಹಕನ ಜೇಬಿಗೆ ಕತ್ತರಿ ಹಾಕುವಂತಿದೆ ಎಂಬ ಅಭಿಪ್ರಾಯವನ್ನು ಕೆಲವರು ಹೇಳುತ್ತಿದ್ದಾರೆ.
ಚಿತ್ರ,ವರದಿ- ಯೋಗೀಶ್ ಕುಂಭಾಸಿ