ಬೆಂಗಳೂರು: ಕೊಬ್ಬರಿ ಎಣ್ಣೆಯೇನೂ ದುಬಾರಿಯಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬೇರೆ ಸೌಂದರ್ಯ ವರ್ಧಕಗಳ ಬೆಲೆಗೆ ಹೋಲಿಸಿದರೆ ಕೊಬ್ಬರಿ ಎಣ್ಣೆ ಅಗ್ಗವೆನ್ನಬಹುದು. ಎಷ್ಟೋ ಜನ ಇದನ್ನು ಕೇವಲ ಕೂದಲಿಗೆ ಮಾತ್ರ ಬಳಕೆ ಮಾಡುತ್ತಾರೆ ಆದರೆ ನಿಮ್ಮ ಸೌಂದರ್ಯಕ್ಕೆ ನಾನಾ ರೀತಿಯಲ್ಲಿ ಕೊಬ್ಬರಿ ಎಣ್ಣೆ ಉಪಯುಕ್ತವಾಗಿದೆ.
ಮೇಕಪ್ ಮಾಡಿ: ಮುಖಕ್ಕೆ ಮೇಕಪ್ ಮಾಡಿಕೊಳ್ಳುವಾಗ ಕೆನ್ನೆಯ ಭಾಗ ಕೆಂಪಾಗಿ ಕಾಣಬೇಕೆಂದು ಕೃತಕ ಬಣ್ಣವನ್ನು ಬಳಕೆ ಮಾಡಲಾಗುತ್ತದೆ. ಇದರ ಬದಲಿಗೆ ಒಂದೆರೆಡು ಹನಿ ಕೊಬ್ಬರಿ ಎಣ್ಣೆ ಹಾಕಿ ಮಸಾಜ್ ಮಾಡಿ ನೈಸರ್ಗಿಕವಾಗಿ ನಿಮ್ಮ ಕೆನ್ನೆಗೆ ಹೊಳಪುಬರುತ್ತದೆ.
ಕೈಗಳಿಗೆ ಮೃದುತ್ವ: ಹಸ್ತ ಮತ್ತು ಪಾದಗಳ ಚರ್ಮ ಹೆಚ್ಚು ದಪ್ಪವಾಗಿರುತ್ತದೆ. ಅಲ್ಲದೇ ಚರ್ಮ ಬಹುಬೇಗ ಒಣಗುವುದರಿಂದ ಒರಟಾಗಿ, ಒಡೆಯುತ್ತದೆ. ಹೀಗಾದಾಗ ಸ್ವಲ್ಪವೇ ಕೊಬ್ಬರಿ ಎಣ್ಣೆಯನ್ನು ಕೈಗಳಿಗೆ ಹಚ್ಚುತ್ತ ಬಂದರೆ ಕೈಗಳು ಮೃದುವಾಗುತ್ತವೆ.
ತ್ವಚೆಯ ರಕ್ಷಣೆ: ಕೊಬ್ಬರಿ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ನಿವಾರಕ ಹಾಗೂ ಶಿಲೀಂದ್ರ ನಿವಾರಕ ಗುಣಗಳು ಇರುವುದರಿಂದ ಕೊಬ್ಬರಿ ಎಣ್ಣೆ ಬಳಕೆ ಮಾಡುವುದರಿಂದ ನಿಮ್ಮ ಚರ್ಮಕ್ಕೆ ಪರಿಣಾಮ ಬೀರುವ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಒದಗಿಸುತ್ತದೆ.
ಕೂದಲ ಆರೋಗ್ಯ: ಪ್ರತಿಬಾರಿ ತಲೆಸ್ನಾನ ಮಾಡುವ ಮೊದಲು ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಆರೋಗ್ಯಕರಾಗಿರುತ್ತದೆ.
