ಕರಾವಳಿ

ಚಿದು ಬರೆಯುವ ಪ.ಗೋ ಸರಣಿ-7: ಅಪ್ಪನ ಕಾಲು ಹಿಡಿಯುತ್ತೇನೆ, ಬೇರೆಯವರ ಕಾಲು ಯಾಕೆ ಹಿಡೀ ಬೇಕು ?

Pinterest LinkedIn Tumblr

pa.gopalakrishna (1)

ಪತ್ರಿಕಾವೃತ್ತಿಯಲ್ಲಿ ಅದರಲ್ಲೂ ವರದಿಗಾರಿಕೆಯಲ್ಲಿರುವ ಒಳಸುಳಿಗಳು ಅರ್ಥವಾಗಬೇಕಾದರೆ ಅದರೊಳಗೆ ಆಳಕ್ಕೆ ಇಳಿಯಬೇಕು. ಕೇವಲ ಒಂದೆರಡು ವರ್ಷಗಳಲ್ಲಿ ವೃತ್ತಿಯಲ್ಲಿರುವುದು ಇಷ್ಟೇ ಅದರಾಚೆಗೇನೂ ಇಲ್ಲ ಎನ್ನುವುದು ಮೂರ್ಖತನವಾಗುತ್ತದೆ. ಪ.ಗೋ ನನಗೆ ಈ ವೃತ್ತಿಗೆ ಬಂದ ದಿನದಿಂದಲೂ ಹೆಚ್ಚು ಇಷ್ಟವಾದರು ಯಾಕೆ ಎನ್ನುವುದಕ್ಕೆ ಅನೇಕ ಕಾರಣಗಳಿವೆ. ಅವುಗಳಲಿ ಮುಖ್ಯವಾದುದು ಯಾವುದೇ ಮುಚ್ಚುಮರೆಯಿಲ್ಲದ ಮುಕ್ತವಾಗಿ ಹೇಳಿಬಿಡುವ ಸ್ವಭಾವ.

ನಾನು ಹೀಗೆ ಹೇಳಿದರೆ ಅವರಿಗೆ ಬೇಸರವಾಗಬಹುದು ಎನ್ನುವ ಮುಲಾಜಿಲ್ಲದೆ ಕಂಡದ್ದನ್ನು ಕಂಡ ಹಾಗೆಯೇ ಹೇಳಿಬಿಡುವ ಪ.ಗೋ ಈ ಕಾರಣಕ್ಕಾಗಿಯೇ ಅನೇಕರಿಗೆ ಮೆಚ್ಚುಗೆಯಾಗದ ವ್ಯಕ್ತಿಯಾಗಿದ್ದರು. ವರದಿಗಾರಿಕೆಯಲ್ಲಿ ನೇರ ಪ್ರಶ್ನೆ ಕೇಳುವುದು ಅದಕ್ಕೆ ನೇರವಾದ ಉತ್ತರ ನಿರೀಕ್ಷೆ ಮಾಡುತ್ತಿದ್ದರು. ಬಣ್ಣ ಹಚ್ಚಿ ಹೇಳುವುದು ಅಥವಾ ಅವರದ್ದೇ ಆದ ಭಾಷೆಯಲ್ಲಿ ಹೇಳುವುದಾದರೆ ಕೋಟಿಂಗ್ ಬೇಡ ಎನ್ನುತ್ತಿದ್ದರು.

ಜನ ನಿನ್ನನ್ನು ಗುರುತಿಸಬೇಕಾದರೆ ಬಹಳ ವರ್ಷ ಕಸಬು ಮಾಡಬೇಕು, ಆದರೆ ಬಹಳ ಬೇಗ ಗುರುತಿಸಬೇಕಾದರೆ ಎಲ್ಲರ ದಾರಿಯಲಿ ಹೋಗದೆ ನಿನ್ನದೇ ದಾರಿಯನ್ನು ನೀನೇ ರೂಪಿಸಿಕೊಳ್ಳಬೇಕು ಎಂದು ಹೇಳಿದರು ಪ.ಗೋ. ಇದು ಅವರು ಹಾಗೆ ಹೇಳಿದಾಗ ಅರ್ಥವಾಗಲಿಲ್ಲ. ಅರ್ಥವಾಗದಿದ್ದರೂ ಅರ್ಥವಾಯಿತೆಂದು ಹೇಳುವುದು ವೈಯಕ್ತಿಕವಾಗಿ ನನಗೆ ಹಿಡಿಸದು. ಗೊತ್ತಾಗಲಿಲ್ಲ ಎಂದೆ. ನಿನಗೆ ಗೊತ್ತಾಗಲಿಲ್ಲ ಎನ್ನುವುದು ನನಗೂ ಗೊತ್ತಾಯಿತು ಬಿಡು ಮತ್ತೊಮ್ಮೆ ಹೇಳುತ್ತೇನೆ ಎಂದರು.

ಆದಿನ ರಾಘವೇಂದ್ರ ಮಠದಲ್ಲಿ ಸಂಜೆ ಹೊತ್ತಿಗೆ ಉಡುಪಿ ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಪತ್ರಿಕಾಗೋಷ್ಠಿ. ನಾನು ವೃತ್ತಿಗೆ ಬಂದು ಕೆಲವೇ ತಿಂಗಳಾಗಿದ್ದವು. ಅಷ್ಟಾಗಿ ಜನಸಂಪರ್ಕ ಆಗಿರಲಿಲ್ಲ. ಆಗ ಕಲ್ಬಾವಿ ವೆಂಕಟ್ರಾವ್ ರಾಘವೇಂದ್ರ ಮಠದ ಮುಖ್ಯಸ್ಥರು ಎನ್ನುವುದು ಕೂಡಾ ಪ.ಗೋ ಅವರನ್ನು ಮಠದಲ್ಲಿ ಪರಿಚಯ ಮಾಡಿಕೊಟ್ಟಾಗಲೇ ಗೊತ್ತಾದದ್ದು. ಉದ್ಯಮಿ ಕೂಡಾ.

ಪರಿಚಯ ಮಾಡಿಕೊಂಡ ನಂತರ ಕಲ್ಬಾವಿಯವರು ಮಠಕ್ಕೆ ಆಗಾಗ ಬರುತ್ತಿರಿ ಎಂದು ನನಗೆ ಹೇಳಿದರು. ಪಕ್ಕದಲ್ಲೇ ಇದ್ದ ಪ.ಗೋ ಸ್ವಾಮೀ ಇವನನ್ನು ನೀವು ದೀಕ್ಷೆ ಕೊಟ್ಟು ಮಠಕ್ಕೆ ಸೇರಿಸುವುದು ಬೇಡ, ಅವನಷ್ಟಕ್ಕೇ ಅವನಿರಲಿ ಬಿಡಿ ಎಂದು ಛೇಡಿಸಿದರು. ಕಲ್ಬಾವಿಯವರು ಕೂಡಾ ಪ.ಗೋ ಹೇಳಿಕೆಗೆ ಜೋರಾಗಿ ನಕ್ಕು ಯಾರು ಏನಾಗಬೇಕೆನ್ನುವುದು ಭಗವಂತನ ಚಿತ್ತವೆಂದರು. ಆಯ್ತು ಒಳ್ಳೆಯದು ನೋಡಿ ಮಯ್ಯರು ಬರುತ್ತಿದ್ದಾರೆ ಬರಮಾಡಿಕೊಳ್ಳಿ ಎಂದರು ಪ.ಗೋ.

ಆಗ ಮಯ್ಯ ಸ್ಟಾರ್ ರಿಪೋರ್ಟರ್. ಮಯ್ಯರು ಬರುವುದನ್ನು ಸಂಘಟಕರು ಅತ್ಯಂತ ತಾಳ್ಮೆಯಿಂದ ಕಾಯುತ್ತಿದ್ದರು. ಅವರ ಹಿಂದೆ ಉಭಯ, ಜೊತೆಗೆ ನರಸಿಂಹ ರಾವ್ ಕೂಡಾ ಬಂದರು. ಸ್ವಲ್ಪ ಹೊತ್ತಿನ ಬಳಿಕ ಹೊಸದಿಗಂತ ಪತ್ರಿಕೆಯ ಸಂಪಾದಕರಾಗಿದ್ದ ವಸಂತ ನಾಯಕ್ ಪಲಿಮಾರ್ಕರ್ ಬಂದರು. ಆಕಾಲದಲ್ಲಿ ಸಂಪಾದಕರೂ ಪತ್ರಿಕಾಗೋಷ್ಠಿಗಳಿಗೆ ಬರುವುದು ಸಾಮಾನ್ಯ.

ಮಠದೊಳಗಿದ್ದ ನಾವು ವಿಶ್ವೇಶತೀರ್ಥ ಸ್ವಾಮೀಜಿಗಾಗಿ ಕಾಯುತ್ತಿದ್ದೆವು. ಪ.ಗೋ ಚಡಪಡಿಸುತ್ತಲೇ ಕೈಗಡಿಯಾರ ನೋಡಿಕೊಂಡು ರಾಯರೇ ಸ್ವಾಮೀಜಿಗಳು ಎಷ್ಟು ಹೊತ್ತಿಗೆ ದಯಮಾಡಿಸ್ತಾರೋ? ಕೇಳಿದರು. ಈಗ ಈಗ ಬರ್ತಾರೆ ಎಂದು ಹೇಳಿ ಸ್ವಾಮೀಜಿ ಕುಳಿತುಕೊಳ್ಳುವ ಕುರ್ಚಿ, ನಮಗೆ ಕುಳಿತುಕೊಳ್ಳಲು ಕುರ್ಚಿ ಹಾಕಿಸುತ್ತಿದ್ದರು ಕಲ್ಬಾವಿಯವರು.

ಬಾ ಮಾರಾಯ ಹೊರಗೆ ಹೋಗಿ ನಮ್ಮ ಕೆಲಸ ಮಾಡುವ ಎಂದರು. ಹೊರಗೆ ಹೋಗುವುದು ಅಂದರೆ ಪ.ಗೋ ಬೀಡಿ ಸೇದಲು ಎಂದೇ ಅರ್ಥ. ಮಠದ ಹೊರಗೆ ನಿಂತುಕೊಂಡು ಬೀಡಿ ಸೇದುತ್ತಾ ಈಗ ಸ್ವಾಮೀಜಿ ಬಂದ ಮೇಲೆ ನೋಡು ಮಜಾ ಎಂದರು.

ಸ್ವಾಮೀಜಿ ಬಂದ ಮೇಲೆ ಮಜಾ ಏನೂ, ಅವರು ಪತ್ರಿಕಾಗೋಷ್ಠಿ ಮಾಡುತ್ತಾರೆ, ಉಡುಪಿಪರ್ಯಾಯದ ವಿಷಯ ಹೇಳಬಹುದು ಎಂದೆ.

ನಿನಗೆ ಇನ್ನೂ ವಯಸ್ಸಾಗಿಲ್ಲ, ತಡೆದುಕೋ ಎಲ್ಲವೂ ಗೊತ್ತಾಗುತ್ತೆ ಎಂದರು. ಸ್ವಾಮೀಜಿ ಬಂದ ಮೇಲೆ ಮಜಾ ನೋಡಲೇನಿದೆ ಮತ್ತೆ ಕೇಳಿದೆ.

ಆಗ ಪ.ಗೋ ಜೋರಾಗಿ ಬೀಡಿ ಸೇದಿ ಹೊಗೆ ಬಿಟ್ಟು ಸ್ವಾಮೀಜಿ ಕಾಲಿಗೆ ಯಾರು ಹೇಗೆಲ್ಲಾ ಬೀಳುತ್ತಾರೆ ನೋಡುವಿಯಂತೆ ಎಂದರು.

ಇದು ನನಗೂ ಕುತೂಹಲವಾಯಿತು. ಸ್ವಾಮೀಜಿ ಕಾಲಿಗೆ ಅವರ ಶಿಷ್ಯರು ಬೀಳುತ್ತಾರೆ, ಅದರಲ್ಲೇನು ತಪ್ಪು ಎಂದೆ ?. ಅದಕ್ಕೇ ನಿನಗೆ ಹೇಳಿದ್ದು ಇನ್ನು ನಿನಗೆ ವಯಸ್ಸಾಗಿಲ್ಲವೆಂದು. ಶಿಷ್ಯ ಅಂದರೆ ನಿನ್ನ ಪ್ರಕಾರ ಯಾರು ? ಪ.ಗೋ ಪ್ರಶ್ನೆ.

ಸ್ವಾಮೀಜಿಯವರ ಅನುಯಾಯಿಗಳು ಎಂದೆ. ನೀನು ದಡ್ಡ. ಸ್ವಾಮೀಯನ್ನು ನೋಡಲು ಬಂದವರೆಲ್ಲರೂ ಅವರ ಶಿಷ್ಯರೇ. ಇದರಲ್ಲಿ ನೀನೂ-ನಾನೂ ಕೂಡಾ.

ಹೋಗಿ ಮಾರಾಯ್ರೇ. ನಾನು ಯಾವ ಮಠದ ಶಿಷ್ಯನೂ ಅಲ್ಲ ಎಂದೆ. ನನಗೆ ಅವರ ಹೆಸರು ಕೇಳಿಗೊತ್ತು ಹೊರತು ಅವರಿಗೆ ನನ್ನ ಪರಿಚಯ ಇಲ್ಲ, ಪತ್ರಿಕಾಗೋಷ್ಠಿಗೆ ಬಂದಿದ್ದೀನಿ, ನ್ಯೂಸ್ ಬರೆದುಕೊಂಡು ಪತ್ರಿಕೆಗೆ ಹಾಕ್ತೇನೆ ಎಂದೆ.

ಮರಿ ನೀನು ನ್ಯೂಸೇ ಕೊಡು ಆದರೆ ಇಲ್ಲಿಯ ವಾತಾವರಣವನ್ನು ಮಾತ್ರ ಚೆನ್ನಾಗಿ ನೋಡುತ್ತಿರು ಎಂದರು. ಅಷ್ಟರಲ್ಲಿ ಸ್ವಾಮೀಜಿಯವರಿದ್ದ ಕಾರು ಬಂತು. ಮಠದೊಳಗಿನಿಂದ ಕಲ್ಬಾವಿ ವೆಂಕಟರಾಯರು ಅವರ ಸಂಗಡಿಗರು ಓಡೋಡಿ ಬಂದು ಸ್ವಾಮೀಜಿಯವರನ್ನು ಕೈಮುಗಿದು ಬರಮಾಡಿಕೊಂಡರು.

ಸ್ವಾಮೀಜಿ ಕೂಡಾ ನಗು ನಗುತ್ತಲೇ ನೆರೆದವರನ್ನು ಒಂದು ಸುತ್ತಲೂ ನೋಡಿ ಮಠದೊಳಗೆ ನಡೆದರು. ದೇವರ ಗರ್ಭಗುಡಿಗೆ ಒಂದು ಸುತ್ತು ಬಂದು ನೇರವಾಗಿ ಒಂದು ಮೂಲೆಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಗೆ ಬಂದರು.

ಸ್ವಾಮೀಜಿ ಕುರ್ಚಿಯಲ್ಲಿ ಕುಳಿತುಕೊಂಡ ತಕ್ಷಣವೇ ಇದ್ದವರೆಲ್ಲರೂ ತಾ ಮುಂದು ನಾ ಮುಂದು ಎನ್ನುತ್ತಾ ಸ್ವಾಮೀಜಿ ಕಾಲಿಗೆ ಬಿದ್ದು ನಮಸ್ಕರಿಸಲು ಪೈಪೋಟಿ ಮಾಡುತ್ತಿದ್ದರು. ಪತ್ರಕರ್ತರಾಗಿದ್ದ ನಾವೆಲ್ಲರೂ ಕುಳಿತು ಈ ದೃಶ್ಯಗಳನ್ನು ನೋಡುತ್ತಿದ್ದೆವು. ಪ.ಗೋ ನನ್ನನ್ನು ತಿವಿದು ತಿವಿದು ನೋಡು ಅವರು ಸ್ವಾಮೀಜಿ ಗಮನ ಸೆಳೆಯುವುದನ್ನು, ಹೇಗೆ ಬಿದ್ರು ನೋಡು ಹೀಗೆ ಕಮೆಂಟರಿ ಕೊಡುತ್ತಿದ್ದರು.

ನಿಜಕ್ಕೂ ಇದು ನನಗೆ ಹೊಸ ಅನುಭವ. ಯಾಕೆಂದರೆ ಪೇಜಾವರ ಸ್ವಾಮೀಜಿಯವರನ್ನು ಹತ್ತಿರದಿಂದ ನೋಡುವ ಅವಕಾಶ ಹಿಂದೆ ಸಿಕ್ಕಿರಲಿಲ್ಲ. ಉಡುಪಿ ಮಠಕ್ಕೂ ಹೋದ ಅನುಭವ ಇರಲಿಲ್ಲ.

ಸ್ವಾಮೀಜಿಯವರ ಕಾಲಿಗೆ ಬೀಳುವ ಕಾರ್ಯಕ್ರಮ ಮುಗಿಯಿತು, ಪತ್ರಿಕಾಗೋಷ್ಠಿ ಶುರುವಾಯಿತು. ಸ್ವಾಮೀಜಿ ಹೇಳುತ್ತಾ ಹೋದರು, ಮಯ್ಯ, ಉಭಯ, ನರಸಿಂಹರಾವ್ ತಲೆಬಗ್ಗಿಸಿ ಬರೆಯುತ್ತಿದ್ದರು. ಪ.ಗೋ ಮಾತ್ರ ತಮಗೆ ಬೇಕಾದ ವಾಕ್ಯ ಬರೆದುಕೊಳ್ಳುತ್ತಿದ್ದರು. ನಾನು ಸ್ವಾಮೀಜಿ ಹೇಳುವಾಗ ಸ್ಪೀಡಾಗಿ ಬರೆದುಕೊಳ್ಳುತ್ತಿದ್ದೆ. ಪಕ್ಕದಲ್ಲಿದ್ದ ಪ.ಗೋ ನಿನಗೆ ಯಾಕೆ ಮರಿ ಇದೆಲ್ಲಾ ?, ಪುಟಗಟ್ಟಲೆ ಬರೆದರೆ ವಡ್ಡರ್ಸೆ ಕ,ಬುಗೆ ಹಾಕುತ್ತಾರೆ ಎಂದರು ನಗುತ್ತಾ. ಹೌದಲ್ಲಾ ವಡ್ಡರ್ಸೆಯವರಿಗೆ ಸ್ವಾಮೀಜಿಗಳೆಂದರೆ ಅಷ್ಟಕ್ಕಷ್ಟೇ, ಮುಂಗಾರು ಪತ್ರಿಕೆಯಲ್ಲಿ ಅಷ್ಟೇನೂ ಪ್ರಚಾರ ಕೊಡುತ್ತಿರಲಿಲ್ಲ. ಪ.ಗೋ ಹೇಳಿದ ಮರುಕ್ಷಣವೇ ಬರೆಯುವುದನ್ನು ನಿಲ್ಲಿಸಲಿಲ್ಲ ಬೇಕೆನಿಸಿದ್ದನ್ನು ಮಾತ್ರ ಬರೆದುಕೊಳ್ಳುತ್ತಿದ್ದೆ.

ಕೊನೆಗೂ ಪತ್ರಿಕಾಗೋಷ್ಠಿ ಮುಗಿಯಿತು. ಸ್ವಾಮೀಜಿ ಮಯ್ಯರನ್ನು ಕರೆದು ಹಣ್ಣು ಮಂತ್ರಾಕ್ಷತೆ ಪಡೆಯಲು ಹೇಳಿದರು. ಮಯ್ಯರು ಬರೆಯುತ್ತಿದ್ದ ಪುಸ್ತಕವನ್ನು ಮಡಚಿ ಚೀಲದೊಳಗಿಟ್ಟು ಉದ್ದಂಡ ನಮಸ್ಕಾರ ಮಾಡಿ ಕುಕ್ಕರುಗಾಲಲ್ಲಿ ಕುಳಿತು ಸ್ವಾಮೀಜಿಯಿಂದ ಫಲಮಂತ್ರಾಕ್ಷತೆ ಪಡೆದುಕೊಂಡರು.

ಈಗ ನನಗೆ ಪೇಚಿಗೆ ಸಿಕ್ಕಂತಾಯಿತು. ನಾನು ಯಾವ ಸ್ವಾಮೀಜಿಯರ ಮುಂದೆಯೂ ಅಷ್ಟರವರೆಗೆ ಉದ್ದಂಡ ನಮಸ್ಕಾರ ಮಾಡಿದ ಅನುಭವ ಇಲ್ಲ. ಫಲಮಂತ್ರಾಕ್ಷತೆ ತೆಗೆದುಕೊಂಡೂ ಇಲ್ಲ. ದೇವಸ್ಥಾನಗಳಿಗೆ ಹೋದರೆ ಪೂಜೆ ಭಟ್ರು ಕೊಡುವ ತಿರ್ಥ, ಪ್ರಸಾದ ತೆಗೆದುಕೊಂಡು ಮಾತ್ರ ಗೊತ್ತು.

ಪ.ಗೋ ನೀನೂ ರೆಡಿಯಾಗು ಉದ್ದಂಡ ಬೀಳಲು ಎಂದರು. ನನಗೆ ಮತ್ತೂ ಮುಜುಗರವಾಯಿತು. ಆದರೆ ಮಯ್ಯರ ನಂತರ ಉಭಯರು, ನರಸಿಂಹರಾವ್ ಉಳಿದವರು ನಾನು ಮತ್ತು ಪ.ಗೋ ಮಾತ್ರ. ಸ್ವಾಮೀಜಿ ಪ.ಗೋ ಅವರನ್ನು ಹೇಗಿದ್ದೀರಿ ಎಂದರು ಫಲಮಂತ್ರಾಕ್ಷತೆ ಕೈಯ್ಯಲ್ಲಿಡಿದುಕೊಂಡು. ಪ.ಗೋ ಉದ್ದಂಡ ಬೀಳಲಿಲ್ಲ, ಹಾಗೇ ಸ್ವಲ್ಪ ಬಗ್ಗಿ ಫಲಮಂತ್ರಾಕ್ಷತೆ ಪಡೆದುಕೊಂಡರು. ಕೊನೆಯದಾಗಿ ನನ್ನ ಸರದಿ. ನಾನೂ ಬಗ್ಗೆಯೇ ಕೈಚಾಚಿದೆ.

ಪೇಜಾವರ ಶ್ರೀಗಳು ನೀವು ಯಾವ ಪತ್ರಿಕೆಯವರು ಕೇಳಿದರು. ನಾನು ಮುಂಗಾರು ಎಂದೆ. ತಮ್ಮ ಹೆಸರು ಎಂದರು ಹೇಳಿದೆ. ಸ್ವಾಮೀಜಿ ಇವನು ದಲಿತ, ಬಂಡಾಯ ಸಾಹಿತಿ ಎಂದರು ಪ.ಗೋ ನಗುತ್ತಲೇ. ಆಗ ಸ್ವಾಮೀಜಿ ಒಳ್ಳೇದು ಒಳ್ಳೇದು ಎಂದವರೇ ತಮ್ಮ ಶಾಲು ಸರಿಪಡಿಸಿಕೊಂಡು ಹೊರಡಲಣಿಯಾದರು.

ಸ್ವಾಮೀಜಿ ಹೊರಟು ಕಾರು ಹತ್ತಿದ ಮೇಲೆ ನಾವು ಅಲ್ಲಿಂದ ಹೊರಟೆವು. ಆಗ ಮಯ್ಯರು ಅಲ್ಲಯ್ಯಾ ನೀವು ಹೇಗೂ ಒಂಥರಾ ಮನುಷ್ಯ ಆದರೆ ಇವನನ್ನು ಯಾಕೆ ಕಾಲಿಗೆ ಬೀಳುವುದನ್ನು ತಡೆಯುತ್ತೀರಿ ಕೇಳಿದರು ಪ.ಗೋ ಅವರಿಗೆ.

ವಾಸ್ತವವಾಗಿ ಪ.ಗೋ ನನ್ನನ್ನು ಸ್ವಾಮೀಜಿ ಕಾಲಿಗೆ ಬೀಳದಂತೆ ತಡೆದಿರಲಿಲ್ಲ, ಆದರೆ ನಾನು ಪ.ಗೋ ಹೇಳಿಯೇ ಬಿದ್ದಿಲ್ಲ ಎನ್ನುವುದು ಮಯ್ಯರ ಗ್ರಹಿಕೆ.

ಈ ಮಾತು ಪ.ಗೋ ಅವರನ್ನು ತುಸು ಕೆರಳಿಸಿತ್ತು. ಮಯ್ಯರೇ ನಾನು ಯಾರಿಗೂ ದೀಕ್ಷೆ ಕೊಡುವ ಕೆಲಸ ಮಾಡುವುದಿಲ್ಲ ಅಂಥದ್ದನ್ನೆಲ್ಲಾ ನಿಮ್ಮಂಥವರಿಗೇ ಬಿಟ್ಟುಕೊಟ್ಟು ಬಹಳ ಕಾಲವಾಗಿದೆ. ನನ್ನಪ್ಪನ ಕಾಲು ಹಿಡಿಯುತ್ತೇನೆ, ನಾನು ಬೇರೆಯವರ ಕಾಲು ಹಿಡಿಯುವುದಿಲ್ಲ, ಯಾರು ಹಿಡಿದ್ರೇನು, ಬಿಟ್ರೇನು? ಎಂದರು.

ಅಲ್ಲಯ್ಯ ಸಿಟ್ಟಾಗುವುದು ಯಾಕೆ ?, ನಾನು ಕುಶಾಲಿಗೆ ಕೇಳಿದೆ ಎಂದರು ಮಯ್ಯ.

ಪಕ್ಕದಲ್ಲಿದ್ದ ನರಸಿಂಹರಾವ್ ಮಯ್ಯರೇ ನೀವು ಅವನನ್ನು ಕೆಣಕುವುದು ಯಾಕೆ ?, ಅವನು ಹೇಗೆ ಎನ್ನುವುದು ಗೊತ್ತಿಲ್ಲವೇ? ಕೇಳಿದರು. ಪ.ಗೋ ಮಯ್ಯರನ್ನು ನೋಡುತ್ತಲೇ ಬೀಡಿಗೆ ಬೆಂಕಿ ಹಚ್ಚಿದರು.

Chidambara-Baikampady

-ಚಿದಂಬರ ಬೈಕಂಪಾಡಿ

1 Comment

  1. HNPura Manjunatha

    ಖಂಡಿತವಾದಿ,,,ಲೋಕವಿರೋಧಿ ಅನ್ನುವುದು ಪಗ಼ೋ. ವಿಚಾರದಲ್ಲಿ ನಿಜ ಅನ್ಸುತ್ತೆ.

Write A Comment