ಕನ್ನಡ ವಾರ್ತೆಗಳು

ಶಾಂತಿಯುತ ಮತದಾನ ಸಂದರ್ಭ ಕಂಡು ಬಂದ ಕೆಲವೊಂದು ಅಶಾಂತಿಯ ಕ್ಷಣಗಳು… ಕೆಲವೊಂದು ಸ್ವಾರಸ್ಯಕರ ಘಟನೆಗಳು… ಮಾತಿನ ಚಕಮಕಿ, ಹೊಕೈ, ಅಭ್ಯರ್ಥಿ ಸಹಿತ ಇಬ್ಬರ ಬಂಧನ

Pinterest LinkedIn Tumblr

Election_Special_GM

ಮತಪತ್ರಗಳನ್ನು ಹೊತ್ತೊಯ್ದ ಆರೋಪ: ಓರ್ವ ಅಭ್ಯರ್ಥಿ ಸಹಿತ ಇಬ್ಬರ ಬಂಧನ

ಮಂಗಳೂರು: ಉಳಾಯಿಬೆಟ್ಟು ಮತಗಟ್ಟೆಯಿಂದ ಮತಪತ್ರವನ್ನು ಹೊತ್ತೊಯ್ದ ಆರೋಪದ ಮೇಲೆ ಓರ್ವ ಅಭ್ಯರ್ಥಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಉಳಾಯಿಬೆಟ್ಟು ನಿವಾಸಿ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿ ಅಬ್ದುರ್ರಝಾಕ್ ಮತ್ತು ಕಾಂಗ್ರೆಸ್ ಕಾರ್ಯಕರ್ತ ವಿಠಲ ಅಮೀನ್ ಬಂಧಿತ ಆರೋಪಿಗಳಾಗಿದ್ದಾರೆ.

ಇಂದು ಮಧ್ಯಾಹ್ನ ಉಳಾಯಿಬೆಟ್ಟು ಮತಗಟ್ಟೆಯಲ್ಲಿ ಮತದಾರರು ಮತದಾನ ಮಾಡುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ವಿಠಲ ಅಮೀನ್ ಎಂಬವರು ಎಸ್‌ಡಿಪಿಐ ಕಾರ್ಯಕರ್ತ ಅಬ್ದುರ್ರಝಾಕ್‌ರಿಗೆ ಬೂತ್‌ನಿಂದ ಮತಪತ್ರ (ಬ್ಯಾಲೆಟ್ ಪೇಪರ್)ವನ್ನು ತರುವಂತೆ ಸೂಚಿಸಿದ್ದು, ಅದರಂತೆ ರಝಾಕ್ ಮತಪತ್ರಗಳನ್ನು ಹೊಂದಿದ್ದ ಪುಸ್ತಕವನ್ನೇ ಹೊತ್ತೊಯ್ದಿದ್ದಾರೆೆ ಎಂದು ಬೂತ್‌ನ ಅಧಿಕಾರಿಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಅಬ್ದುರ್ರಝಾಕ್ ಬೂತ್‌ನಿಂದ ಸುಮಾರು 50 ಮೀಟರ್‌ವರೆಗೆ ಮತ ಪತ್ರ ಗಳನ್ನು ಹೊತ್ತೊಯ್ದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಹೊಕೈ ನಡುವೆಯೂ ಶಾಂತಿಯುತ ಮತದಾನ

ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಂದು ಮತದಾನ ಕೇಂದ್ರದಲ್ಲಿ ನಡೆದ ಸಣ್ಣ ಮಟ್ಟಿನ ಹೊಯ್‌ಕೈ, ಮಾತಿನ ಚಕಮಕಿಯನ್ನು ಹೊರತು ಪಡಿಸಿ, ಬಹುತೇಕ ಶಾಂತಿಯುತವಾಗಿದೆ ನಡೆದಿದೆ.

ಪುತ್ತೂರು ತಾಲೂಕಿನ 41 ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಿಸಿದ ಒಟ್ಟು 606 ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ಮಂದಿ ಈಗಾಗಲೇ ಅವಿರೋಧವಾಗಿ ಆಯ್ಕೆಗೊಂಡಿದ್ದು, ಉಳಿದ 597 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆದಿದೆ.

ತಾಲೂಕಿನಲ್ಲಿ ಒಟ್ಟು 1,334 ಮಂದಿ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದು, ಇವರ ಆಯ್ಕೆಗಾಗಿ 221 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದೆ. ಕಾಂಗ್ರೆಸ್-ಎಸ್‌ಡಿಪಿಐ ನಡುವೆ ಹೊಕೈ: ಅರಿಯಡ್ಕ ಗ್ರಾಮ ಪಂಚಾಯತ್‌ಗೆ ಸೇರಿದ ಕಾವು ಮಾಡ್ನೂರು ಹಿರಿಯ ಪ್ರಾಥಮಿಕ ಶಾಲಾ ಮತದಾನ ಕೇಂದ್ರದ ಬಳಿ ಕಾಂಗ್ರೆಸ್ ಮತ್ತು ಎಸ್‌ಡಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ- ಹೊಕೈ ನಡೆಯಿತು. ತಕ್ಷಣವೇ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಮಳೆಯಿಂದಾಗಿ ಸಮಸ್ಯೆ ಬಡಗನ್ನೂರು, ನೆಟ್ಟಣಿಗೆ ಮುಡ್ನೂರು ಇನ್ನಿತರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಗ್ಗಿನ ವೇಳೆಯಲ್ಲಿ ಮಳೆ ಸುರಿದಿದ್ದು, ಇದರಿಂದಾಗಿ ಈ ಭಾಗದ ಮತದಾರರು ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಸಮಸ್ಯೆ ಎದುರಿಸುವಂತಾಯಿತು. ಬೆಳಗ್ಗೆ ಬಿರುಸಿನ ಮತದಾನವಾಗಿದ್ದು, ಮಧ್ಯಾಹ್ನ ವೇಳೆ ಬಹುತೇಕ ಮತದಾನ ಕೇಂದ್ರಗಳಲ್ಲಿ ಮಂದ ಗತಿಯಲ್ಲಿ ನಡೆದ ಮತದಾನವು ಸಂಜೆ ವೇಳೆಗೆ ಮತ್ತೆ ಬಿರುಸು ಪಡೆದುಕೊಂಡಿತ್ತು.

ಮಾತಿನ ಚಕಮಕಿ

ಉಳ್ಳಾಲ:ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 20 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆದಿದ್ದು, ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಶಾಂತಿಯುತ ಮತದಾನ ನಡೆದಿದೆ. ಕ್ಷೇತ್ರದ ಹೆಚ್ಚಿನ ಮತಗಟ್ಟೆಗಳಲ್ಲಿ ಬೆಳಗ್ಗಿನ ಜಾವ ಬಿರುಸಿನಿಂದ ನಡೆದರೆ ಸುಮಾರು 9 ಗಂಟೆಯ ಬಳಿಕ ನೀರಸವಾಗಿತ್ತು. ಕುಂಪಲ ಬಳಿ ಮತಗಟ್ಟೆ ಏಜೆಂಟ್ ಒಬ್ಬರು ಮತಗಟ್ಟೆ ಬಳಿ ಮತದಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಜನರನ್ನು ಚದುರಿಸಲಾಯಿತು.

ಮುನ್ನೂರು ಸಮೀಪದ ಕುತ್ತಾರು ಶಾಲೆಯ ಮತಗಟ್ಟೆಯಲ್ಲೂ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಪೊಲೀಸರು ಗುಂಪನ್ನು ಚದುರಿ ಸಿದ್ದಾರೆ. ತಲಪಾಡಿ, ಕಿನ್ಯಾ ಭಾಗಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

ಆ್ಯಂಬುಲೆನ್ಸ್‌ನಲ್ಲಿ ಆಗಮಿಸಿ ಮತದಾನ

ಮೂಡುಬಿದಿರೆ: ಒಂದು ವರ್ಷದ ಹಿಂದೆ ಮರದಿಂದ ಬಿದ್ದು, ಸೊಂಟದ ಕೆಳಗೆ ಸ್ವಾಧೀನ ಕಳೆದುಕೊಂಡಿರುವ ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಮುಂಡ್ರುದೆಗುತ್ತು ಮಾರ್ಗದ ಮನೆ ನಿವಾಸಿ ಉಮೇಶ್ ಪೂಜಾರಿ ಆ್ಯಂಬುಲೆನ್ಸ್ ನಲಿ್ಲ ಆಗಮಿಸಿ ಕೇಮಾರು ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಕಳೆದ 1 ವರ್ಷದ ಹಿಂದೆ ತೆಂಗಿನ ಮರದಿಂದ ಬಿದ್ದ ಪರಿಣಾಮ ಉಮೇಶ್ ಸೊಂಟದ ಕೆಳಗೆ ಸ್ವಾಧೀನ ಕಳೆದುಕೊಂಡಿದ್ದಾರೆ. ಮೂಡುಬಿದಿರೆ ಲೊಯಲಾ ಆ್ಯಂಬುಲೆನ್ಸ್ ಮಾಲಕ-ಚಾಲಕ ಅಮಿತ್ ಡಿಸಿಲ್ವಾ ಶುಕ್ರವಾರ ಉಮೇಶ್ ಅವರ ಮನೆಯ ಸಮೀಪ ಹಾದುಹೋಗುವಾಗ ಗಮನಿಸಿದ್ದರು. ಈ ಸಂದರ್ಭ ಅಮಿತ್ ‘ಓಟು ಹಾಕುವುದಿಲ್ಲವೇ’ ಎಂದು ಕೇಳಿದರು.

‘ಓಟು ಹಾಕಲು ಮನಸ್ಸಿದೆ, ಆದರೆ ನನ್ನಿಂದ ಸಾಧ್ಯವಾಗುತ್ತಿಲ್ಲ’ ಎಂದು ಉಮೇಶ್ ಅಳಲು ವ್ಯಕ್ತಪಡಿಸಿದರು. ಸ್ಥಳೀಯರ ನೆರವಿನೊಂದಿಗೆ ಅಮಿತ್ ಅವರು ಶುಕ್ರವಾರ ಮಧ್ಯಾಹ್ನ 2:30 ವೇಳೆಗೆ ಉಮೇಶ್ ಅವರನ್ನು ತಮ್ಮ ಆ್ಯಂಬುಲೆನ್ಸ್ ಮೂಲಕ ಕೇಮಾರು ಶಾಲೆಯಲ್ಲಿನ ಮತಗಟ್ಟೆಗೆ ಕರೆತಂದರು. ಉಚಿತ ಸೇವೆ ನೀಡಿದ ಅಮಿತ್ ಮತ್ತೆ ಉಮೇಶ್ ಅವರನ್ನು ಮನೆಗೆ ಸುರಕ್ಷಿತವಾಗಿ ಬಿಟ್ಟರು.

ಮತಗಟ್ಟೆಯಲ್ಲಿ ದಿಡೀರ್ ಪ್ರತ್ಯಕ್ಷವಾದ ಮದುವಣಗಿತ್ತಿ

ಜರಿಸೀರೆ, ಮುಂದಾಲೆ-ಸೊಂಟಪಟ್ಟಿ ಸಹಿತ ಮೈತುಂಬಾ ಆಭರಣ ಧರಿಸಿ, ತಲೆಗೆ ಜಲ್ಲಿ ಹಾಕಿಕೊಂಡು ಬಂದ ಮದುವಣಗಿತ್ತಿಯೊಬ್ಬಳು ಸಿಂಗಾರಗೊಂಡ ಕಾರಿನಿಂದ ಇಳಿದು ಮತಗಟ್ಟೆಗೆ ಬಂದಾಗ ನೋಡಿದವರೆಲ್ಲಾ ನಿಬ್ಬೆರಗು.ಈ ದೃಶ್ಯ ಕಂಡು ಬಂದದ್ದು ಗೋಳ್ತಮಜಲು ಗ್ರಾಮಪಂಚಾಯತ್‌ನ ಮತಗಟ್ಟೆಯಲ್ಲಿ.

ಕಲ್ಲಡ್ಕ ಸಮೀಪದ ಕೊಳಕೀರು ನಿವಾಸಿ ದಿ.ಕೃಷ್ಣ ಬಂಗೇರ ಮತ್ತು ಗುಲಾಬಿ ದಂಪತಿ ಪುತ್ರಿ ಜಯಂತಿ ಎಂಬವರೇ ಹೀಗೆ ಶೃಂಗಾರಗೊಂಡು ಮತಗಟ್ಟೆಗೆ ಬಂದ ಮದುಮಗಳು. ಇವರ ವಿವಾಹವು ಶುಕ್ರವಾರ ಬೆಳ್ತಂಗಡಿ ತಾಲೂಕಿನ ಆಳದಂಗಡಿಯ ಶ್ರೀಗುರು ಸಭಾಭವನದಲ್ಲಿ ಶ್ರೀಧರ್ ಎಂಬವರೊಂದಿಗೆ ನಡೆಯಬೇಕಿದ್ದು, ಮನೆಯಿಂದ ಶೃಂಗಾರಗೊಂಡು ಹೊರಟ ಜಯಂತಿ ಮತಗಟ್ಟೆಯಲ್ಲಿ ಮತಚಲಾಯಿಸಿಯೇ ಬೆಳ್ತಂಗಡಿಯತ್ತ ತೆರಳಿದರು.

ಜಯಂತಿಯವರು ಕಾರಿನಿಂದಿಳಿದು ಸರಸರನೇ ಮತಗಟ್ಟೆಗೆ ಬಂದಾಗ ಕಾವಲಿದ್ದ ಪೊಲೀಸ್ ಸೇರಿದಂತೆ ಮತಗಟ್ಟೆ ಅಧಿಕಾರಿಗಳಿಗೇ ಅಚ್ಚರಿ. ಮದುವೆಮನೆಗೆ ಹೊರಟವರು ಇಲ್ಲೇಕೆ ಬಂದರು ಎಂಬ ಗಾಬರಿಯೂ ಆಯ್ತು. ಬಳಿಕ ತನ್ನ ಗುರುತಿನ ಚೀಟಿಯನ್ನು ತೋರಿಸಿ, ಮತದಾರರ ಪಟ್ಟಿಯ ಸಂಖ್ಯೆ ದಾಖಲಿಸಿ ಮತಚಲಾಯಿಸಿಯೇ ಬಿಟ್ಟರು.

ಮದುಮಗಳಂತೆ ಶೃಂಗಾರಗೊಂಡಿದ್ದ ಹಿನ್ನೆಲೆಯಲ್ಲಿ ಮತದಾನಕ್ಕೆ ಬಂದ ಇತರ ಮತದಾರರೂ, ಅವರಿಗೆ ಬೇಗ ಮತದಾನಕ್ಕೆ ಅವಕಾಶ ಒದಗಿಸಿಕೊಟ್ಟರು. ಒಟ್ಟಿನಲ್ಲಿ ಮದುವೆದಿನವೇ ತನ್ನೆಲ್ಲಾ ಒತ್ತಡಗಳನ್ನು ಬದಿಗಿಟ್ಟು, ಮತಗಟ್ಟೆಗೆ ಬಂದು ಮತದಾನದಲ್ಲಿ ಪಾಲ್ಗೊಂಡು ಜಯಂತಿಯವರ ಮತನಿಷ್ಠೆ ಸಾರ್ವಜನಿಕವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

ಹತ್ತಾರು ಕಿ.ಮೀ. ನಡೆದು ಮತದಾನಗೈದ ಗ್ರಾಮಸ್ಥರು

ಮಂಗಳೂರು:ನಕ್ಸಲ್ ಪೀಡಿತ ಪ್ರದೇಶ ಎಂದು ಗುರುತಿಸಲ್ಪಟ್ಟಿರುವ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಮತದಾರರು ಹತ್ತಾರು ಕಿ.ಮೀ. ನಡೆದುಕೊಂಡು ಬಂದು ಮತದಾನಗೈಯ್ಯುವ ಮೂಲಕ ಗಮನ ಸೆಳೆದರು.

ಕುತ್ಲೂರು 1ನೆ ವಾರ್ಡ್‌ನಲ್ಲಿ 911 ಮತದಾರರಿದ್ದು, ಅಪರಾಹ್ನದ ವೇಳೆ ಶೇ. 47.3 ಅಂದರೆ 431 ಮಂದಿ ಮತ ಚಲಾಯಿಸಿದ್ದರು. ನಕ್ಸಲ್ ಜತೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ವಿಠಲ ಮಲೆಕುಡಿಯ ಸ್ಪರ್ಧಿಸುವ 2ನೆ ವಾರ್ಡ್‌ನಲ್ಲಿ 606 ಮತದಾರರಿದ್ದು, ಅಪರಾಹ್ನದ ವೇಳೆಗೆ ಸುಮಾರು ಶೇ.50 ಅಂದರೆ 300 ಮಂದಿ ಮತದಾನಗೈದಿದ್ದರು.

ನಕ್ಸಲ್ ಎಂದು ಹೇಳಲಾಗುತ್ತಿದ್ದ ಮತ್ತು ಪೊಲೀಸ ರಿಂದ ಎನ್‌ಕೌಂಟರ್‌ಗೊಳಗಾಗಿದ್ದ ದಿನಕರನ ತಾಯಿ ದೇಜಮ್ಮ ಮಲೆಕುಡಿಯ ಮತ್ತು ವಸಂತನ ಚಿಕ್ಕಮ್ಮ ಸುನಂದಾ ಮಲೆಕುಡಿಯ 1ನೆ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿದ್ದು, ಇಬ್ಬರೂ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಜಮ್ಮ ಹಿಂದೊಮ್ಮೆ ಜನತಾ ದಳದ ಬೆಂಬಲ ದೊಂದಿಗೆ ಗ್ರಾ.ಪಂ. ಸದಸ್ಯರಾಗಿದ್ದರು. ಈ ಬಾರಿ ಅವರು ಎಡಪಕ್ಷದ ಬೆಂಬಲದೊಂದಿಗೆ ಕಣಕ್ಕಿಳಿದಿದ್ದಾರೆ.

ಗೆದ್ದರೆ ಜನರ ಸಮಸ್ಯೆಗೆ ಧ್ವನಿಯಾಗುವೆ: ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಂಬಲವಿತ್ತು. ನಾನು ಕುತ್ಲೂರು 1ನೆ ವಾರ್ಡ್‌ನ ಮತದಾರ. ಅಲ್ಲಿ ಮೀಸಲಾತಿಯಿಂದ ಸ್ಪರ್ಧಿಸಲಾಗಲಿಲ್ಲ. ಹಾಗಾಗಿ 2ನೆ ವಾರ್ಡಿನಿಂದ ಸ್ಪರ್ಧಿಸಿದ್ದೇನೆ. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ. ಒಂದು ವೇಳೆ ಗೆದ್ದರೆ ಜನರ ಸಮಸ್ಯೆಗೆ ಧ್ವನಿಯಾಗುವೆ’ ಎಂದರು ವಿಠಲ ಮಲೆಕುಡಿಯ.

ವಿಠಲ ಮಲೆಕುಡಿಯ 1ನೆ ವಾರ್ಡ್‌ನಲ್ಲಿ ಸ್ಪರ್ಧಿಸಬೇಕಿತ್ತು. ಆದರೆ ಮೀಸಲಾತಿಯಿಂದ ಸಾಧ್ಯ ವಾಗಲಿಲ್ಲ. ಜಾತಿ ರಾಜಕಾರಣ ವಿಠಲ ಮಲೆಕುಡಿಯರ ಗೆಲುವಿಗೆ ಅಡ್ಡಿಯಾದರೂ ಅಚ್ಚರಿಯಿಲ್ಲ ಎನ್ನುತ್ತಾರೆ, ಮಹಿಳಾ ಮತದಾರರೊಬ್ಬರು.

ಬಂಟ್ವಾಳದಲ್ಲಿ ಗೊಂದಲ ರಹಿತ ಮತ ಚಲಾವಣೆ

ಬಂಟ್ವಾಳ:ತಾಲೂಕಿನ 57 ಗ್ರಾ.ಪಂ.ಗಳ 804 ಸ್ಥಾನಗಳಿಗೆ ಶುಕ್ರವಾರ ಯಾವುದೇ ಗೊಂದಲಗಳಿಲ್ಲದೆ ನಿರಾಂತಕವಾಗಿ ಮತದಾನ ನಡೆದಿದೆ. ಬೆಳಗ್ಗಿನಿಂದಲೇ ಮತದಾರರು ತಮ್ಮತಮ್ಮ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದು, ತಾಲೂಕಿನಲ್ಲಿ ಒಟ್ಟು ಶೇ.62ರಷ್ಟು ಮತದಾನ ನಡೆದಿದೆ.

ಮೋಡಕವಿದ ವಾತಾವರಣದ ನಡುವೆ ಬೆಳಗ್ಗಿನಿಂದ ನೀರಸವಾಗಿಯೇ ನಡೆದ ಮತದಾನ ಪ್ರಕ್ರಿಯೆಯಿಂದಾಗಿ ಬೆಳಗ್ಗಿನ ಹೊತ್ತನ್ನು ಹೊರತುಪಡಿಸಿದರೆ, ಮತಗಟ್ಟೆಗಳಲ್ಲಿ ವಿಶೇಷ ಸರತಿ ಸಾಲು ಕಂಡುಬಂದಿರಲಿಲ್ಲ. ಬಹುತೇಕ ಮತಗಟ್ಟೆಗಳು ಖಾಲಿ ಖಾಲಿಯಾಗಿದ್ದುದು ಕಂಡುಬಂತು.

ಪಕ್ಷಾತೀತವಾಗಿ ಚುನಾವಣೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ಮತಗಟ್ಟೆಗಳ ಬಳಿಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ಅಬ್ಬರವೂ ಕಡಿಮೆಯಾಗಿತ್ತು. ಬೆರಳೆಣಿಕೆಯ ಕಾರ್ಯಕರ್ತರು ವೌನವಾಗಿ ಕುಳಿತು ಮತದಾರರನ್ನು ಸೆಳೆಯುವ ದೃಶ್ಯವಷ್ಟೇ ಕಂಡುಬಂತು. ತುಂಬೆ, ಬ್ರಹ್ಮರಕೂಟ್ಲು, ಕಲ್ಲಡ್ಕ, ಗೋಳ್ತಮಜಲು, ವೀರಕಂಭ, ನೇರಳಕಟ್ಟೆ, ಅರಳ, ರಾಯಿ, ಪಂಜಿಕಲ್ಲು, ಚೆನ್ನೈತ್ತೋಡಿ ಸೇರಿದಂತೆ ಬಹುತೇಕ ಮತಗಟ್ಟೆಗಳಲ್ಲಿ ಪಕ್ಷಗಳ ಕಾರ್ಯಕರ್ತರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚಿಸುತ್ತಿದ್ದ ದೃಶ್ಯಗಳು ಕಂಡುಬಂತು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಕಳ್ಳಿಗೆ ಗ್ರಾಮದ ತೊಡಂಬಿಲ ಶಾಲೆಯಲ್ಲಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಗೋಳ್ತಮಜಲು ಪಂಚಾಯತ್ ಕಚೇರಿಯಲ್ಲಿ ಹಾಗೂ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಬಾಳ್ತಿಲದ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.

ಮತದಾನಕ್ಕಾಗಿ ತಾಲೂಕಿನಲ್ಲಿ 315 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಒಟ್ಟು 837 ಸ್ಥಾನಗಳ ಪೈಕಿ 33 ಮಂದಿ ಅವಿ ರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ 804 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1,825 ಮಂದಿ ಕಣದಲ್ಲಿದ್ದಾರೆ.

ಮಳೆಯಿಂದ ಅಡ್ಡಿ

ಬಂಟ್ವಾಳ: ಅಪರಾಹ್ನದ ವೇಳೆ ಸಿಡಿಲು ಸಹಿತ ಭಾರೀ ಮಳೆ ಸುರಿದಿದ್ದು, ಮತದಾನಕ್ಕೆ ತೆರಳಲು ಮತದಾರರು ಹಿಂದೇಟು ಹಾಕಿದ್ದರಿಂದ ಅಪರಾಹ್ನ 1 ಗಂಟೆಯಿಂದ 2:30ರವರೆಗೆ ಮಳೆ ಸುರಿದ ಬಹುತೇಕ ಪ್ರದೇಶಗಳ ಮತಗಟ್ಟೆಗಳು ಬಿಕೋ ಎನ್ನುತ್ತಿತ್ತು.

ಶತಾಯುಷಿ ಮತದಾನ

ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅರಿಯಡ್ಕ ಗ್ರಾಮದ ಶೇಕಮಲೆ ಹಿರಿಯ ಪ್ರಾಥಮಿಕ ಶಾಲಾ ಮತದಾನ ಕೇಂದ್ರದಲ್ಲಿ 105 ವಯಸ್ಸಿನ ವೃದ್ಧೆ ಶೇಕಮಲೆಯ ನಿವಾಸಿ ಐಸಮ್ಮ ಎಂಬವರು ತನ್ನ ಮೊಮ್ಮಗ ಬಶೀರ್ ಶೇಕಮಲೆ ಎಂಬವರ ಸಹಾಯದೊಂದಿಗೆ ಮತ ಚಲಾಯಿಸಿದರು.

ಮುದ್ರಣದೋಷ : ಎರಡು ಕಡೆ ಮರುಮತದಾನ

ಮಂಗಳೂರು: ತಾಲೂಕಿನ ಪಡುಪೆರಾರು ಗ್ರಾ.ಪಂ. ಪಡುಪೆರಾರು-1 ಕ್ಷೇತ್ರದ ಮತಗಟ್ಟೆ ಸಂಖ್ಯೆ 196ರಲ್ಲಿ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಓರ್ವ ಅಭ್ಯರ್ಥಿಯ ಚಿಹ್ನೆ ಮತಪತ್ರದಲ್ಲಿ ಮುದ್ರಣವಾಗದೆ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆ ಮತಗಟ್ಟೆಯ ಮತದಾನವನ್ನು ಸ್ಥಗಿತಗೊಳಿ ಸಲಾಗಿದ್ದು, ಮೇ 31ರಂದು ಮರು ಮತದಾನ ನಡೆಯಲಿದೆ.

ಈ ಬಗ್ಗೆ ದ.ಕ. ಜಿಲ್ಲಾಧಿಕಾರಿಯು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದು, ಆಯೋಗವು ಅದೇ ಮತಗಟ್ಟೆಯಲ್ಲಿ ಮೇ 31ರಂದು ಮರು ಚುನಾವಣೆ ನಡೆಸುವಂತೆ ಆದೇಶ ನೀಡಿದೆ. ಈ ಮತಗಟ್ಟೆಯಲ್ಲಿ ಅಂದು ಬೆಳಗ್ಗೆ 7ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಬಂದಾರು ಮತಗಟ್ಟೆ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾ.ಪಂ.-2ರ ಬಂದಾರು ಕ್ಷೇತ್ರದ ಮತಗಟ್ಟೆ ಸಂಖ್ಯೆ 173ರಲ್ಲಿ ಮತಪತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆಗಳ ಮುದ್ರಣ ದೋಷವಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.

ಮುದ್ರಣ ದೋಷದ ಹಿನ್ನೆಲೆಯಲ್ಲಿ ಈ ಮತಗಟ್ಟೆಯಲ್ಲಿನ ಮತದಾನವು ಅಸಿಂಧು ಎಂದು ಘೋಷಿಸಿರುವ ಚುನಾವಣಾ ಆಯೋಗವು ಈ ಮತಗಟ್ಟೆಗೆ ಮೇ 31ರಂದು ಮರು ಮತದಾನ ನಡೆಸುವಂತೆ ಆದೇಶ ನೀಡಿದೆ.

ಇನ್ನು ಗೆಲುವಿನ ಲೆಕ್ಕಾಚಾರ

ಇಲ್ಲಿಯವರೆಗೆ ಮತದಾರರ ಮನಗೆಲ್ಲುವಲ್ಲಿ ನಾನಾ ಕಸರತ್ತು ನಡೆಸಿದ ಅಭ್ಯರ್ಥಿಗಳು ಇದೀಗ ಪಂಚಾಯತ್‌ ಅಧಿಕಾರಕ್ಕೆ ಬಂದರೆ ತಮ್ಮ-ತಮ್ಮ ಪಾತ್ರಗಳು ಏನು ಎಂಬುದರ ಬಗ್ಗೆ ಲೆಕ್ಕಾಚಾರ ಹಾಕಲು ಆರಂಭಿಸಿದ್ದಾರೆ. ಮೀಸಲಾತಿ ಆಧಾರದಲ್ಲಿ ಯಾವೆಲ್ಲ ರಾಜಕೀಯ ಲೆಕ್ಕಾಚಾರಗಳು ನಡೆಯಬಹುದು ಎಂಬುದಕ್ಕೆ ಅಭ್ಯರ್ಥಿಗಳು ಕಳೆದು-ಗುಣಿಸಿ ಲೆಕ್ಕ ಮಾಡಲು ಪ್ರಾರಂಭಿಸಿದ್ದಾರೆ.

ಖಾಕಿ ಕಣ್ಗಾವಲು

ದ.ಕ. ಜಿಲ್ಲಾ ಪೊಲೀಸ್‌ ಇಲಾಖೆಯ ವ್ಯಾಪ್ತಿಯಲ್ಲಿರುವ ನಕ್ಸಲ್‌ ಪೀಡಿತ ಮತಗಟ್ಟೆಗಳಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಶಾಂತಿಯುತ ಮತದಾನ ನಡೆಸಲು ಪೂರಕ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮತಗಟ್ಟೆಯ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಯಿತು.

ಬೆಂಗಳೂರು ಹಾಗೂ ಮಂಗಳೂರು ನಗರ ಪೊಲೀಸರು, ಕೆಎಸ್‌ಆರ್‌ಪಿ, ಕೇರಳದ ಪೊಲೀಸ್‌ ಸಿಬಂದಿ, ಎಎನ್‌ಎಫ್‌ ಸೇರಿದಂತೆ ಸುಮಾರು 2000 ಭದ್ರತಾ ಸಿಬಂದಿ ಭದ್ರತೆಯಲ್ಲಿ ಕೈಜೋಡಿಸಿದ್ದರು. 61 ಸೆಕ್ಟರ್‌ ಮೊಬೈಲ್‌ ಸ್ಕಾÌಡ್‌, 15 ಚೆಕ್‌ಪೋಸ್ಟ್‌, ಸಿಸಿಟಿವಿ, ವೀಡಿಯೋ ಚಿತ್ರೀಕರಣ ಕೈಗೊಳ್ಳಲಾಗಿತ್ತು. ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 59 ಸೆಕ್ಟರ್‌ ಮೊಬೈಲ್‌ ಸ್ಕಾಡ್‌, 20 ಸಿಸಿಟಿವಿ, ಕೆಎಸ್‌ಆರ್‌ಪಿ ಸೇರಿದಂತೆ ಸುಮಾರು 500ರಷ್ಟು ಪೊಲೀಸರನ್ನು ಭದ್ರತೆಗೆಂದು ನಿಯೋಜಿಸಲಾಗಿತ್ತು.

ಸಾಕಷ್ಟು ಭದ್ರತಾ ವ್ಯವಸ್ಥೆ ಕೈಗೊಂಡರೂ ಕೂಡ ಕೆಲವು ಕಡೆಗಳಲ್ಲಿ ವಿವಿಧ ಪಕ್ಷಗಳ ಬೆಂಬಲಿತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೋಸ್ಟರ್‌ ವಿವಾದವು ವಿಕೋಪಕ್ಕೆ ತೆರಳಿ ಎರಡು ಗುಂಪುಗಳು ಹಳೆಯಂಗಡಿಯ ಇಂದಿರಾನಗರ ಮತ ಕೇಂದ್ರದಲ್ಲಿ ಮಾತಿನ ಸಂಘರ್ಷ ನಡೆದಾಗ, ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು. ಪುತ್ತೂರಿನ ಅರಿಯಡ್ಕ ಗ್ರಾ.ಪಂ.ನ ಮಾಡನ್ನೂರು ವಾರ್ಡ್‌ ನಂ.3ರ ಕಾವು ಶಾಲಾ ಮತಗಟ್ಟೆಯಲ್ಲಿ ಕಾಂಗ್ರೆಸ್‌ ಹಾಗೂ ಎಸ್‌ಡಿಪಿಐ ಬೆಂಬಲಿತರು ಹೊಯ್‌ಕೈ ನಡೆಸಿದ ಘಟನೆ ನಡೆದಿದೆ. ವಿಟ್ಲದ ಶಿರಂಕಲ್ಲು ಹಾಗೂ ಕನ್ಯಾನ, ಸುಳ್ಯದ ಮರ್ಕಂಜ, ಮೇನಾಳದಲ್ಲೂ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಕನ್‌ಪ್ಯೂಸ್‌.. 

ಗ್ರಾ.ಪಂ.ನ ವಾರ್ಡ್‌ ಒಂದರಲ್ಲಿ ಹಲವು ಅಭ್ಯರ್ಥಿಗಳು ಕಣದಲ್ಲಿರುವ ಮೂರರಿಂದ ನಾಲ್ಕೈದು ವೋಟು ಚಲಾವಣೆ ಮಾಡಬೇಕಾಗಿತ್ತು. ಇದು ಕೆಲವರಿಗೆ ಗೊತ್ತಾಗದೆ ಅವರು ಗೊಂದಲಕ್ಕೀಡಾಗುತ್ತಿದ್ದರು. ಹಲವರಂತೂ ಎಂದಿನ ಚುನಾವಣೆಯ ಶೈಲಿಯಂತೆ ಒಂದೇ ಮತ ಚಲಾವಣೆ ಮಾಡಿದ ಉದಾಹರಣೆಯೂ ಇದೆ. ಇನ್ನೂ ಕೆಲವೆಡೆ ಪಕ್ಷಗಳ ಚಿಹ್ನೆ ಇಲ್ಲದ ಹಿನ್ನೆಲೆಯಲ್ಲಿ ಮತದಾನ ಮಾಡುವ ಸಂದರ್ಭ ಗಲಿಬಿಲಿಗೊಳಗಾದರು. ಕೆಲವೆಡೆ ಅಭ್ಯರ್ಥಿಗಳೂ ಮತದಾರರಲ್ಲಿ ಗೊಂದಲ ಮೂಡಿಸಿ, ಹಾಕಿದರೆ ಎಲ್ಲ ಮತವನ್ನೂ ಒಂದೇ ಗುಂಪಿನವರಿಗೆ ಹಾಕಬೇಕು. ಇಲ್ಲವಾದರೆ ವೋಟ್‌ ಹಾಳಾಗುತ್ತದೆ ಎಂದು ಎಂದಿದ್ದರು.

ಹೆಸರಿದೆ.. ಚಿಹ್ನೆಯಿಲ್ಲ..

ಬಜಪೆ: ಬಜಪೆ ಸಮೀಪದ ಪಡುಪೆರಾರ ಪಂಚಾಯತ್‌ನ ವಾರ್ಡ್‌ ನಂಬರ್‌ 1ರಲ್ಲಿ, ಮುಂಬಯಿಯಲ್ಲಿ ವಾಸವಾಗಿರುವ ಸ್ಥಳೀಯರಾದ ದಿವಾಕರ ಶೆಟ್ಟಿ ಅವರು ಮತದಾನ ಮಾಡಲು ಬಂದಾಗ ಬ್ಯಾಲೆಟ್‌ ಪೇಪರ್‌ನಲ್ಲಿ ಅಭ್ಯರ್ಥಿಯೊಬ್ಬರ ಹೆಸರು ಮಾತ್ರ ಇದ್ದು, ಚಿಹ್ನೆ(ಟೋಪಿ) ನಾಪತ್ತೆಯಾಗಿತ್ತು. ಇಂಗ್ಲಿಷ್‌ ಓದಲು ಮಾತ್ರ ತಿಳಿದಿರುವ ದಿವಾಕರ್‌ ಅವರು, ಅಭ್ಯರ್ಥಿ ನಳಿನಾಕ್ಷಿ ಅವರ ಚಿಹ್ನೆಯನ್ನು ಹುಡುಕಿದಾಗ ಚಿಹ್ನೆ ಕಾಣಿಸಲಿಲ್ಲ. ಹೀಗಾಗಿ ಅಲ್ಲಿರುವ ಚುನಾವಣಾ ಮೇಲ್ವಿàಚಾರಕ ಅಧಿಕಾರಿಗಳಿಗೆ ತಿಳಿಸಿದಾಗ ಈ ವಿಷಯ ಗಮನಕ್ಕೆ ಬಂತು. ಇದಕ್ಕೂ ಮುನ್ನ ಎಷ್ಟು ಬ್ಯಾಲೆಟ್‌ಪೇಪರ್‌ನಲ್ಲಿ ಚಿಹ್ನೆ ಇರಲಿಲ್ಲ ಎಂಬುದು ತಿಳಿದಿಲ್ಲ. ಕೆಲವು ಬ್ಯಾಲೆಟ್‌ಪೇಪರ್‌ನಲ್ಲಿ ಚಿಹ್ನೆ ಮುದ್ರಣಗೊಂಡಿದ್ದು, ಇನ್ನೂ ಕೆಲವು ಬ್ಯಾಲೆಟ್‌ ಪೇಪರ್‌ನಲ್ಲಿ ಚಿಹ್ನೆ ಮುದ್ರಣಗೊಂಡಿಲ್ಲ. ಹೀಗಾಗಿ ಇಲ್ಲಿ ಮತದಾನ ಸ್ಥಗಿತವಾಯಿತು.

ಇದೇ ಪಂಚಾಯತ್‌ನ ವಾರ್ಡ್‌ 2ರಲ್ಲಿ ಇದೇ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಅಭ್ಯರ್ಥಿಯೊಬ್ಬರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ವೋಟರ್‌ ಐಡಿ ಕೂಡ ಮತಪೆಟ್ಟಿಗೆಯೊಳಗೆ…

ತೆಂಕ ಎಕ್ಕಾರುವಿನ 2ನೇ ವಾರ್ಡ್‌ನಲ್ಲಿ ಮತ ಚಲಾಯಿಸಲು ಆಗಮಿಸಿದ ಮಹಿಳೆಯೊಬ್ಬರು ಬ್ಯಾಲೆಟ್‌ಪೇಪರನ್ನು ಮತಪೆಟ್ಟಿಗೆಗೆ ಹಾಕುವ ಜತೆಗೆ ಕೈಯಲ್ಲಿದ್ದ ವೋಟರ್‌ ಐಡಿಯನ್ನು ಕೂಡ ನೆನಪಿಲ್ಲದೆ ಪೆಟ್ಟಿಗೆಯೊಳಗೆ ಹಾಕಿದರು. ಐಡಿ ಕಾರ್ಡ್‌ ಮತಪೆಟ್ಟಿಗೆಯೊಳಗೆ ಹೋದದ್ದು ಗೊತ್ತಾದ ಬಳಿಕ ಮಹಿಳೆಯು ಚುನಾವಣಾ ಅಧಿಕಾರಿಯಲ್ಲಿ ಬಂದು ವಿಷಯ ತಿಳಿಸಿದರು. “ನಮಗೇನು ಈಗ ಮಾಡುವುದಕ್ಕಾಗಲ್ಲ. ಜೂ.5ರಂದು ಮತ ಎಣಿಕೆ ನಡೆಯುವ ಸ್ಥಳಕ್ಕೆ ನೀವು ಬನ್ನಿ. ಅಲ್ಲಿ ಮತ ಎಣಿಕೆ ನಡೆಯುವ ಸಂದರ್ಭ ಐಡಿ ತೆಗೆದುಕೊಡಲಾಗುತ್ತದೆ’ ಎಂದು ಚುನಾವಣಾಧಿಕಾರಿ ಹೇಳಿದರು.

ಧ್ವಜ ಸ್ತಂಭದಲ್ಲಿ ಸಿಸಿ ಕೆಮರಾ..

ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸಸಿಹಿತ್ಲು 1 ಮತ್ತು 2ನೇ ವಾರ್ಡ್‌ನ ದ.ಜಿ.ಪಂ.ಮಾ.ಪ್ರಾ. ಶಾಲೆಯಲ್ಲಿ ಪೊಲೀಸರು ಸಿಸಿ ಕೆಮರಾವನ್ನು ಅತೀಸೂಕ್ಷ್ಮ ಪ್ರದೇಶ ಎಂದು ಚುನಾವಣೆಯ ದಿನಕ್ಕಾಗಿ ಶಾಲೆಯ ಧ್ವಜಸ್ತಂಭಕ್ಕೆ ಅಳವಡಿಸಿದ ಬಗ್ಗೆ ಸ್ಥಳೀಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಉಂಗುರಕ್ಕೆ ಎದುರಾದ ಅಪಸ್ವರ.. 

ಅಭ್ಯರ್ಥಿಯೊರ್ವರ ಚಿಹ್ನೆ ಉಂಗುರವಾಗಿದ್ದು ಅವರ ಬೆಂಬಲಿಗರೊರ್ವರು ಎಲ್ಲ ಕೈ ಬೆರಳಿಗೂ ಉಂಗುರ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದುದನ್ನು ಇತರರು ಬೂತ್‌ ಅಧಿಕಾರಿಯ ಗಮನಕ್ಕೆ ತಂದು ಆಕ್ಷೇಪ ವ್ಯಕ್ತಪಡಿಸಿದರು. ಉಂಗುರ, ಪರ್ಸ್‌, ಟೇಬಲ್‌, ಕುರ್ಚಿ ಎಲ್ಲದರ ಜತೆಗೆ ನನ್ನ ಕನ್ನಡಕವೂ ಚಿಹ್ನೆಯಾಗಿದೆ ಏನು ಮಾಡೋದು? ಎಂದು ಹಾಸ್ಯದ ದಾಟಿಯಲ್ಲಿಯೇ ಆಗ ಸಮಾಧಾನ ಮಾಡಿದ ಘಟನೆ ಹಳೆಯಂಗಡಿಯ ಕೇಂದ್ರವೊಂದರಲ್ಲಿ ನಡೆಯಿತು.

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾ.ಪಂ. ವ್ಯಾಪ್ತಿಯಿಂದ ಕೊಂಡೆಮೂಲ ಗ್ರಾಮವನ್ನು ನೂತನ ಗ್ರಾ. ಪಂ. ಮಾಡಲಾಗಿದ್ದು ಇದರಿಂದ ಕೆಲವು ವಾರ್ಡುಗಳು ಎರಡು ಗ್ರಾ. ಪಂ.ಗಳಿಗೆ ಪಾಲಾಗಿ ಹೋಗಿ ಸಮಸ್ಯೆಯಾಗಿದೆ. ಮೆನ್ನಬೆಟ್ಟು ಗ್ರಾ. ಪಂ. ವ್ಯಾಪ್ತಿಯ ಮುಂಚಿಕಾಡು ಪರಿಸರದ ಮೂರು ಮನೆಗಳು (ಮನೆ. ನಂ. 11-35-1, 11-37-2, 11-37-3) ಎರಡು ವಾರ್ಡ್‌ಗಳಲ್ಲಿ ಹಂಚಿ ಹೋಗಿದೆ. ಕಳೆದ ಪಂಚಾಯತ್‌ ಚುನಾವಣೆ ಸಂದರ್ಭ ಮೆನ್ನಬೆಟ್ಟು-3ನೇ ವಾರ್ಡಿನಲ್ಲಿ ಹೆಸರಿತ್ತು. ಆದರೆ ಈ ಸಲದ ಚುನಾವಣೆಯಲ್ಲಿ ಮುಂಚಿಕಾಡುವಿನ ಒಂದೇ ಮನೆಯಲ್ಲಿ ವಾಸಿಸುತ್ತಿರುವ ಕೆಲವರಿಗೆ ಮೆನ್ನಬೆಟ್ಟು-3 ವಾರ್ಡ್‌ ಮತ್ತು ಉಳಿದವರಿಗೆ ಮೆನ್ನಬೆಟ್ಟು-4 ವಾರ್ಡ್‌ ಎಂದು ಮತದಾರರ ಪಟ್ಟಿಯಲ್ಲಿ ನಮೂದಿಸಲಾಗಿದೆ. ಮನೆ ನಂಬ್ರ ಮತ್ತು ವಿಳಾಸ ಒಂದೇ ಆಗಿದ್ದರೂ ಮನೆಯವರು ಎರಡು ವಾರ್ಡ್‌ಗಳಿಗೆ ಹಂಚಿ ಹೋಗಿದ್ದು ಸಂಬಂಧ ಪಟ್ಟ ಇಲಾಖೆಯ ದಿವ್ಯ ನಿರ್ಲಕ್ಷ ಕಂಡುಬಂದಿದೆ.

ಕೊಂಡೆಮೂಲ ಮರು ಮುದ್ರಣ

ಕಿನ್ನಿಗೋಳಿ: ಹೊಸ ಕೊಂಡೆಮೂಲ ಗ್ರಾ.ಪಂ. ನಡುಗೋಡು ವಾರ್ಡ್‌ನಲ್ಲಿ ಮತಪತ್ರಗಳು ತಪ್ಪಾಗಿ ಮುದ್ರಣ ಗೊಂಡಿದ್ದು ಗುರುವಾರ ಸಂಜೆಯ ಹೊತ್ತಿಗೆ ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ಬಂದು ಶುಕ್ರವಾರ ಬೆಳಗ್ಗೆ ಮತದಾನ ಆರಂಭವಾಗುವ ಮುಂಚೆ ಮರು ಮುದ್ರಿಸಿದಂತಹ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರು ತಾಲೂಕಿನಲ್ಲಿ ಸುಮಾರು 44 ಕಡೆಗಳಲ್ಲಿ ಈ ರೀತಿಯ ಆವಾಂತರ ನಡೆದಿದೆ ಎನ್ನಲಾಗಿದೆ.

ಏಳಿಂಜೆಯಲ್ಲಿ ನಕಲಿ ಮತದಾನ

ಕಿನ್ನಿಗೋಳಿ: ಐಕಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಏಳಿಂಜೆ ಲಿಟ್ಲ ಪ್ಲವರ್ ಶಾಲೆಯಲ್ಲಿ ಲಕ್ಷ್ಮೀ ಅವರ ಹೆಸರಿಗೆ ಬೇರೆ ಯಾರೊ ಮತದಾನ ಮಾಡಿ ಹೋಗಿದ್ದು ಅಸಲಿ ಮತದಾರರು ಬರುವವಾಗ ನಕಲಿ ಮತದಾನ ಬೆಳಕಿಗೆ ಬಂತು. ಬಳಿಕ ಮತಗಟ್ಟೆ ಅಧಿಕಾರಿ ವ್ಯಕ್ತಿಯು ಅಸಲಿ ಮತದಾರರು ಎಂದು ಖಚಿತಪಡಿಸದ ಬಳಿಕ ಟೆಂಡರ್‌ ಮತದಾನದಕ್ಕೆ ಅವಕಾಶ ಮಾಡಿಕೊಡಲಾಯಿತು.

ವೋಟು 1ನೇ ಬ್ಲಾಕ್‌ನಲ್ಲಿ.. ಸ್ಪರ್ಧೆ 2ರಲ್ಲಿ…

ನಕ್ಸಲ್‌ ನಂಟು ಹೊಂದಿದ ಆರೋಪ ಎದುರಿಸುತ್ತಿರುವ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ವಿಠಲ ಮಲೆಕುಡಿಯ ಅವರು ಬೆಳ್ತಂಗಡಿಯ ಕುತ್ಲೂರುವಿನ ಬ್ಲಾಕ್‌ ಒಂದರ ಮತದಾರ. ಆದರೆ ಅವರಿಗೆ ಮೀಸಲಾತಿ ದೊರೆಯದ ಕಾರಣದಿಂದ ಅವರು ಬ್ಲಾಕ್‌ 2ರಲ್ಲಿ ಸ್ಪರ್ಧೆ ಎದುರಿಸಿದ್ದರು.

ಶುಕ್ರವಾರ ಮಧ್ಯಾಹ್ನ ಅವರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕುತ್ಲೂರಿನಲ್ಲಿ ಮತಚಲಾಯಿಸಿ, ಸುದ್ದಿಗಾರರ ಜತೆಗೆ ಮಾತನಾಡಿದರು. “ತಾನು ಜಯಗಳಿಸಿದರೆ ರಾಷ್ಟ್ರೀಯ ಉದ್ಯಾನವನದೊಳಗೆ ಒಕ್ಕಲೆಬ್ಬಿಸುವುದರ ವಿರುದ್ದ ಹೋರಾಟ ನಡೆಸುತ್ತೇನೆ. ಜನರ ಮೂಲ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುತ್ತೇನೆ’ ಎಂದು ಹೇಳಿದರು.

ಮಳೆ- ಏಜೆಂಟ್‌ ಗಳ  ಬೂತ್‌ ಖಾಲಿ ಖಾಲಿ..

ದ.ಕ. ಜಿಲ್ಲೆಯ ವಿವಿಧ ಭಾಗದಲ್ಲಿ ಮಳೆ ಬಂದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ, ಮರದ ಕೆಳಗೆ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದ ಏಜೆಂಟ್‌ ಬೂತ್‌ಗಳು ಖಾಲಿಖಾಲಿಯಾಗಿದ್ದವು. ಕಟ್ಟಡ ಅಥವಾ ಶಾಮಿಯಾನದ ಒಳಗೆ ಬೂತ್‌ ಇರಿಸಿದವರಿಗೆ ಈ ಸಮಸ್ಯೆ ಇರಲಿಲ್ಲ.

Write A Comment