ರಾಷ್ಟ್ರೀಯ

ಹೀಗೊಂದು ತ್ಯಾಗ; 24ರ ಹರೆಯದ ಚಾರ್ಟೆರ್ಡ್ ಅಕೌಂಟೆಂಟ್ ಈಗ ಜೈನ ಮುನಿ!

Pinterest LinkedIn Tumblr


ಅಹಮ್ಮದಾಬಾದ್:ಮುಂಬೈ ಮೂಲದ ಶ್ರೀಮಂತ ಕುಟುಂಬದ 24ರ ಹರೆಯದ ಚಾರ್ಟೆರ್ಡ್ ಅಕೌಂಟೆಂಟ್ ವೃತ್ತಿ ಮಾಡುತ್ತಿದ್ದ ಯುವಕ ಇದೀಗ ಕೋಟ್ಯಂತರ ರೂಪಾಯಿ ಸಂಪತ್ತನ್ನು ತ್ಯಜಿಸಿ ಮೋಕ್ಷ ಪಡೆಯಲು ಜೈನ ಮುನಿಯಾಗಲು ನಿರ್ಧರಿಸಿದ್ದಾರೆ.

ಮೋಕ್ಷೇಶ್ ಶೇಟ್ ಅವರ ಕುಟುಂಬ ಜೆಕೆ ಕಾರ್ಪೋರೇಶನ್ ಮೂಲಕ ವ್ಯವಹಾರ ನಡೆಸುತ್ತಿದೆ. ಮೋಕ್ಷೇಶ್ ವಜ್ರ, ಮೆಟಲ್ ಹಾಗೂ ಶುಗರ್ ಇಂಡಸ್ಟ್ರೀಸ್ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ ಎಲ್ಲವನ್ನೂ ತ್ಯಜಿಸಿ ಇತ್ತೀಚೆಗೆ ಗಾಂಧೀನಗರ-ಅಹಮ್ಮದಾಬಾದ್ ರಸ್ತೆ ಸಮೀಪದ ತಪೋವನ್ ಸರ್ಕಲ್ ನಲ್ಲಿ ನಡೆದ ಸಮಾರಂಭದಲ್ಲಿ ಜೈನ ಮುನಿಯಾಗಿ ದೀಕ್ಷೆ ಪಡೆದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮೋಕ್ಷೇಶ್ ಶಿಕ್ಷಣದಲ್ಲಿ ಸಾಧಿಸಿದ ಸಾಧನೆಯನ್ನು ಕೂಡಾ ಕಡೆಗಣಿಸಲು ಸಾಧ್ಯವಿಲ್ಲ. ಆದರೆ ಅವೆಲ್ಲವನ್ನೂ ತ್ಯಜಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಕೆಲವೇ ಕೆಲವು ಉದಾಹರಣೆ ದೊರೆಯುತ್ತದೆ, ಅದಕ್ಕೆ ಮೋಕ್ಷೇಶ್ ಸೇರ್ಪಡೆಯಾಗಿದ್ದಾರೆ.

ನಾನು 15 ವರ್ಷದ ಹುಡುಗನಾಗಿದ್ದಾಗಲೇ ಮುಂದೆ ಜೈನ ಮುನಿಯಾಗಬೇಕೆಂಬ ಇಚ್ಛೆ ಹೊಂದಿದ್ದೆ. ದೈನಂದಿನ ಯಾಂತ್ರಿಕ ಬದುಕಿನಿಂದ ನಮಗೆ ಆಂತರಿಕ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಎಲ್ಲರೂ ಸಂತೋಷದಿಂದ ಇರಬೇಕು, ಅದು ಕೇವಲ ನನ್ನೊಬ್ಬನಿಗೆ ಮಾತ್ರ ಸೀಮಿತವಾಗಬಾರದು ಎಂದು ಜೈನ ಮುನಿಯಾಗಿ ದೀಕ್ಷೆ ಪಡೆದ ಮೋಕ್ಷೇಶ್ ತಿಳಿಸಿದ್ದಾರೆ.

ಅವರು ಯಾವಾಗಲೂ ಆಧ್ಯಾತ್ಮಿಕವಾಗಿ ಚಿಂತಿಸುತ್ತಿದ್ದರು. ಸುಮಾರು 8 ವರ್ಷಗಳ ಹಿಂದೆ ತಾನು ಜೈನ ಮುನಿಯಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಮೋಕ್ಷೇಶ್ ಚಿಕ್ಕಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ನಾವು ಆತನಿಗೆ ಮೊದಲು ವಿದ್ಯಾಭ್ಯಾಸ ಪೂರ್ಣಗೊಳಿಸುವಂತೆ ಮನವರಿಕೆ ಮಾಡಿದ್ದೇವು. ಕೊನೆಗೂ ಕಳೆದ ವರ್ಷ ಜೈನ ಮುನಿಯಾಗುವ ಕನಸನ್ನು ನನಸು ಮಾಡಲು ಒಮ್ಮತದ ಒಪ್ಪಿಗೆ ನೀಡಲಾಯಿತು ಎಂದು ವಿವರಿಸಿದ್ದಾರೆ.

ಅಲ್ಲದೇ ಕರ್ನಾಟಕ, ಗುಜರಾತ್, ಮಹಾರಾಷ್ಟ್ರದ 15 ಸ್ಥಳಗಳಲ್ಲಿ ಮೋಕ್ಷೇಶ್ ಅವರ ಶೋಭಾ ಯಾತ್ರೆ ನಡೆಸಲು ಅವರ ಕುಟುಂಬ ಸಿದ್ಧತೆ ನಡೆಸಿದೆ. ಇವರ ಕುಟುಂಬ ಮೂಲತಃ ಉತ್ತರ ಗುಜರಾತ್ ನ ಡೇಸಾದವರು. ಅಲ್ಲಿಂದ ವಲಸೆ ಬಂದು ಕಳೆದ 60 ವರ್ಷಗಳಿಂದ ಮುಂಬೈಯಲ್ಲಿ ನೆಲೆಸಿದ್ದಾರೆ. ಮೋಕ್ಷೇಶ್ ತಂದೆ ಸಂದೀಪ್ ಹಾಗೂ ಚಿಕ್ಕಪ್ಪ ಗಿರೀಶ್ ಶೇಟ್ ಜತೆಯಾಗಿ ಮುಂಬೈಯಲ್ಲಿ ವಾಸವಾಗಿದ್ದಾರೆ.

-ಉದಯವಾಣಿ

Comments are closed.