ರಾಷ್ಟ್ರೀಯ

ಬಾಪು ಕೊನೇ ಮಾತು ಹೇ ರಾಮ್‌ ಅಲ್ಲ ಎಂದು ಹೇಳೇ ಇಲ್ಲ: ಗಾಂಧೀಜಿ ಪಿಎ

Pinterest LinkedIn Tumblr


ಚೆನ್ನೆ : ರಾಷ್ಟ್ರ ಪಿತ ಮಹಾತ್ಮಾ ಗಾಂಧೀಜಿಯವರು 70 ವರ್ಷಗಳ ಹಿಂದೆ ಹತ್ಯೆಗೀಡಾದಾಗ “ಹೇ ರಾಮ್‌’ ಎಂದು ಹೇಳಿರಲಿಲ್ಲ ಎಂದು ದಶಕಗಳ ಹಿಂದೆ ಬಹಿರಂಗಪಡಿಸುವ ಮೂಲಕ ಇಡಿಯ ದೇಶಕ್ಕೇ ಆಘಾತ ಉಂಟುಮಾಡಿದ್ದ 96ರ ಹರೆಯದ, ಬಾಪು ಅವರ ಆಪ್ತ ಕಾರ್ಯದರ್ಶಿ ವೆಂಕಿಟ ಕಲ್ಯಾಣಂ ಅವರು “ನನ್ನ ಮಾತುಗಳನ್ನು ಅಂದು ತಪ್ಪಾಗಿ ಗ್ರಹಿಸಲಾಗಿತ್ತು’ಎಂದು ಹೇಳಿದ್ದಾರೆ.

“ಅಂದು ನಾನು ಹೇಳಿದ್ದನ್ನು ತಪ್ಪಾಗಿ ಗ್ರಹಿಸಲಾಗಿದೆ. ಬಾಪುಜೀ ಹೇ ರಾಮ್‌ ಎಂದು ಹೇಳಿರಲಿಲ್ಲ ಎಂದು ನಾನೆಂದೂ ನುಡಿದಿರಲಿಲ್ಲ; ಅವರು ಹೇ ರಾಮ್‌ ಎಂದು ಹೇಳಿದ್ದು ನನಗೆ ಕೇಳಿಸಲಿಲ್ಲ ಎಂದು ಹೇಳಿದ್ದೆ. ಮಹತ್ಮಾ ಗಾಂಧೀಜಿ ಅವರು ಸಾಯುವಾಗ ಹೇ ರಾಮ್‌ ಎಂದು ಹೇಳಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ’ ಎಂದು ವೆಂಕಿಟ ಕಲ್ಯಾಣಂ ಹೇಳಿದ್ದಾರೆ.

ಕಲ್ಯಾಣಂ ಅವರು 1943ರಿಂದ 1948ರ ವರೆಗೆ ಬಾಪು ಅವರ ಆಪ್ತ ಕಾರ್ಯದರ್ಶಿ ಯಾಗಿದ್ದರು. 1948ರ ಜನವರಿ 30ರಂದು ನಡೆದಿದ್ದ ಬಾಪೂಜೀ ಹತ್ಯೆಯ ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡಿರುವ ಕಲ್ಯಾಣಂ “ಗಾಂಧೀಜಿಯವರು ಗುಂಡೇಟಿನಿಂದ ನೆಲಕ್ಕೆ ಕುಸಿದು ಬಿದ್ದಾಗ ಅಲ್ಲಿ ವಿಪರೀತ ಆಕ್ರಂದನ, ಗದ್ದಲ, ಗೊಂದಲ ಉಂಟಾಯಿತು. ಆಗ ನನಗೆ ಏನೂ ಕೇಳಿಸಲಿಲ್ಲ; ಗಾಂಧೀಜಿ ಅವರು ಸಾಯುವಾಗ ಹೇ ರಾಮ್‌ ಎಂದು ಹೇಳಿದ್ದಿರಬಹುದು; ಆದರೆ ನನಗೆ ಅದು ಗೊತ್ತಿಲ್ಲ’ ಎಂದು ಕಲ್ಯಾಣಂ ಹೇಳಿದರು.

2006ರಲ್ಲಿ ಕಲ್ಯಾಣಂ ಅವರು ಪತ್ರಿಕಾ ಗೋಷ್ಠಿ ನಡೆಸಿ “ಗಾಂಧೀಜಿಯವರು ಗುಂಡೇಟಿನಿಂದ ನೆಲಕ್ಕುರುಳಿ ಬೀಳುವಾಗ ಹೇ ರಾಮ್‌ ಎಂದು ಹೇಳಿರಲಿಲ್ಲ’ ಎಂದು ಹೇಳಿದ್ದರು.

ಮಹಾತ್ಮಾ ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಅವರು ಕಲ್ಯಾಣಂ ಅವರ ಹೇಳಿಕೆಯಲ್ಲಿ ಹುರುಳಿಲ್ಲ ಎಂದು ಹೇಳಿದ್ದರು. ಗಾಂಧೀಜಿಯವರ ಹತ್ಯೆ ವಿಚಾರಣೆ ವೇಳೆ ಸಾಕ್ಷ್ಯ ನುಡಿದ್ದ ಸರ್ದಾರ್‌ ಗುರುಬಚನ್‌ ಸಿಂಗ್‌ ಅವರ ಮಾತುಗಳನ್ನು ಉದ್ಧರಿಸಿರುವ ತುಷಾರ್‌ ಗಾಂಧಿ “ಬಾಪು ಅವರು ಗುಂಡೇಟಿನಿಂದ ಕುಸಿದು ಬೀಳುವಾಗ ಕೈಗಳನ್ನು ಎದೆಗವುಚಿಕೊಂಡು “ಹೇ ರಾಮ್‌’ ಎಂದು ಹೇಳಿದ್ದರು’ ಎಂದು ಸ್ಪಷ್ಟಪಡಿಸಿದ್ದಾರೆ.

ಗೋಡ್ಸೆ ಗಾಂಧೀಜಿಯವರನ್ನು ಕೊಂದದ್ದು ಒಂದೇ ಸಲ; ಆದರೆ ರಾಜಕೀಯ ಪಕ್ಷಗಳು ಗಾಂಧೀಜಿಯವರ ಬೋಧನೆಗಳನ್ನು ಅನುಸರಿಸದೆ ನಿತ್ಯವೂ ಅವರನ್ನು ಕೊಲ್ಲುತ್ತಿದ್ದಾರೆ ಎಂದು ಕಲ್ಯಾಣಂ ಹೇಳಿದರು.

-ಉದಯವಾಣಿ

Comments are closed.