ರಾಷ್ಟ್ರೀಯ

ಬೃಹತ್‌ ನಕಲಿ ಪದವಿ ಪ್ರಮಾಣ ಪತ್ರ ಮಾರಾಟ ಜಾಲ ಬಯಲಿಗೆ: ಮೂವರ ಬಂಧನ

Pinterest LinkedIn Tumblr


ಹೊಸದಿಲ್ಲಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ದೇಶದ ಹಲವು ವಿವಿಗಳು, ಪರೀಕ್ಷಾ ಮಂಡಳಿಗಳ ಸುಮಾರು 50,000ಕ್ಕೂ ಹೆಚ್ಚು ನಕಲಿ ಪ್ರಮಾಣ ಪತ್ರಗಳನ್ನು ಮಾರಾಟ ಮಾಡಿದ ಬೃಹತ್‌ ಜಾಲವನ್ನು ದಿಲ್ಲಿ ಪೊಲೀಸರು ಬಯಲಿಗೆಳೆದಿದ್ದಾರೆ.

ಈ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಂಕಜ್‌ ಅರೋರಾ (35), ಪವಿತೇರ್‌ ಸಿಂಗ್‌ (40) ಮತ್ತು ಗೋಪಾಲ ಕೃಷ್ಣನ್‌ (40) ಎಂದು ಗುರುತಿಸಲಾಗಿದೆ.

ನಕಲಿ ವೆಬ್‌ಸೈಟ್‌ಗಳು, ಪತ್ರಿಕೆಗಳಲ್ಲಿ ಜಾಹೀರಾತುಗಳ ಮೂಲಕ ಜನರನ್ನು ಮರಳು ಮಾಡಿ, 50,000ಕ್ಕೂ ಹೆಚ್ಚು ನಕಲಿ ಪ್ರಮಾಣ ಪತ್ರಗಳನ್ನು ಮಾರಾಟ ಮಾಡಿರುವುದಾಗಿ ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಪ್ರಮಾಣಪತ್ರಗಳನ್ನು ಬಳಸಿ ಈಗಾಗಲೇ ಸಾವಿರಾರು ಮಂದಿ ವಿವಿಧ ಉದ್ಯೋಗಗಳಿಗೆ ಸೇರಿಕೊಂಡಿದ್ದಾರೆ.

ವ್ಯಕ್ತಿಯೊಬ್ಬ ಹರಿನಗರ್‌ ಪೊಲೀಸ್‌ ಠಾಣೆಗೆ ಆಗಮಿಸಿ, ತನಗೆ 10ನೇ ತರಗತಿಯ ನಕಲಿ ಪ್ರಮಾಣಪತ್ರ ಲಭಿಸಿರುವುದಾಗಿ ದೂರು ಸಲ್ಲಿಸಿದ ಬಳಿಕ ಈ ಹಗರಣ ಬೆಳಕಿಗೆ ಬಂತು.

ರಾಜಸ್ಥಾನದ ಪತ್ರಿಕೆಯೊಂದರಲ್ಲಿ, ನಿರ್ದಿಷ್ಟ ಮೊತ್ತ ಪಾವತಿಸಿ ಸರ್ಟಿಫಿಕೇಟ್‌ ಮತ್ತು ಅಂಕಪಟ್ಟಿಗಳನ್ನು ಪಡೆಯಿರಿ ಎಂದು ಜಾಹೀರಾತು ಪ್ರಕಟವಾಗಿತ್ತು. ಅದನ್ನು ನೋಡಿ ವಂಚಕರ ಜತೆ ಸಂಪರ್ಕ ಸಾಧಿಸಿ ನಕಲಿ ಪ್ರಮಾಣಪತ್ರಗಳನ್ನು ಪಡೆದಿದ್ದಾಗಿ ದೂರು ನೀಡಿದ ವ್ಯಕ್ತಿ ತಿಳಿಸಿದ್ದಾರೆ.

Comments are closed.