ರಾಷ್ಟ್ರೀಯ

ಗುಜರಾತ್‌ ಚುನಾವಣೆಯ : ಮಧ್ಯಾಹ್ನದವರೆಗೆ ಶೇ.35.52ರಷ್ಟು ಮತ ಚಲಾವಣೆ

Pinterest LinkedIn Tumblr

ಅಹಮದಾಬಾದ್‌: ಗುಜರಾತ್‌ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಮೊದಲ ಹಂತದಲ್ಲಿ ಮಧ್ಯಾಹ್ನ 2ರವರೆಗೆ ಶೇ. 35.52ರಷ್ಟು ಮತ ಚಲಾವಣೆಯಾಗಿವೆ ಎಂದು ವರದಿಯಾಗಿದೆ.

ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಶೇ.30.31ರಷ್ಟು ಮತ ಚಲಾವಣೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಸಂಜೆ 5ರವರೆಗೆ ಮತ ಚಲಾವಣೆ ನಡೆಯಲಿದೆ.

ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ತಾಪಿ ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೆ ಅತಿ ಹೆಚ್ಚು ಶೇ. 38.07ರಷ್ಟು ಮತ ಚಲಾವಣೆಯಾಗಿವೆ. ಬುಡಕಟ್ಟು ಸಮುದಾಯದವರೇ ಹೆಚ್ಚಿರುವ ದಕ್ಷಿಣ ಗುಜರಾತ್‌ನ ಮತ್ತೊಂದು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಶೇ. 25.67ರಷ್ಟು ಮತ ಚಲಾವಣೆಯಾಗಿವೆ.

ಸೌರಾಷ್ಟ್ರ ಹಾಗೂ ದಕ್ಷಿಣ ಗುಜರಾತ್‌ನ 89 ಕ್ಷೇತ್ರಗಳಲ್ಲಿ ಮತದಾರರು ಬೆಳಿಗ್ಗೆಯಿಂದ ಆಸಕ್ತಿ ವಹಿಸಿ ಮಗಗಟ್ಟೆಯತ್ತ ಬರುತ್ತಿದ್ದು, ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಮೊಲಬಾರಿಗೆ ಮತ ಚಲಾಯಿಸಿದ ಯುವ ಸಮೂಹದಲ್ಲಿ ಸಂತಸ, ಸಂಭ್ರಮ ಕಾಣುತ್ತಿತ್ತು. ಇನ್ನು ಶತಾಯುಷಿಗಳು ಮಕ್ಕಳು, ಮೊಮ್ಮಕ್ಕಳ ನೆರವು ಪಡೆದು ಮತ ಚಲಾಯಿಸಿದರು.

115 ವರ್ಷದ ಶತಾಯುಷಿ ಮಹಿಳೆ ಆಜಿಬೆನ್ ಚಂದ್ರವಾಡಿಯಾ ಅವರು ರಾಜ್‌ಕೋಟ್‌ನ ಉಪ್ಲೇಟ ನಗರದಲ್ಲಿ ಇಂದು ಮತ ಚಲಾವಣೆ ಮಾಡಿದ್ದಾರೆ.

24,689 ಮತಗಟ್ಟೆಗಲ್ಲಿ ಮತ ಚಲಾವಣೆ ನಡೆಯುತ್ತಿದ್ದು, 27,158 ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗಿದೆ.

ಡಿ.14ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿ.18ರಂದು ಫಲಿತಾಂಶ ಹೊರ ಬೀಳಲಿದೆ.

Comments are closed.