ರಾಷ್ಟ್ರೀಯ

ಮುಂದಿನ ವರ್ಷದಿಂದ ಹಜ್‌ ಯಾತ್ರೆಗೆ ಸಬ್ಸಿಡಿ ಇಲ್ಲ, ಮುಸ್ಲಿಮರ ಶಿಕ್ಷಣಕ್ಕೆ ಈ ಹಣ ಬಳಕೆ

Pinterest LinkedIn Tumblr


ಹೊಸದಿಲ್ಲಿ: 2018ರಿಂದ ಹಜ್‌ ಯಾತ್ರೆ ಕೈಗೊಳ್ಳುವ ಮುಸ್ಲಿಮರಿಗೆ ಸಬ್ಸಿಡಿ ಇಲ್ಲ. ಹಜ್‌ ಸಬ್ಸಿಡಿಯನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂಬ ವಿಶೇಷ ಸಮಿತಿಯ ವರದಿಯ ಅನುಷ್ಠಾನಕ್ಕೆ ಕೇಂದ್ರ ಸರಕಾರ ನಿರ್ಧರಿಸಿದ್ದು, ಈ ಹಣವನ್ನು ಮುಸ್ಲಿಮರ ಶಿಕ್ಷಣಕ್ಕೆ ಬಳಸಲು ಬಯಸಿದೆ.

ಹಜ್‌ ಸಬ್ಸಿಡಿಯನ್ನು 2022ರೊಳಗೆ ಹಂತ ಹಂತವಾಗಿ ರದ್ದುಪಡಿಸಬೇಕು ಎಂದು ಸುಪ್ರೀಂಕೋರ್ಟ್‌ 2012ರಲ್ಲಿ ನೀಡಿದ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 2017ರ ಜನವರಿಯಲ್ಲಿ ಸಮಿತಿಯೊಂದನ್ನು ರಚಿಸಿ ಶಿಫಾರಸು ಕೋರಿತ್ತು. ಸಮಿತಿಯು ತಕ್ಷಣದಿಂದಲೇ ಸಬ್ಸಿಡಿ ರದ್ದತಿಗೆ ಸೂಚಿಸಿದ್ದು, ಕೇಂದ್ರ ಅದನ್ನು ಪಾಲಿಸಲು ಮುಂದಾಗಿದೆ.

ಅಲ್ಪಸಂಖ್ಯಾತ ವ್ಯವಹಾರ, ವಿದೇಶಾಂಗ ವ್ಯವಹಾರ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳ ಹಿರಿಯ ಅಧಿಕಾರಿಗಳು, ಏರ್‌ ಇಂಡಿಯಾ ಮತ್ತು ಭಾರತೀಯ ಹಜ್‌ ಸಮಿತಿ ನಡುವೆ ಗುರುವಾರ ಹೊಸ ಹಜ್‌ ನೀತಿ ಬಗ್ಗೆ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಹಜ್‌ ಸಬ್ಸಿಡಿ ರದ್ದತಿ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ. ಕೇಂದ್ರದ ಈ ನಿಲುವಿಗೆ ಹಜ್‌ ಸಮಿತಿ ತೀವ್ರ ಆಕ್ಷೇವ ವ್ಯಕ್ತಪಡಿಸಿದೆ.

2012ಕ್ಕಿಂತ ಮೊದಲು ವರ್ಷಕ್ಕೆ 650 ಕೋಟಿ ರೂ. ಮೊತ್ತವನ್ನು ಹಜ್‌ ಸಬ್ಸಿಡಿಗೆ ವಿನಿಯೋಗಿಸಲಾಗುತ್ತಿತ್ತು. ನಿಧಾನಗತಿಯಲ್ಲಿ ಅದನ್ನು ಕಡಿಮೆ ಮಾಡಿದ್ದರೂ ಕಳೆದ ವರ್ಷ 450 ಕೋಟಿ ರೂ. ನೀಡಲಾಗಿದೆ.

———–

1.7 ಲಕ್ಷ ಯಾತ್ರಿಕರು

ಹಜ್‌ ಯಾತ್ರೆಗೆ ಹೋಗುವ ಭಾರತೀಯರ ಸಂಖ್ಯೆ

ಹಜ್‌ ಯಾತ್ರೆ ಖರ್ಚೆಷ್ಟು?

ಹಜ್‌ ಯಾತ್ರೆಗೆ 2 ಲಕ್ಷದಷ್ಟು ಖರ್ಚಾಗುತ್ತಿದ್ದು, ಖಾಸಗಿ ಸಂಸ್ಥೆಗಳ ಮೂಲಕ ಪ್ರಯಾಣಿಸಿದರೆ 4 ಲಕ್ಷಕ್ಕಿಂತಲೂ ಹೆಚ್ಚು ಖರ್ಚಾಗಲಿದೆ.

———–

ಸಣ್ಣ ಪಟ್ಟಣಗಳ ಯಾತ್ರಿಕರಿಗೆ ಕಷ್ಟ

ಹಜ್‌ ಯಾತ್ರಿಕರಿಗೆ ಸಬ್ಸಿಡಿ ನೀಡುವುದು ನಿರಂತರವಾಗಿ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದು ಅಲ್ಪಸಂಖ್ಯಾತರ ತುಷ್ಟೀಕರಣ ಮತ್ತು ಜಾತ್ಯತೀತ ತತ್ವಗಳಿಗೆ ವಿರೋಧ ಎನ್ನುವುದು ಆಪಾದನೆಯಾಗಿತ್ತು. ಜತೆಗೆ ಹಿಂದೂ ಯಾತ್ರಿಗಳಿಗೂ ಸಬ್ಸಿಡಿ ಕೊಡಿ ಎಂಬ ವಾದವೂ ಎದ್ದಿತ್ತು.

ಇದೀಗ ಸಬ್ಸಿಡಿ ರದ್ದತಿಯಿಂದ ದೊಡ್ಡ ಪಟ್ಟಣಗಳಿಗೆ ಯಾತ್ರೆಗೆ ಹೋಗುವ ಮುಸ್ಲಿಮರಿಗೆ ಯಾವುದೇ ತೊಂದರೆಯಾಗದು. ಆದರೆ, ಅಸ್ಸಾಂ, ಜಾರ್ಖಂಡ್‌ ಮತ್ತಿತರ ಸಣ್ಣ ರಾಜ್ಯಗಳ ಸಣ್ಣ ನಗರಗಳಿಂದ ತೆರಳುವ ಯಾತ್ರಿಕರ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Comments are closed.