ರಾಷ್ಟ್ರೀಯ

ನಿರೀಕ್ಷೆಗಳ ಮಹಾಪೂರದೊಂದಿಗೆ ಕೇಂದ್ರ ಬಜೆಟ್-2016ಕ್ಕೆ ಕ್ಷಣಗಣನೆ

Pinterest LinkedIn Tumblr

Jaitley

ನವದೆಹಲಿ: ಬಹು ನಿರೀಕ್ಷಿತ ಕೇಂದ್ರ ಬಜೆಟ್ 2016ಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಅನುಭವನ್ನು ಬಳಸಿಕೊಂಡು ಸೋಮವಾರ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ.

ನಿನ್ನೆ ನಡೆದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಪ್ರಸ್ತಾಪಿಸಿ ತಾವೂ ಕೂಡ ಬಜೆಟ್ ಗಾಗಿ ಕಾಯುತ್ತಿರುವುದಾಗಿ ಹೇಳುವ ಮೂಲಕ ಬಜೆಟ್ ಮೇಲಿನ ತಮ್ಮ ನಿರೀಕ್ಷೆಗಳನ್ನು ಹೊರಹಾಕಿದರು. ಪ್ರಧಾನಿ ನರೇಂದ್ರ ಮೋದಿ ಅವರಂತೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೂ ಇದು ಮಹತ್ವ ಮತ್ತು ಸವಾಲಿನ ಮು೦ಗಡಪತ್ರವಾಗಿದ್ದು, ಕಳೆದ ಸಲದ೦ತೆ ಆದಾಯ ತೆರಿಗೆಯಲ್ಲಿ ಸ್ವಲ್ಪ ವಿನಾಯಿತಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದ೦ತೆ ಜನಸಾಮಾನ್ಯರಿಂದ ಹಿಡಿದು ಉಧ್ಯಮಿಗಳವರೆಗಿನ ಎಲ್ಲ ವರ್ಗಗಳು ಜನರು ಕೂತೂಹಲದಿಂದ ಎದುರು ನೋಡುತ್ತಿದ್ದಾರೆ.

ಮೂರನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ವಿತ್ತ ಸಟಿವ ಅರುಣ್ ಜೇಟ್ಲಿ ಅವರ ಮುಂದೆ ಸಾಕಷ್ಟು ಸವಾಲುಗಳಿದ್ದು, ಉಳ್ಳವರ ಪಾಲಾಗುತ್ತಿರುವ ಸಬ್ಸಿಡಿಯನ್ನು ತಡೆಯುವ ನಿಟ್ಟಿನಲ್ಲಿ ಇಂದಿನ ಬಜೆಟ್ ನಲ್ಲಿ ಅರುಣ್ ಜೇಟ್ಲಿ ಅವರು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು ಬರಗಾಲ, ಬೆಳೆನಾಶ ಇತ್ಯಾದಿ ಸಮಸ್ಯೆಗಳು ರೈತ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಗ್ರಾಮೀಣ ಜನರ ಸಂಕಷ್ಟ ಮತ್ತು ಸಾಮಾಜಿಕ ಯೋಜನೆಗಳಿಗೆ ಹೆಚ್ಚು ಹಣ ವೆಚ್ಚ ಮಾಡುವ ಒತ್ತಡವು ಕೂಡ ಜೇಟ್ಲಿ ಅವರ ಮೇಲಿದೆ. ಮತ್ತೊಂದೆಡೆ ಇತ್ತೀಚೆಗಿನ ಆರ್ಥಿಕ ಸಮೀಕ್ಷೆ ಪ್ರಕಾರ ಭಾರತದಲ್ಲಿ ಆದಾಯ ತೆರಿಗೆ ಕಡಿಮೆ ಇದ್ದು, ಈ ಬಗ್ಗೆ ಅರುಣ್ ಜೇಟ್ಲಿ ಅವರು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇದಲ್ಲದೆ ಬ್ಯಾಂಕಿಂಗ್ ಕ್ಷೇತ್ರದ ಮೇಲೂ ಬಜೆಟ್ ನ ನೇರ ಪರಿಣಾಮ ಉಂಟಾಗಲಿದ್ದು, ಗೃಹಸಾಲ ಮತ್ತು ಕೃಷಿ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಕೃಷಿ ಮತ್ತು ಕೈಗಾರಿಕಾ ರಂಗದ ಮಧ್ಯೆ ಸಮತೋಲನದ ಸಾಧಿಸುವ ಸಾವಾಲಿದ್ದು, ವಿತ್ತೀಯ ಕೊರತೆ ಜತೆ ರಾಜಿ ಮಾಡಿಕೊಳ್ಳದೇ, ಸರ್ಕಾರಿ ಹೂಡಿಕೆ ಹೆಚ್ಚಳ ಮಾಡಬೇಕಿದೆ. ಬಂಡವಾಳ ಹೂಡಿಕೆ ಉತ್ತೇಜಿಸಲು ಸುಸ್ಥಿರ ತೆರಿಗೆ ವ್ಯವಸ್ಥೆ ಜಾರಿ, ಪೂರ್ವಾನ್ವಯ ತೆರಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಮತ್ತು ಕಾರ್ಪೊರೇಟ್‌ ತೆರಿಗೆ ಕಡಿತಗೊಳಿಸುವ ನಿರೀಕ್ಷೆ ಇದೆ.

ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ವಿತ್ತ ಸಚಿವ 2016-2017ನೇ ಸಾಲಿನ ಆಯವ್ಯಯಪಟ್ಟಿಯನ್ನು ಮಂಡನೆ ಮಾಡಲಿದ್ದಾರೆ.

Write A Comment