ನವದೆಹಲಿ: ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 1 ವರ್ಷ ಪೂರ್ಣಗೊಂಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂತಸದಲ್ಲಿದ್ದಾರೆ.
ತಮ್ಮ ಸರ್ಕಾರಕ್ಕೆ 1 ವರ್ಷದ ತುಂಬಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಕೇಜ್ರಿವಾಲ್ ಅವರು, ರಾಜಧಾನಿ ದೆಹಲಿ ಹಾಗೂ ಆಮ್ ಆದ್ಮಿ ಪಕ್ಷದ ನಡುವಿನ ಸಂಬಂಧ ಆಳವಾಗಿ ಬೆಳೆದಿದ್ದು, ಇದು ಎಂದಿಗೂ ಶಾಶ್ವತವಾಗಿರುತ್ತದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕಳೆದ ವರ್ಷ ಇದೇ ದಿನದಂದು ದೆಹಲಿ ಜನತೆ ಆಮ್ ಆದ್ಮಿ ಪಕ್ಷದ ಪ್ರೀತಿಯಲ್ಲಿ ಬಿದ್ದಿತ್ತು. ಇದೀಗ ಆ ಪ್ರೀತಿಗೆ 1 ವರ್ಷವಾಗಿದೆ. ನಮ್ಮ ನಡುವಿನ ಸಂಬಂಧ ಇದೇ ರೀತಿಯಾಗಿ ಶಾಶ್ವತವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇದರಂತೆ ಸರ್ಕಾರಕ್ಕೆ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಾರ್ವಜನಿಕವಾಗಿ ಕಾರ್ಯಕ್ರಮವೊಂದು ನಡೆಯಲಿದ್ದು, ತಮ್ಮ ಸರ್ಕಾರದ ಸಾಧನಾ ವರದಿಯನ್ನು ಕೇಜ್ರಿವಾಲ್ ಅವರು ಸಾರ್ವಜನಿಕರಿಗೆ ಸಲ್ಲಿಸಲಿದ್ದಾರೆ. ಅಲ್ಲದೆ, ಕೇಜ್ರಿವಾಲ್ ಅವರ ಸಂಪುಟದ ಸಚಿವರು ಜನರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದ ಕೇಜ್ರಿವಾಲ್ ಅವರು, ತಾನು ಹಾಗೂ ತನ್ನ ಸಂಪುಟದ ಸದಸ್ಯರು ದೂರವಾಣಿ ಮೂಲಕ ಸಾರ್ವಜನಿಕರ ಪ್ರಶ್ನಿಗಳಿಗೆ ಉತ್ತರಿಸಲಿದ್ದೇವೆ. ಜೊತೆಗೆ ಕಳೆದ 1 ವರ್ಷದಲ್ಲಿ ನಮ್ಮ ಸರ್ಕಾರದ ಸಾಧನೆಯ ವರದಿಯನ್ನು ಜನರ ಮುಂದಿಡಲಿದ್ದೇವೆ. ಈ ಬಗ್ಗೆ ಈಗಾಗಲೇ ತಮ್ಮ ಸಾಧನೆಗಳ ವರದಿಯನ್ನು ಕಚೇರಿಗೆ ಸಲ್ಲಿಸಬೇಕೆಂದು ದೆಹಲಿ ಸರ್ಕಾರದ ವಿವಿಧ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.