ಅಲ್ಸ್ಟರ್(ಐರ್ಲೆಂಡ್): ಮನೆಕೆಲಸದಿಂದ ಹಿಡಿದು ಶಸ್ತ್ರಚಿಕಿತ್ಸೆಯವರೆಗೆ ಸಕಲ ಕಾರ್ಯಗಳನ್ನು ನಿಭಾಯಿಸು ವಂಥ ರೋಬಾಟ್ಗಳನ್ನು ತಯಾರಿಸಿರುವ ಮಾನವ, ಮುಂದೊಂದು ದಿನ ಅವುಗಳೊಂದಿಗೆ ಅನುರಕ್ತನಾಗಿ ರೋಬಾಟ್ಗಳನ್ನೇ ವಿವಾಹವಾಗುವ ದಿನ ದೂರವಿಲ್ಲ! ಹೀಗೆಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಂಚಲನ ಸೃಷ್ಟಿಸಿದೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಂಭಾಷಣೆ ನಡೆಸುವುದೂ ಸೇರಿ ವಯಸ್ಕರಂತೆ ವರ್ತಿಸುವ ರೋಬಾಟ್ಗಳನ್ನು ಅಭಿವೃದ್ದಿಪಡಿಸಲಾಗು ತ್ತಿದೆ. ರೋಬಾಟ್ಗಳ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾವನಾತ್ಮಕವಾಗಿಯೂ ಅವುಗಳನ್ನು ಹಚ್ಚಿಕೊಳ್ಳುತ್ತಿದ್ದಾರೆ. ಇನ್ನೂ ನೈಜ್ಯವಾಗಿರುವ, ಸಜೀವ ಮಾದರಿ ರೋಬಾಟ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿರುವುದರಿಂದ ಮುಂದೊಂದು ದಿನ ಅವುಗಳನ್ನೇ ಜೀವನ ಸಂಗಾತಿಗಳಾಗಿ ಪಡೆಯಬೇಕೆಂದು ಜನತೆ ಕೋರ್ಟ್ಗಳಲ್ಲಿ ದಾವೆ ಹೂಡುವ ದಿನ ಬರಬಹುದು ಎಂದು ಪ್ರಖ್ಯಾತ ಕಂಪ್ಯೂಟರ್ ತಜ್ಞ, ಐರ್ಲೆಂಡ್ನ ಅಲ್ಸ್ಟರ್ ವಿವಿ ಸಂಶೋಧಕ ಡಾ. ಕೆವಿನ್ ಕುರ್ರನ್ ಅಭಿಪ್ರಾಯಪಟ್ಟಿದ್ದಾರೆ.
ಸಾಧ್ಯತೆ ಇದೆಯೇ?: ಸೂಕ್ತ ಬಾಳಸಂಗಾತಿ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಬಹಳಷ್ಟು ಜನರಲ್ಲಿದೆ. ಮಾನವ ಸಂಬಂಧಗಳಲ್ಲಿ ಅಸಹನೆ ಹೆಚ್ಚಾಗುತ್ತಿದೆ. ಇವುಗಳ ನಡುವೆಯೇ, ವೃದ್ಧರೊಂದಿಗೆ ಸಮಯ ಕಳೆಯುವ, ಮಕ್ಕಳನ್ನು ಶಾಲೆಗೆ ಬಿಟ್ಟು ಬರುವ ರೋಬಾಟ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮಾನವ, ಚಿರತೆ, ನಾಯಿ ಮತ್ತಿತರ ಪ್ರಾಣಿಗಳ ರೀತಿ ವರ್ತಿಸುವ ರೋಬಾಟ್ಗಳನ್ನು ಗೂಗಲ್ ಸಂಸ್ಥೆ ಈಗಾಗಲೇ ಅಭಿವೃದ್ಧಿಪಡಿಸಿದೆ. ಈ ಮಾದರಿಯ ರೋಬಾಟ್ಗಳ ದೇಹದ ಅಂಗಗಳನ್ನು ಹಾಗೂ ಮಾನವನ ಅಂಗಗಳನ್ನು ಕತ್ತರಿಸುವಂಥ ದೃಶ್ಯಾವಳಿಗಳನ್ನು ಹಲವರಿಗೆ ತೋರಿಸಿದಾಗ, ಮಾನವನಿಗೆ ಗಾಯವಾದಾಗ ದುಃಖಿಸುವಂತೆಯೇ ರೋಬಾಟ್ಗಳಿಗೆ ಅಪಾಯ ಉಂಟಾದಾಗ ಭಾವನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಯಸ್ಕ ವೆಬ್ಸೈಟ್ಗಳಲ್ಲಿ ‘ರೋಬಾಟ್ ಸೆಕ್ಸ್’ಗೆ ಆಸಕ್ತಿ ತೋರಿಸುವವರ ಸಂಖ್ಯೆ ಕೆಲವರ್ಷಗಳಲ್ಲಿ ಭಾರಿ ಏರಿಕೆ ಕಂಡಿದೆ. ಹಾಗಾಗಿ ರೋಬಾಟ್ ತಂತ್ರಜ್ಞಾನ ಇನ್ನಷ್ಟು ಬೆಳವಣಿಗೆಯಾಗಿ ಮಾನವ-ರೋಬಾಟ್ ನಡುವೆ ಸಾಮ್ಯತೆ ಹೆಚ್ಚಿದಾಗ ಅವುಗಳೇ ಉತ್ತಮ ಸಂಗಾತಿಯಾಗಬಲ್ಲವು ಎಂಬ ಮನೋಭಾವ ಬೆಳೆಯುವ ಸಾಧ್ಯತೆ ಇದೆ ಎಂಬುದು ವಿಜ್ಞಾನಿಗಳ ತರ್ಕ.