ಪಾಟ್ನಾ: ಅಪ್ರಾಪ್ತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಆರೋಪ ಹಿನ್ನೆಲೆಯಲ್ಲಿ ಆರ್ ಜೆಡಿ ಶಾಸಕ ರಾಜ್ ಬಲ್ಲಭ್ ಯಾದವ್ ವಿರುದ್ಧ ಅಲ್ಲಿನ ಸರ್ಕಾರ ಬಂಧನಾದೇಶ ಜಾರಿಗೊಳಿಸಿದೆ ಎಂದು ಹೇಳಲಾಗುತ್ತಿದೆ.
ನವಾಡ ಮೂಲಕ 15 ವರ್ಷದ ಬಾಲಕಿಯೊಬ್ಬಳು ಫೆ.6ರಂದು ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸಿ ದೂರೊಂದನ್ನು ದಾಖಲಿಸಿದ್ದಳು. ಇದರಂತೆ ತನಿಖೆ ನಡೆಸಿದ್ದ ಪೊಲೀಸರು ಬಾಲಕಿ ನೀಡಿದ ಮಾಹಿತಿ ಆಧಾರದ ಮೇಲೆ ಶಾಸಕ ರಾಜ್ ಬಲ್ಲಭ್ ಯಾದವ್ ಅವರ ಫೋಟೋವನ್ನು ಬಾಲಕಿಗೆ ತೋರಿಸಿದ್ದರು. ಈ ವೇಳೆ ಬಾಲಕಿ ಶಾಸಕನೇ ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಿದ್ದಳು.
ಇದರಂತೆ ಇದೀಗ ಐಪಿಸಿ ಸೆಕ್ಷನ್ 164ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಶಾಸಕರ ವಿರುದ್ಧ ಬಂಧನಾದೇಶವನ್ನು ಹೊರಡಿಸಲಾಗಿದೆ ಎಂದು ಡಿಐಜಿ ಮಾಹಿತಿ ನೀಡಿದ್ದಾರೆ.
ರಾಜ್ ಬಲ್ಲಭ್ ಯಾದವ್ ಅವರು ನವಾಡ ಕ್ಷೇತ್ರದಿಂದ ಆರ್ ಜೆಡಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಆರ್ ಜೆಡಿ ಸರ್ಕಾರದಲ್ಲಿ ಸಚಿವರೂ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಈ ಬಗ್ಗೆ ಈವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.