ಮಳವಳ್ಳಿ,ಫೆ.14-ಬೆಳ್ಳಂಬೆಳಿಗ್ಗೆ ಗ್ರಾಮಕ್ಕೆ ನುಗ್ಗಿದ ಚಿರತೆಯೊಂದು ಮೂರು ಮೇಕೆಗಳನ್ನು ಕೊಂದು ಪರಾರಿಯಾಗಿರುವ ಘಟನೆ ಹಲಗೂರಿನಲ್ಲಿ ಜರುಗಿದೆ. ಗ್ರಾಮದ ಹೊರವಲಯದ ವಾಸಿ ಹೊನ್ನಮ್ಮ ಚಿಕ್ಕಮುತ್ತಯ್ಯ ಅವರಿಗೆ ಸೇರಿದ ಮೂರು ಮೇಕೆಗಳು ಚಿರತೆಗೆ ಬಲಿಯಾಗಿವೆ. ಎಂದಿನಂತೆ ಹೊನ್ನಮ್ಮ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಗಳನ್ನು ಬಿಚ್ಚಿ ಮನೆಯ ಮುಂಭಾಗದ ಮರಕ್ಕೆ ಕಟ್ಟಿಹಾಕಿ ಕೊಟ್ಟಿಗೆಯನ್ನು ಸ್ವಚ್ಛ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾಗ ಹೊರಗೆ ಮೇಕೆಗಳು ಕಿರುಚಿಕೊಂಡ ಶಬ್ದ ಕೇಳಿಸಿದೆ.
ತಕ್ಷಣ ಹೊರಗೋಡಿ ಬಂದು ನೋಡುವಷ್ಟರಲ್ಲಿ ಎರಡು ಮೇಕೆಗಳ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿದ್ದ ಚಿರತೆ ಮೂರನೇ ಮೇಕೆಯನ್ನು ಸಹ ಕಚ್ಚಿದೆ. ಚಿರತೆಯನ್ನು ಕಂಡ ಹೊನ್ನಮ್ಮ ಜೋರಾಗಿ ಕೂಗಿಕೊಂಡ ಶಬ್ಧ ಕೇಳಿ ಚಿರತೆ ಪರಾರಿಯಾಗಿದೆ. ಮೇಕೆಗಳೇ ಆಧಾರವಾಗಿದ್ದ ಹೊನ್ನಮ್ಮನಿಗೆ ಈಗ ದಿಕ್ಕೇ ತೋಚದಂತಾಗಿದೆ.
ಚಿರತೆ ಬಂದ ಸುದ್ದಿ ಹರಡಿ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ದೂರವಾಣಿ ಮೂಲಕ ವಿಷಯ ತಿಳಿಸಿದ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿ ವಿನಯ್ ಹಾಗೂ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.