ಮೈಸೂರು, ಫೆ.14-ರಥಸಪ್ತಮಿ ಪ್ರಯುಕ್ತ ನೂರಾರು ಭಕ್ತರ ಸಮ್ಮುಖದಲ್ಲಿ ಅರಮನೆ ಆವರಣದಲ್ಲಿರುವ ದೇವಾಲಯಗಳ ವಿವಿಧ ದೇವರ ಉತ್ಸವ ನಡೆಸಲಾಯಿತು. ಗಣಪತಿ, ವಿಷ್ಣು, ಸೂರ್ಯನಾರಾಯಣ, ಗಾಯತ್ರಿ, ತ್ರಿನೇಶ್ವರ ಸೇರಿದಂತೆ ವಿವಿಧ ದೇವರ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಅರಮನೆ ಮುಂಭಾಗ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು.
ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ದೇವರ ಉತ್ಸವಕ್ಕಾಗಿ ಭಕ್ತರಿಗೆ ಅರಮನೆ ಆವರಣಕ್ಕೆ ನಾಲ್ಕು ದ್ವಾರಗಳಿಂದ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿತ್ತು.
ನಗರ ಸೇರಿದಂತೆ ವಿವಿಧೆಡೆಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ರಥಸಪ್ತಮಿ ಆಚರಣೆ ಬಗ್ಗೆ ಇಂದು ಮಾಡಬೇಕೋ ಅಥವಾ ನಾಳೆ ಮಾಡಬೇಕೋ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿತು. ಕೆಲವು ಕ್ಯಾಲೆಂಡರ್‌ನಲ್ಲಿ ಸೋಮವಾರ ಅಂತಿದ್ದರೆ, ಕೆಲವು ಕ್ಯಾಲೆಂಡರ್‌ನಲ್ಲಿ ಭಾನುವಾರ ಎಂದು ನಮೂದಾಗಿದೆ. ಹಾಗಾಗಿ ಕೆಲವರು ಇಂದೇ ರಥಸಪ್ತಮಿ ಮಾಡಿದರೆ ಉಳಿದವರು ನಾಳೆ ಮಾಡಲಿದ್ದಾರೆ.