ಹೈದರಾಬಾದ್ (ಪಿಟಿಐ): ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಸಂಬಂಧ ಕಾಂಗ್ರೆಸ್ ವಿರುದ್ಧ ಬಿಜೆಪಿ ಭಾನುವಾರ ತೀವ್ರ ವಾಗ್ದಾಳಿ ನಡೆಸಿದೆ.
ಪ್ರಕರಣದಲ್ಲಿ ಕಾಂಗ್ರೆಸ್ ‘ತಮಾಷೆ’ಯ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಆರೋಪಿಸಿದ್ದಾರೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಅಂಗವಾಗಿ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದರು.
‘ಕಾಂಗ್ರೆಸ್ಸಿನ ದೀರ್ಘಾವಧಿಯ ದುರಾಡಳಿತ, ಒಡೆದು ಆಳುವ ನೀತಿ ಹಾಗೂ ಅದರ ಮತಬ್ಯಾಂಕ್ ಕಾರ್ಯಸೂಚಿಯಿಂದಾಗಿ ಸಾಮಾಜಿಕ ಸಾಮರಸ್ಯ ಹದಗೆಟ್ಟು ಹೋಗಿದೆ. ಅದಕ್ಕಾಗಿಯೇ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಂಥ ಘಟನೆಗಳು ನಡೆದವು’ ಎಂದು ಆರೋಪಿಸಿದರು.
‘ರೋಹಿತ್ ಆತ್ಮಹತ್ಯೆ ಮೊದಲ ಪ್ರಕರಣವಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಂಥ ಹತ್ತಾರು ಪ್ರಕರಣಗಳು ನಡೆದಿವೆ. ಆಗ ಸೋನಿಯಾ, ರಾಹುಲ್ ಹಾಗೂ ದಿಗ್ವಿಜಯ್ ಸಿಂಗ್ ಸೇರಿದಂತೆ ಯಾರಿಗೂ ಸಮಯ ಇರಲಿಲ್ಲ. ಯಾರೂ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದತ್ತ ಸುಳಿಯಲಿಲ್ಲ. ಯಾರೂ ಸಾಂತ್ವನ ಹೇಳಲಿಲ್ಲ, ಸಂತಾಪ ಸೂಚಿಸಲಿಲ್ಲ. ಇದೀಗ ದಿಢೀರ್ ಆಗಿ ಬಂದು ಅವರು ನಾಟಕ ಮಾಡುತ್ತಿದ್ದಾರೆ’ ಎಂದು ಕಿಡಿ ಕಾರಿದರು.
‘ನೀವು ಅಧಿಕಾರದಲ್ಲಿದ್ದಾಗ ತೆಲಂಗಾಣದ ವಾರಾಂಗಲ್‌ದಲ್ಲಿ ದಲಿತ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿತ್ತು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 10 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ನೀವು ಅತ್ತ ಸುಳಿಯಲಿಲ್ಲ. ಸ್ವಾಂತನ ಹೇಳಿ, ಸಂತಾಪ ಸೂಚಿಸಲಿಲ್ಲ. ಆಗ ಮೌನ ಧರಿಸಿದ್ದವು ಇದೀಗ ಉಗ್ರವಾಗಿದ್ದೀರಿ. ಕಾಂಗ್ರೆಸ್ ಪಕ್ಷವು ತಮಾಷೆಯ ರಾಜಕಾರಣ ಮಾಡುತ್ತಿದೆ’ ಎಂದು ಅವರು ಆಪಾದಿಸಿದರು.
‘ಆಗೇಕೆ ನಿಮಗೆ ನೆನಪಾಗಲಿಲ್ಲ. ಇದೀಗ ಅಧಿಕಾರ ಕಳೆದುಕೊಂಡು ಖಾಲಿಯಾಗಿದ್ದೀರಿ. ಅದಕ್ಕಾಗಿ ವಿವಿಯಲ್ಲಿ ಧರಣಿ ಮಾಡುತ್ತಿದ್ದೀರಿ. ಇದೇನೂ ತಮಾಷೆಯೇ?’ ಎಂದು ಪ್ರಶ್ನಿಸಿದರು.
ಇದೇ ವೇಳೆ, ಶೈಕ್ಷಣಿಕ ಸಂಸ್ಥೆಗಳನ್ನು ರಾಜಕಾರಣದಿಂದ ಹೊರಗೆ ಇಡುವಂತೆ ಅವರು ಮನವಿ ಮಾಡಿದರು.
‘ಕೀಳುಮಟ್ಟದ ರಾಜಕಾರಣ ಮಾಡದಿರಿ. ವಿಶ್ವವಿದ್ಯಾಲಯದ ಕ್ಯಾಂಪಸ್ ರಾಜಕಾರಣ ಮುಕ್ತವಾಗಿರಲು ಬಿಡಿ. ಕ್ಯಾಂಪಸ್‌ನಲ್ಲಿ ಶಿಕ್ಷಣಕ್ಕೆ ಒತ್ತು ದೊರೆಯಬೇಕು. ಆ ಬದಲಾವಣೆಗಾಗಿ ನಾವು ಶ್ರಮಿಸುತ್ತಿದ್ದೇವೆ. ಆದರೆ, ಇಂಥ ಕೆಲಸಗಳ ಮೂಲಕ ಕಾಂಗ್ರೆಸ್‌ನವರು ರೋಹಿತ್ ಅವರ ಆತ್ಮಕ್ಕೆ ಅನ್ಯಾಯ ಮಾಡುತ್ತಿದ್ದಾರೆ’ ಎಂದೂ ನಾಯ್ಡು ಅವರು ದೂಷಿಸಿದರು.