ನವದೆಹಲಿ (ಪಿಟಿಐ): ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ನಕ್ಸಲರ ಅಟ್ಟಹಾಸವೇನೂ ನಿಂತಿಲ್ಲ. ಆದರೆ, ಕಳೆದ ಆರು ವರ್ಷಗಳಿಗೆ ಹೋಲಿಸಿದರೆ, 2015ರಲ್ಲಿ ನಕ್ಸಲರ ಉಪಟಳ ಗಣನೀಯವಾಗಿ ತಗ್ಗಿದೆ. ಕೇಂದ್ರ ಗೃಹ ಸಚಿವಾಲಯ ನೀಡಿರುವ ಅಂಕಿ–ಅಂಶಗಳು ಇದನ್ನು ದೃಢಪಡಿಸುತ್ತವೆ.
ನಕ್ಸಲ್ ಪೀಡಿತ ಹತ್ತು ರಾಜ್ಯಗಳಾದ ಆಂಧ್ರ ಪ್ರದೇಶ, ಬಿಹಾರ್, ಛತ್ತೀಸ್‌ಗಡ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶಗಳಲ್ಲಿ ಕಳೆದ ವರ್ಷ ನಕ್ಸಲ್ ಹಿಂಸಾಚಾರ ಸಂಬಂಧಿತ ಒಟ್ಟು 1,088 ಪ್ರಕರಣಗಳು ವರದಿಯಾಗಿವೆ. ಈ ಘಟನೆಗಳಲ್ಲಿ 226 ಜನರು ಮೃತಪಟ್ಟಿದ್ದಾರೆ.
2010ರಲ್ಲಿ ವರದಿಯಾದ ಒಟ್ಟು 2,213 ಪ್ರಕರಣಗಳಲ್ಲಿ 1,005 ಜನರು ಜೀವ ಕಳೆದುಕೊಂಡಿದ್ದರು. 2011ರಲ್ಲಿ 1,760 ಘಟನೆಗಳಲ್ಲಿ 611 ಜನರು ಪ್ರಾಣ ತೆತ್ತಿದ್ದರು. 2014ರಲ್ಲಿ ಇಂಥ ಪ್ರಕರಣ ಸಂಖ್ಯೆ 1,091ಕ್ಕೆ ತಗ್ಗಿತ್ತು. ಈ ಘಟನೆಗಳಲ್ಲಿ 310 ಜನರು ಮೃತಪಟ್ಟಿದ್ದರು.
2015ರಲ್ಲಿ ಮೃತಪಟ್ಟ 226 ಮೃತರಲ್ಲಿ 168 ನಾಗರಿಕರು ಹಾಗೂ 58 ಜನರು ಭದ್ರತಾ ಸಿಬ್ಬಂದಿ. ಈ ಘಟನೆಗಳಲ್ಲಿ 89 ನಕ್ಸಲರು ಕೂಡ ಬಲಿಯಾಗಿದ್ದರು. ಕಳೆದ ವರ್ಷ ಒಟ್ಟು 1,668 ನಕ್ಸಲರನ್ನು ಬಂಧಿಸಲಾಗಿತ್ತು. 570 ನಕ್ಸಲ್ ಕಾರ್ಯಕರ್ತರು ಶರಣಾಗಿದ್ದರು.
2014ರಲ್ಲಿ ಸತ್ತ 310 ಜನರ ಪೈಕಿ 222 ನಾಗರಿಕರು ಹಾಗೂ 88 ಭದ್ರತಾ ಸಿಬ್ಬಂದಿ. ಒಟ್ಟು 63 ನಕ್ಸಲರು ಬಲಿಯಾಗಿದ್ದರು. 1,696 ನಕ್ಸಲರನ್ನು ಬಂಧಿಸಲಾಗಿತ್ತು. 676 ನಕ್ಸಲರು ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬಂದಿದ್ದರು.
2015ರಲ್ಲಿ ಒಟ್ಟು 723 ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. 2014ರಲ್ಲಿ 548 ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು.
ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಕೇಂದ್ರ ಸರ್ಕಾರವು ಭದ್ರತೆಗಾಗಿ ಸುಮಾರು ಅರೆ ಸೇನಾಪಡೆಯ ಒಂದು ಲಕ್ಷ ಸಿಬ್ಬಂದಿ ನಿಯೋಜಿಸಿದೆ.