ನವದೆಹಲಿ,ಜ.31-ನಾಡಿಗೆ ಅನ್ನ ನೀಡುವ ಅನ್ನದಾತನ ಬೆನ್ನಿಗೆ ನಮ್ಮ ಸರ್ಕಾರ ಸದಾ ಬೆಂಗಾವಲಾಗಿ ನಿಂತಿದೆ. ದೇಶದ ರೈತರ ಜೀವನ ಶೈಲಿಯನ್ನು ಮತ್ತಷ್ಟು ಉತ್ತಮಗೊಳಿಸಬೇಕೆಂಬುದೇ ನಮ್ಮ ಗುರಿ. ಈ ನೀಟ್ಟಿನಲ್ಲಿ ಪ್ರತಿಯೊಬ್ಬ ರೈತನಿಗೆ ಬೆಳೆ ವಿಮೆ ಮಾಡಿಸಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ರೇಡಿಯೋ ಮೂಲಕ ಸಾರ್ವಜನಿಕರನ್ನು ತಲುಪುವ ಮನ್ ಕಿ ಬಾತ್ (ಮನದ ಮಾತು) ಎಂಬ ಜನಪ್ರಿಯ ಕಾರ್ಯಕ್ರಮ ಆರಂಭಿಸಿದ ನಂತರ ಶತತ 16ನೆ ಬಾರಿಗೆ ಅವರು ಇಂದು ಆಕಾಶವಾಣಿಯಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಭಾರತದಲ್ಲಿ ರೈತರು ಅನೇಕ ಸಂಕಷ್ಟಗಳಿಗೆ ಸಿಲುಕಿದ್ದು, ಅವರನ್ನು ಈ ಸಂಕಷ್ಟದಿಂದ ಮುಕ್ತಗೊಳಿಸುವುದೇ ಸರ್ಕಾರದ ಪ್ರಮುಖ ಗುರಿಯಾಗಿದೆ.
ಮತ್ತು ರೈತರ ಜೀವನ ಶೈಲಿಯನ್ನು ಮೇಲ್ಮಟ್ಟಕ್ಕೇರಿಸುವುದು ಸರ್ಕಾದ ಆದ್ಯ ಕರ್ತವ್ಯ ಎಂದು ಅವರು ತಿಳಿಸಿದರು.
ರೈತರ ಅಭ್ಯದಯವೇ ರಾಷ್ಟ್ರದ ಅಭ್ಯದಯ. ರೈತನ ಬದುಕು ಹಸನಾಗದೆ ಈ ದೇಶದ ಅಭಿವೃದ್ಧಿ ಅಸಾಧ್ಯ. ಹಾಗಾಗಿಯೇ ನಮ್ಮ ಸರ್ಕಾರ ರೈತರ ಅಭ್ಯದಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಅವರು ಹೇಳಿದರು.
ತಾವು ಮಾತು ಆರಂಭಿಸುವ ಮೊದಲು ದೇಶದ ಹುತಾತ್ಮರಿಗೆ ನಮನ ಸಲ್ಲಿಸಿದ ಮೋದಿ, ಮಹಾತ್ಮ ಗಾಂಧಿ ಅವರ ಹತ್ಯೆಯ ದಿನವಾದ ಜನವರಿ 30ರಂದು ಪ್ರತಿ ವರ್ಷ ನಾವು ಹುತಾತ್ಮ ದಿನ ಆಚರಿಸುತ್ತೇವೆ. ಅಂದು ಈ ದೇಶಕ್ಕಾಗಿ ಬಲಿ ದಾನ ಮಾಡಿದ ಯೋಧರನ್ನು ಸ್ಮರಿಸಿ ಅವರಿಗೆ ಗೌರವ ನಮನ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ತಿಳಿಸಿದರು. ಖಾದಿಗೆ ಆದ್ಯತೆ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ಖಾದಿಗೆ ಒತ್ತು ನೀಡಿದ್ದರು. ಖಾದಿ ಬಟ್ಟೆ ತಯಾರಿಕೆ ಮತ್ತು ಖಾದಿ ಉಡುಪು ಧರಿಸುವುದರಿಂದ ದೇಶದಲ್ಲಿ ನಿರುದ್ಯೋಗ ನಿವಾರಣೆಯಾಗಲಿದೆ ಎಂದು ಗಾಂಧೀಜಿ ನಂಬಿದ್ದರು. ಅದನ್ನೇ ಅವರು ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಖಾದಿ ಉದ್ಯಮ ಸಾಕಷ್ಟು ಬೆಳೆದಿದೆ ಎಂದು ಮೋದಿ ಸ್ಮರಿಸಿದರು.
ಅಂದಿನಿಂದಲೂ ಖಾದಿ ತನ್ನ ಸ್ಥಾನವನ್ನು ಉಳಿಸಿಕೊಂಡೇ ಬಂದಿದೆ. ದೇಶದಲ್ಲಿ ಖಾದಿ ಉದ್ಯಮ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿದೆ. ಖಾದಿ ದೇಶಾದ್ಯಂತ ಜನಪ್ರಿಯವಾಗಿದೆ. ಇದನ್ನು ಮತ್ತಷ್ಟು ಜನಪ್ರಿಯಗೊಳಿಸಿ ಹೆಚ್ಚಿನ ರೀತಿಯಲ್ಲಿ ಉದ್ಯಮ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲೆಡೆ ಖಾದಿ ಬಟ್ಟೆಗೆ ಸಾಕಷ್ಟು ಬೇಡಿಕೆ ಇದೆ. ಈ ಬೇಡಿಕೆ ಪೂರೈಸಲು ಜನರ ಅಗತ್ಯವಿದೆ. ಆಗಾಗಿ ಉದ್ಯೋಗ ಅವಕಾಶಗಳ ಸೃಷ್ಟಿಯಲ್ಲಿ ಖಾದಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೋದಿ ಹೇಳಿದರು. ಶಹಭಾಸ್‌ಗಿರಿ: ತಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಬೇಟಿ ಬಚಾವೋ, ಬೆಟಿ ಪಢಾವೋ ದೇಶಾದ್ಯಂತ ಜನ ಮನ ತಲುಪಿದ್ದು, ಈ ಬಾರಿ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ವಿದ್ಯಾವಂತ ಯುವತಿಯರನ್ನು ಆಹ್ವಾನಿಸಿದ್ದ ಹರಿಯಾಣ ಮತ್ತು ಗುಜರಾತ್ ಸರ್ಕಾರಗಳ ಕ್ರಮ ಪ್ರಶಂಸನೀಯ ಎಂದು ಮೋದಿ ಬೆನ್ನು ತಟ್ಟಿದರು.
ಹರಿಯಾಣ ಮತ್ತು ಗುಜರಾತ್ ಸರ್ಕಾರಗಳು ಅನುಸರಿಸಿದ ಈ ಕ್ರಮ ಇತರ ರಾಜ್ಯಗಳಿಗೆ ಮಾದರಿಯಾಗಿವೆ. ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯ ನೀಡುವ ಇಂಥಹ ಕೆಲಸಗಳು ಎಲ್ಲೆಡೆ ಆಗಬೇಕಿದೆ. ಇದರಿಂದ ಮಹಿಳೆಯರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಉನ್ನತ ಪದವಿ ಪಡೆದ ಯುವತಿಯರಿಂದ ತ್ರಿವರ್ಣ ಧ್ವಜಾರೋಹಣ ನಡೆಸಿ ಹರಿಯಾಣ ಮತ್ತು ಗುಜರಾತ್ ಸರ್ಕಾರಗಳು ಇಡೀ ವಿಶ್ವಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿವೆ. ಇದನ್ನು ಎಲ್ಲರೂ ಅನುಸರಿಸಬೇಕು ಎಂದು ಅವರು ಪ್ರತಿಪಾದಿಸಿದರು. ಸ್ವಚ್ಛ ಭಾರತ: ತಾವು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಿ ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಎಲ್ಲರನ್ನೂ ಅಭಿನಂದಿಸಿದ ಪ್ರಧಾನಿ ಮೋದಿ, ಸ್ವಚ್ಛ ಭಾರತ ಅಭಿಯಾನಕ್ಕೆ ಭಾರತೀಯರೇ ರಾಯಭಾರಿಗಳು ಎಂದು ಹೇಳಿದರು.