ಹೊಸದಿಲ್ಲಿ : ಶೀಘ್ರವೇ ಸಹಿ ಬೀಳುವ ನಿರೀಕ್ಷೆ ಇರುವ ಕೇಂದ್ರ ಸರಕಾರ ಮತ್ತು ನ್ಯಾಶನಲಿಸ್ಟ್ ಸೋಶಲಿಸ್ಟ್ ಕೌನ್ಸಿಲ್ ಆಫ್ ನಾಗಾಲಿಮ್ (ಇಸಾಕ್ – ಮೂಯಿವಾಹ್) ನಡುವಿನ ಅಂತಿಮ ಒಪ್ಪಂದದ ಪ್ರಕಾರ ನ್ಯಾಗಾಲ್ಯಾಂಡ್‌ಗೆ ಪ್ರತ್ಯೇಕ ಅಧಿಕೃತ ಧ್ವಜ ದೊರಕಲಿದೆ ಎಂದು ಮೂಲಗಳು ತಿಳಿಸಿವೆ.
ಈಶಾನ್ಯ ಭಾರತದ ನಾಗಾಲ್ಯಾಂಡ್ ರಾಜ್ಯ ತನ್ನದೇ ಆದ ಧ್ವಜವನ್ನು ಹೊಂದುವ ವಿಷಯ ಈಗ ಬಹುತೇಕ ನಿರ್ಧರಿತವಾಗಿದೆ ಎಂದು ಪ್ರಕೃತ ನಡೆಯುತ್ತಿರುವ ಮಾತುಕತೆ ಕುರಿತಾದ ತಾಜಾ ವಿದ್ಯಮಾನಗಳಿಗೆ ನಿಕಟವಿರುವ ಮೂಲಗಳು ಹೇಳಿವೆ.
ಎನ್‌ಸಿಸಿಎನ್-ಐಎಂ ಇದರ 33 ಬೇಡಿಕೆಗಳಲ್ಲಿ ನಾಗಾಲ್ಯಾಂಡ್‌ಗೆ ಪ್ರತ್ಯೇಕ ಧ್ವಜ ನೀಡಬೇಕೆಂಬ ಬೇಡಿಕೆಯೂ ಒಂದಾಗಿದೆ. 1997ರಲ್ಲಿ ಅಂತಿಮಗೊಳಿಸಲಾದ ಸಂಘರ್ಷ ನಿಲುಗಡೆಯ ಬಳಿಕ ಕೇಂದ್ರ ಸರಕಾರದೊಂದಿಗೆ ಎನ್‌ಸಿಸಿಎನ್-ಐಎಂ ಮಾತುಕತೆಯಲ್ಲಿ ನಿರತವಾಗಿದೆ. ಪ್ರತ್ಯೇಕ ಧ್ವಜದಂತೆ ನಾಗಾಲ್ಯಾಂಡಿಗೆ ಪ್ರತ್ಯೇಕ ಕರೆನ್ಸಿಯೂ ಇರಬೇಕೆಂಬ ಬೇಡಿಕೆಯನ್ನು ಕೇಂದ್ರವು ತಿರಸ್ಕರಿಸಿದೆ.
“ಕಾಶ್ಮೀರವು ಪ್ರತ್ಯೇಕ ಧ್ವಜವನ್ನು ಹೊಂದುವುದು ಸಾಧ್ಯವೆಂದಾದರೆ ನಾಗಾಲ್ಯಾಂಡಿಗೆ ಅದೇಕೆ ಸಾಧ್ಯವಾಗದು. ಚೀನ ಕೂಡ ಮಕಾವು, ಹಾಂಕಾಂಗ್ ಮತ್ತು ತೈವಾನ್ ಗೆ ಪ್ರತ್ಯೇಕ ಧ್ವಜವನ್ನು ನೀಡಿದೆ’ ಎಂದು ಕೇಂದ್ರ ಸರಕಾರದೊಂದಿಗಿನ ಮಾತುಕತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ಎನ್‌ಸಿಸಿಎನ್-ಐಎಂ ಕೇಂದ್ರ ಘಟಕದ ನಾಯಕ ವಿ ಎಸ್ ಆತೇಮ್ ಹೇಳಿರುವುದನ್ನು ಹಿಂದುಸ್ಥಾನ್ ಟೈಮ್ಸ್ ಉಲ್ಲೇಖೀಸಿ ವರದಿ ಮಾಡಿದೆ.
ಎನ್‌ಸಿಸಿಎನ್-ಐಎಂ ಆಗ್ರಹಿಸಿರುವ ಇತರ ಮುಖ್ಯ ಬೇಡಿಕೆಗಳೆಂದರೆ – ಪ್ರತ್ಯೇಕ ಸಂವಿಧಾನ, ಅವಳಿ ಪೌರತ್ವ, ಮತ್ತು ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ನಾಗಾ ಜನರು ವಾಸಿಸಿಕೊಂಡಿರುವ ಪ್ರದೇಶಗಳನ್ನು ಒಗ್ಗೂಡಿಸಿ “ನಾಗಾಲಿಂ’ ಎಂಬ ಹೆಸರಿನ ನೂತನ ರಾಜ್ಯ ರಚನೆ. ಈ ಪೈಕಿ ಈ ಕೊನೇಯ ಬೇಡಿಕೆಯನ್ನು ಸದ್ಯಕ್ಕೆ ನನೆಗುದಿಗೆ ಹಾಕುವ ನಿರೀಕ್ಷೆ ಇದೆ. ಕಾರಣ ಇದಕ್ಕೆ ಇತರ ರಾಜ್ಯಗಳಿಂದ ತೀವ್ರವಾದ ವಿರೋಧವಿದೆ.
-ಉದಯವಾಣಿ