ಕೇರಳ: ತನ್ನ ವಯಸ್ಸಾದ ಪೋಷಕರ ಆಧಾರ್ ಕಾರ್ಡ್ ಮಾಡಿಸಲು ಪ್ರಯತ್ನಪಟ್ಟು ಮಗ ಹೈರಾಣಾಗಿ ಹೋಗಿದ್ದರು. ಕೊನೆಗೆ ಆ ವ್ಯಕ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಚೇರಿಗೆ ಪತ್ರ ಬರೆದು ತಮಗಾಗುತ್ತಿರುವ ಅವ್ಯವಸ್ಥೆ ಬಗ್ಗೆ ತಿಳಿಸಿದ್ದರು. ಅಚ್ಚರಿ ಎಂಬಂತೆ ಅವರ ಕೆಲಸ ಸಲೀಸಾಗಿ ಆಗಿರುವ ಘಟನೆ ನಡೆದಿರುವುದಾಗಿ ಪ್ರಮುಖ ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಆಧಾರ್ ಟೀಮ್ ಮನೆಗೆ ಹಾಜರ್!
ಕೇರಳದ ರಾಜಾ ಶಿವರಾಮ್ ಎಂಬವರ ತಂದೆ (90), ತಾಯಿ (83ವರ್ಷ)ಗೆ ತುಂಬಾ ವಯಸ್ಸಾಗಿತ್ತು. ಹಾಗಾಗಿ ಅವರಿಗೆ ಖುದ್ದಾಗಿ ಆಧಾರ್ ಸೆಂಟರ್ ಗೆ ಭೇಟಿ ನೀಡಲು ದೈಹಿಕವಾಗಿ ಅಸಾಧ್ಯವಾಗಿತ್ತು. ಪೋಷಕರಿಗೆ ಆಧಾರ್ ಕಾರ್ಡ್ ಮಾಡಿಸುವ ಹಿನ್ನೆಲೆಯಲ್ಲಿ ಹಲವು ರೀತಿಯಲ್ಲಿ ಪ್ರಯತ್ನಿಸಿದ್ದರು ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಾಗಿರಲಿಲ್ಲವಾಗಿತ್ತು.
ಕೊನೆಗೆ ಕಳೆದ ಗುರುವಾರ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದು ತಿಳಿಸಿದ್ದರು. ಭಾನುವಾರವೇ ದಿಢೀರ್ ಅಂತ ಆಧಾರ್ ಟೀಮ್ ಪಾಲಕ್ಕಾಡ್ ನಲ್ಲಿರುವ ರಾಜಾ ಶಿವರಾಮ್ ಅವರ ಮನೆಗೆ ಕಂಪ್ಯೂಟರ್, ವೆಬ್ ಕ್ಯಾಮ್, ಫಿಂಗರ್ ಪ್ರಿಂಟ್ ಮೆಶಿನ್, ಐ ಸ್ಕ್ಯಾನರ್ ರೆಕಾರ್ಡಿಂಗ್ ಬಯೋಮೆಟ್ರಿಕ್ ಮೆಶಿನ್ ಎಲ್ಲ ತೆಗೆದುಕೊಂಡು ಬಂದಿದ್ದರು. ಬಳಿಕ ಇಬ್ಬರು ವೃದ್ಧರ ಆಧಾರ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು ಎಂದು ವರದಿ ತಿಳಿಸಿದೆ.
ಆಧಾರ್ ಕಾರ್ಡ್ ನೀಡದ ಕುರಿತು ಪಿಎಂಓ ಕಚೇರಿಗೆ ದೂರು ಸಲ್ಲಿಸಿದ ನಿಮಿಷದೊಳಗೆ ದೂರಿನ ಸಂಖ್ಯೆಯನ್ನು ಇ ಮೇಲ್ ತಮಗೆ ತಲುಪಿತ್ತು ಎಂದು ಶಿವರಾಂ ತಿಳಿಸಿದ್ದಾರೆ. ಅಲ್ಲದೇ ಒಂದು ವಾರದೊಳಗೆ ಆಧಾರ್ ಕಾರ್ಡ್ ಡಿಜಿಟಲ್ ಪ್ರತಿ ದೊರೆಯುವುದಾಗಿ ಪಿಎಂಓ ಕಚೇರಿ ತಿಳಿಸಿದೆ ಎಂದು ವರದಿ ವಿವರಿಸಿದೆ.
ಪ್ರಧಾನಿ ಕಾರ್ಯಾಲಯದ ಈ ನಡೆ ನನಗಂತೂ ಅದ್ಭುತ ಎನಿಸಿದೆ. ನನ್ನ ತಂದೆ ತಾಯಿಯೊಂದಿಗೆ ನಾನು ಕೊಯಮತ್ತೂರಿಗೆ ಹೋಗಿ ನೆಲೆಸುವವನಿದ್ದೆ. ಹಲವು ಕಾರಣಗಳಿಗೆ ಅವರಿಬ್ಬರ ಆಧಾರ್ ಬೇಕೇ ಬೇಕಾಗಿತ್ತು. ಆ ಕೆಲಸವನ್ನು ಪ್ರಧಾನಿ ಕಾರ್ಯಾಲಯ ತುಂಬಾ ಸಲೀಸಾಗಿ ಪೂರ್ಣಗೊಳಿಸಿದೆ ಎಂದು ಶಿವರಾಮ್ ಸಂತಸ ವ್ಯಕ್ತಪಡಿಸಿದ್ದಾರೆ.
-ಉದಯವಾಣಿ