ಬೆಂಗಳೂರು: ಕೂಡ್ಲಗಿ ಡಿವೈಎಸ್‌ಪಿ ಅನುಪಮಾ ಶಣೈ ಅವರ ವರ್ಗಾವಣೆ ವಿವಾದಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಶನಿವಾರ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿಗೆ ಸೂಚಿಸಿದೆ.
ವರ್ಗಾವಣೆ ವಿವಾದದಲ್ಲಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರ ಪಾತ್ರವೇನು ಎಂಬುದರ ಬಗ್ಗೆ ವಿವರಣೆ ನೀಡುವಂತೆ ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅವರಿಗೆ ಸೂಚಿಸಿದೆ.
ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಡಿವೈಎಸ್‌ಪಿಯನ್ನು ನಾನೇ ವರ್ಗಾವಣೆ ಮಾಡಿಸಿದೆ ಎಂದು ಪರಮೇಶ್ವರ್ ನಾಯ್ಕ್ ಅವರು ಕಾರ್ಯಕರ್ತರ ಎದುರು ಹೇಳಿಕೊಂಡಿರುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ವಿವಾದದ ಕಾವು ಹೆಚ್ಚಲು ಕಾರಣವಾಗಿದೆ. ಇನ್ನು ಪ್ರತಿಪಕ್ಷಗಳು ಸಹ ಪ್ರಮುಖ ಅಸ್ತ್ರವನ್ನಾಗಿ ಬಳಸಲು ಮುಂದಾಗಿವೆ.
ಈ ಮಧ್ಯೆ, ವಿಧಾನ ಸಭೆ ಉಪ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಚುನಾವಣೆಯಲ್ಲಿ ಪಕ್ಷಕ್ಕಾಗುವ ಮುಜುಗರ ಮತ್ತು ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ನಾಯ್ಕ್ ಅವರ ರಾಜೀನಾಮೆ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ.