ರಾಷ್ಟ್ರೀಯ

ನಿತೀಶ್ ಗೆ ಅಭಿನಂದಿಸಿದ ಮೋದಿ : ಫಲಿತಾಂಶದ ಬಗ್ಗೆ ರಾಹುಲ್ , ಶಿವಸೇನೆ ಪ್ರತಿಕ್ರಿಯೆ

Pinterest LinkedIn Tumblr

rahulನ.8-ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೈರಿ ಬಾರಿಸಿರುವ ಮಹಾಮೈತ್ರಿ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿಗೆ ಪ್ರಧಾನಿ ನರೇಂದ್ರಮೋದಿ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.

ಶಿವಸೇನೆ ಕುಟುಕು:
ಬಿಹಾರ ಚುನಾವಣೆಯ ಫಲಿತಾಂಶದಿಂದ ರಾಷ್ಟ್ರ ರಾಜಕಾರಣದಲ್ಲಿ ಹೊಸ ಗಾಳಿ ಬೀಸಲಿದೆ ಎಂದು ಹೇಳಿರುವ ಬಿಜೆಪಿ ಮಿತ್ರಪಕ್ಷ ಶಿವಸೇನೆ, ಈ ಫಲಿತಾಂಶದಿಂದ ಕೂಟದ ನಾಯಕನ ಕುಸಿದ ಜನಪ್ರಿಯತೆಯ ದರ್ಶನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳದೆ ಕುಟುಕಿದೆ. ಅಷ್ಟೇ ಅಲ್ಲ, ಒಂದು ವೇಳೆ ಮಹಾರಾಷ್ಟ್ರದಲ್ಲಿ ಈಗ ಚುನಾವಣೆ ನಡೆದರೆ ಇದೇ ಫಲಿತಾಂಶ ಬರಲಿದೆ ಎಂದು ಸೇನಾ ನಾಯಕ ಸಂಜಯ್‌ರಾವತ್ ಹೇಳಿದ್ದಾರೆ.

ಬಿಹಾರ ಜನತಪ್ಪು ಮಾಡಿದ್ದಾರೆ:

ಬಿಹಾರದ ಜನತೆ ತಪ್ಪು ಮಾಡಿ ಬಿಟ್ಟರು. ಬಿಜೆಪಿ ಗೆದ್ದಿದ್ದರೆ ಆ ರಾಜ್ಯ ಅಭಿವೃದ್ದಿ ಹೊಂದುತ್ತಿತ್ತು. ಮತ್ತೆ ಬಿಹಾರದ ಜನ ಹಳೇ ಸರ್ಕಾರವನ್ನೇ ಚುನಾಯಿಸಿ ದೊಡ್ಡ ತಪ್ಪು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಅಸಹಿಷ್ಣುತೆ ಪಾಠ:
ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ಹೀನಾಯ ಸೋಲು ಅನುಭವಿಸಿರುವುದರಲ್ಲಿ ಅಸಹಿಷ್ಣುತೆಯ ಪ್ರಭಾವವಿದೆ. ಇದನ್ನು ಬಿಜೆಪಿ ನಾಯಕರು ಮನಗಾಣಬೇಕು. ನಮ್ಮ ದೇಶ ಅಸಹಿಷ್ಣುತೆಯನ್ನು ಸಹಿಸುವುದಿಲ್ಲ. ಹಾಗಾಗಿಯೇ ಮಹಾ ಮೈತ್ರಿಕೂಟ ಪ್ರಚಂಡ ಜಯಭೈರಿ ಬಾರಿಸಿದೆ. ಮುಖ್ಯಮಂತ್ರಿ ನಿತೀಶ್‌ಕುಮಾರ್ ಹಾಗೂ ಲಾಲೂ ಪ್ರಸಾದ್ ಯಾದವ್‌ರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಏಕತೆಯ ಜಯ:
ಬಿಹಾರದಲ್ಲಿ ಎನ್‌ಡಿಎ ನೆಲಕಚ್ಚಿ ಮಹಾಮೈತ್ರಿ ಪ್ರಚಂಡ ಗೆಲುವು ಸಾಧಿಸಿರುವುದು ದೇಶದಲ್ಲಿನ ಜನತೆಯ ಏಕತೆಯ ಜಯ ಎಂದು ಬಣ್ಣಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ದೇಶದ ಜನ ಯಾವತ್ತೂ ಸಮಾಜ ವಿಭಜಿಸುವ ಶಕ್ತಿಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಪ್ರಜಾಸತ್ತೆಯ ಗೆಲುವು: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಹಾಗೂ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್‌ಯಾದವ್ ನೇತೃತ್ವದ ಮಹಾಮೈತ್ರಿ ಸಾಧಿಸಿರುವ ಗೆಲುವು ಈ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಗೆಲುವಾಗಿದೆ ಎಂದು ಇತ್ತೀಚೆಗೆ ಬಿಜೆಪಿಯಿಂದ ದೂರ ಸರಿಯುತ್ತಿರುವ ಅದೇ ಪಕ್ಷದ ಸಂಸದ ಮತ್ತು ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಗೆ ಎಚ್ಚರಿಕೆ:
ಬಿಹಾರದಲ್ಲಿ ಹೀನಾಯ ಸೋಲು ಕಂಡಿರುವ ಪರಿಸ್ಥಿತಿ ಎನ್‌ಡಿಎ ಸರ್ಕಾರ ಹಾಗೂ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ. ಬಿಹಾರ ಜನತೆ ನೀಡಿರುವ ಈ ಸಂದೇಶವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

Write A Comment