ಮನೋರಂಜನೆ

ಸಾಯಿಭಕ್ತರು ನೋಡಬೇಕಾದ ಚಿತ್ರ

Pinterest LinkedIn Tumblr

Sri-sai-(1)ಚಿತ್ರ  :  ಶ್ರೀ ಸಾಯಿ
ನಿರ್ದೇಶನ        : ಸಾಯಿಪ್ರಕಾಶ್‌
ನಿರ್ಮಾಣ        : ಟಿ.ಎ.ಸೆಂದಿಲ್‌
ತಾರಗಣ        : ಸಾಯಿಪ್ರಕಾಶ್‌, ಶ್ರೀನಿವಾಸಮೂರ್ತಿ, ಹರೀಶ್‌ರಾಜ್‌, ನವೀನ್‌ಕೃಷ್ಣ, ಜೈ ಜಗದೀಶ್‌, ದಿಶಾಪೂವಯ್ಯ, ದೀಪಾಗೌಡ, ರಮೇಶ್‌ಭಟ್‌ ಇತರರು.

“ಆ ಬಾಬಾ ನಂಬಿದವರನ್ನ ಯಾವತ್ತೂ ಕೈ ಬಿಡೋದಿಲ್ಲ…’ ಎಂಬ ಸಂಭಾಷಣೆಯೊಂದಿಗೆ “ಶ್ರೀ ಸಾಯಿ’ ಚಿತ್ರದ ಕಥೆ ಬಿಚ್ಚಿಕೊಳ್ಳುತ್ತೆ. ಚಿತ್ರದುದ್ದಕ್ಕೂ ಅಪಾರವಾದ ಭಕ್ತಿ, ನಂಬಿಕೆ ಮತ್ತು ಆರಾಧನೆ ವಿಷಯಗಳೇ ತುಂಬಿವೆ. ಹಾಗಾಗಿ ಈಗಿನ ಹೊಡಿ, ಬಡಿ, ಹಾಡು, ಕುಣಿ, ಆತ್ಮ, ಪ್ರೇತಾತ್ಮ ಚಿತ್ರಗಳ ನಡುವೆ ಹೀಗೊಂದು ಭಕ್ತಿಪ್ರಧಾನ ಚಿತ್ರ ನೋಡುಗರನ್ನು ಭಕ್ತಿಪರವಶರನ್ನಾಗಿಸುತ್ತೆ.

ಅಲ್ಲಲ್ಲಿ ಭಾವುಕತೆಯನ್ನೂ ಹೆಚ್ಚಿಸುತ್ತೆ. ಚಿತ್ರ ನೋಡಿ ಹೊರಬಂದವರಿಗೆ ಬಾಬಾ ಮೇಲಿರುವ ಭಕ್ತಿ ಮತ್ತಷ್ಟು ತೀವ್ರಗೊಳ್ಳುತ್ತೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಅಷ್ಟರಮಟ್ಟಿಗೆ ನಿರ್ದೇಶಕ ಸಾಯಿಪ್ರಕಾಶ್‌ ಚಿತ್ರವನ್ನು ಶ್ರದ್ಧೆಯಿಂದ ಕಟ್ಟಿಕೊಟ್ಟಿದ್ದಾರೆ. ಆ ಕಾರಣಕ್ಕೆ “ಶ್ರೀ ಸಾಯಿ’ ಮನಸ್ಸಲ್ಲಿ ಉಳಿಯುವ ಭಕ್ತಿಪ್ರಧಾನ ಚಿತ್ರ ಎನಿಸಿಕೊಳ್ಳುತ್ತೆ. ನಿರ್ಮಾಪಕ ಟಿ.ಎ.ಸೆಂದಿಲ್‌ ಬರೆದಿರುವ ಕಥೆ ಚೆನ್ನಾಗಿದೆ. ಅದಕ್ಕೆ ಬಿಗಿ ಹಿಡಿತದ ಚಿತ್ರಕಥೆ ಬರೆದು ನಿರೂಪಿಸಿರುವ ನಿರ್ದೇಶಕರ ಕೆಲಸವೂ ಸೊಗಸಾಗಿದೆ.

ಈ ಚಿತ್ರ ಖುಷಿಕೊಡುವುದಕ್ಕೆ ಮತ್ತೂಂದು ಕಾರಣ, ನಿರ್ದೇಶಕರು ಆಯ್ಕೆ ಮಾಡಿರುವ ಪಾತ್ರಗಳು. ಪ್ರತಿಯೊಂದು ಪಾತ್ರಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವುದು ಚಿತ್ರದ ಕಥೆ ಮತ್ತು ಪಾತ್ರಕ್ಕೆ ಪೂರಕವಾಗಿದೆ. ಶಿರಡಿ ಶ್ರೀ ಸಾಯಿಬಾಬಾ ಅವರನ್ನು ನಂಬಿದರೆ ಎಂದೂ ಆತ ಕೈ ಬಿಡುವುದಿಲ್ಲ. ನಂಬದವರನ್ನೂ ಸಹ ನಂಬುವಂತೆ ಮಾಡುವ ಶಕ್ತಿ ಆತನಲ್ಲಿದೆ ಎಂಬುದೇ ಚಿತ್ರದ ಸಾರಾಂಶ. ಈ ಚಿತ್ರದಲ್ಲಿ ತಪ್ಪುಗಳನ್ನು ಹುಡುಕುವುದು ಕಷ್ಟ. ಕಾರಣ, ಇಲ್ಲಿ ನಾಲ್ಕು ಟ್ರ್ಯಾಕ್‌ಗಳಲ್ಲಿ ಕಥೆ ಸಾಗುತ್ತಾ ಹೋಗುತ್ತೆ.

ಆ ನಾಲ್ಕು ಟ್ರ್ಯಾಕ್‌ನಲ್ಲೂ ಸಾಯಿಬಾಬಾರ ಮಹಿಮೆಯೇ ಕಾಣಸಿಗುತ್ತಾ ಹೋಗುತ್ತೆ. ಬಾಬಾನ ನಂಬಿದವರಿಗೆ ಭಯವಿಲ್ಲ, ನಂಬದವರಿಗೆ ಬದುಕಿಲ್ಲ ಎಂಬಂತಹ ಸಂದೇಶ ಇಲ್ಲಿದೆ. ಆರಂಭದ ವೇಗವನ್ನು ಅಂತ್ಯದವರೆಗೂ ಕಾಪಾಡಿಕೊಂಡು ಹೋಗಿರುವ ನಿರ್ದೇಶಕರ ಶ್ರಮ ಇಲ್ಲಿ ಎದ್ದು ಕಾಣುತ್ತೆ. ಚಿತ್ರ ನೋಡಿಸಿಕೊಂಡು ಹೋಗುವುದಕ್ಕೆ ಮತ್ತೂಂದು ಮುಖ್ಯ ಕಾರಣ, ಮನಸ್ಸಿಗೆ ಹಿತವೆನಿಸುವ ಹಾಡುಗಳು.

ಚಿತ್ರದ ಸಾಹಿತ್ಯ ಮತ್ತು ಅದಕ್ಕೆ ಪೂರಕವೆನಿಸುವಂತಹ ಸಂಗೀತ ನೀಡಿರುವ ಬಲರಾಮ್‌ ಅವರ ಭಕ್ತಿಪೂರ್ವಕ ಕೆಲಸ ಇಲ್ಲಿ ವ್ಯರ್ಥವಾಗಿಲ್ಲ. ಎಲ್ಲವೂ ಸರಿ, ಆದರೆ, ಚಿತ್ರದಲ್ಲಿ ಲಂಗಸ್ವಾಮಿಯಾಗಿ ಎಂಟ್ರಿಕೊಡುವ ಓಂಪ್ರಕಾಶ್‌ರಾವ್‌ ಆವರ ದೃಶ್ಯಗಳು ಚಿತ್ರಕ್ಕೆ ಬೇಕಿರಲಿಲ್ಲವೇನೋ? ಹಾಸ್ಯಕ್ಕಾಗಿ ಆ ದೃಶ್ಯ ಇಡಲಾಗಿದೆಯಾದರೂ, ಆ ಟ್ರ್ಯಾಕ್‌ನಿಂದಾಗಿ ಗಂಭೀರವಾಗಿ ಸಾಗುವ ಸಿನಿಮಾಕ್ಕೆ ಕೊಂಚ ಅಡಚಣೆ ಅನ್ನುವುದು ದಿಟ. ಅದನ್ನು ಹೊರತುಪಡಿಸಿದರೆ, “ಶ್ರೀ ಸಾಯಿ’ಯನ್ನು ಕೊಂಡಾಡಲು ಅಡ್ಡಿಯಿಲ್ಲ. ಸಾಯಿಪ್ರಕಾಶ್‌ ಸಿನಿಮಾ ಅಂದಮೇಲೆ ಕಣ್ತುಂಬಿಸುವ ಕೆಲಸ ಅವರಿಗೆ ಸಲೀಸು. ಅದು ಇಲ್ಲೂ ಸಾಗಿದೆ.

ಚಿಕ್ಕಂದಿನಿಂದಲೂ ಬಾಬಾ ಮೇಲೆ ಸೌಜನ್ಯ (ದಿಶಾಪೂವಯ್ಯ)ಗೆ ಭಕ್ತಿ. ಆದರೆ, ಪತಿ ರಕ್ಷಿತ್‌ (ಹರೀಶ್‌ರಾಜ್‌)ಗೆ ದೇವರ ಮೇಲೆ ನಂಬಿಕೆ ಇರೋದಿಲ್ಲ. ದೇವರೆಂದರೆ ಮಾರುದ್ದ ದೂರ ಹೋಗುವ ರಕ್ಷಿತ್‌, ಹಲವು ಸಮಸ್ಯೆಗಳಿಗೆ ಸಿಲುಕಿ ಬಿಜಿನೆಸ್‌ನಲ್ಲಿ ಲಾಸ್‌ ಆಗಿ ಬೀದಿಗೆ ಬೀಳುತ್ತಾನೆ. ಅತ್ತ ಇರುವ ಒಬ್ಬಳೇ ಮಗಳಿಗೆ ಹೃದಯ ಸಂಬಂಧಿ ಖಾಯಿಲೆ ಸಮಸ್ಯೆಯೂ ಎದುರಾಗುತ್ತೆ.

ಕೊನೆಗೆ ಎಲ್ಲರೂ ಶಿರಡಿ ಬಾಬಾ ಮೊರೆ ಹೋಗುತ್ತಾರೆ. ಇರುವ ಸಮಸ್ಯೆಗಳೆಲ್ಲವೂ ದೂರವಾಗುತ್ತವೆ. ಇಂತಹ ಇನ್ನು ಮೂರು ಟ್ರ್ಯಾಕ್‌ಗಳು ಪರದೆ ಮೇಲೆ ಬಂದು ಹೋಗುತ್ತವೆ. ಅಲ್ಲೂ ಸಹ ಬಾಬಾ ಮಹಿಮೆಯೇ ಹೈಲೈಟ್‌ ಆಗುತ್ತೆ. ಬಾಬಾ ಭಕ್ತರನ್ನು ಕಡೆಗಣಿಸಿದರೆ, ಅವರಿಗೆ ತೊಂದರೆ ಕೊಟ್ಟರೆ ಏನೇನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತೆ ಎಂಬುದನ್ನೂ ಇಲ್ಲಿ ಸೂಕ್ಷ್ಮವಾಗಿ ತೋರಿಸಲಾಗಿದೆ. ಅವೆಲ್ಲವನ್ನು ತಿಳಿದುಕೊಳ್ಳಬೇಕಾದರೆ, ಒಮ್ಮೆ “ಶ್ರೀ ಸಾಯಿ’ ನೋಡಲ್ಲಡ್ಡಿಯಿಲ್ಲ.

ಚಿತ್ರದಲ್ಲಿ ಶ್ರೀನಿವಾಸ್‌ಮೂರ್ತಿ ಬಾಬಾ ಭಕ್ತರಾಗಿ ಹಾಡಿ, ಕುಣಿದು, ಅತ್ತೂ ಕರೆದು ಇಷ್ಟವಾಗುತ್ತಾರೆ. ಆಗಾಗ ಕಾಣಿಸಿಕೊಂಡರೂ ಸಾಯಿಪ್ರಕಾಶ್‌ ಸಾಯಿಬಾಬಾ ಪಾತ್ರದಲ್ಲಿ ನೆನಪಲ್ಲುಳಿಯುತ್ತಾರೆ. ದಿಶಾಪೂವಯ್ಯ, ಹರೀಶ್‌ರಾಜ್‌, ನವೀನ್‌ಕೃಷ್ಣ ಪಾತ್ರಕ್ಕೆ ಮೋಸವಾಗಿಲ್ಲ. ದೀಪಾಗೌಡ ಪಾತ್ರ ಚೆನ್ನಾಗಿದೆ. ಆದರೆ, ಅವರು ಇನ್ನಷ್ಟು ಧಮ್‌ ಕಟ್ಟಬೇಕಿತ್ತು. ಉಳಿದಂತೆ ಜೈಜಗದೀಶ್‌, ರಮೇಶ್‌ಭಟ್‌ ಇರುವಷ್ಟು ಕಾಲ ಇಷ್ಟ ಅನಿಸುತ್ತಾರೆ. ಶ್ರೀ ಚಂದ್ರು ಸಂಭಾಷಣೆ ಚಿತ್ರಕಥೆಗೆ ಪೂರಕವಾಗಿದೆ. ಹಿನ್ನೆಲೆ ಸಂಗೀತಕ್ಕೂ ಇದೇ ಮಾತು ಅನ್ವಯ. ಜೆ.ಜಿ.ಕೃಷ್ಣ ಕ್ಯಾಮೆರಾದಲ್ಲಿ ಲವಲವಿಕೆ ಇದೆ.
-ವಿಜಯ್‌ ಭರಮಸಾಗರ
-ಉದಯವಾಣಿ

Write A Comment